ಸಾರಾಂಶ
ಮುಧೋಳ ತಾಲೂಕಿನಲ್ಲಿ ಹರಿದಿರುವ ಘಟಪ್ರಭ ನದಿ ಪ್ರವಾಹಕ್ಕೆ ನದಿ ಪಾತ್ರದ ಹೊಲ-ಗದ್ದೆಗಳು ಜಲಾವೃತಗೊಂಡು ರೈತರು ಬೆಳೆದ ಬೆಳೆಯು ಈಗ ಸಂಪೂರ್ಣ ಕೊಳೆತು ಹೋಗಿದೆ. ಇದರಿಂದ ಸಾವಿರಾರು ಸಂಖ್ಯೆಯ ರೈತರು ಬೆಳೆನಷ್ಟ ಅನುಭವಿಸುವಂತಾಗಿದೆ. ಹಾನಿಗೊಳಗಾದ ಬೆಳೆಗಳಿಗೆ ಯೋಗ್ಯ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ದುಂಡಪ್ಪ ಯರಗಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಮುಧೋಳ ತಾಲೂಕಿನಲ್ಲಿ ಹರಿದಿರುವ ಘಟಪ್ರಭ ನದಿ ಪ್ರವಾಹಕ್ಕೆ ನದಿ ಪಾತ್ರದ ಹೊಲ-ಗದ್ದೆಗಳು ಜಲಾವೃತಗೊಂಡು ರೈತರು ಬೆಳೆದ ಬೆಳೆಯು ಈಗ ಸಂಪೂರ್ಣ ಕೊಳೆತು ಹೋಗಿದೆ. ಇದರಿಂದ ಸಾವಿರಾರು ಸಂಖ್ಯೆಯ ರೈತರು ಬೆಳೆನಷ್ಟ ಅನುಭವಿಸುವಂತಾಗಿದೆ. ಹಾನಿಗೊಳಗಾದ ಬೆಳೆಗಳಿಗೆ ಯೋಗ್ಯ ಬೆಳೆ ಪರಿಹಾರ ನೀಡಬೇಕು ಎಂದು ರೈತ ಮುಖಂಡ ದುಂಡಪ್ಪ ಯರಗಟ್ಟಿ ಹೇಳಿದರು.ಶನಿವಾರ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿ, ಘಟಪ್ರಭಾ ನದಿಯ ಪ್ರವಾಹದಿಂದ ತಾಲೂಕಿನ ನದಿ ತೀರದ ಗ್ರಾಮಗಳು, ಜಮೀನುಗಳು ಜಲಾವೃತಗೊಂಡಿವೆ. ಇದೇ ರೀತಿ ಸತತ ನಾಲ್ಕು ವರ್ಷದಿಂದ ಪ್ರವಾಹದಿಂದ ರೈತರ ಬೆಳೆಗಳು ಜಲಾವೃತಗೊಂಡು ನೂರಾರು ರೈತರು ಸಂಕಷ್ಟ ಅನುಭವಿಸುತ್ತಲೆ ಇದ್ದಾರೆ. ಇದು ಗಾಯದ ಮೇಲೆ ಮತ್ತೆ ಬರೆ ಎಳದಂತಾಗಿದೆ ಎಂದರು.
ರೈತ ಮುಖಂಡರಾದ ನಾರಾಯಣ ಹವಾಲ್ದಾರ ಮತ್ತು ಸುರೇಶ ರಾಮತೀರ್ಥ ಇತರರು ಮಾತನಾಡಿ, ಪ್ರತಿ ಎಕರೆ ಕಬ್ಬು ಬೆಳೆದ ರೈತನಿಗೆ ₹1 ಲಕ್ಷ, ಇತರೆ ಬೆಳೆಗಳಿಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ ಅವರು ಪ್ರವಾಹದಿಂದ ಮುಳಗಡೆಯಾದ ಗ್ರಾಮ ಮತ್ತು ಮನೆಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು. ಕಾತರಕಿ-ಕಲಾದಗಿ ಮಧ್ಯೆದ ಸೇತುವೆಯನ್ನು 50 ಮೀಟರ್ ಅಗಲೀಕರಣಗೊಳಿಸಿ ತುರ್ತುಕ್ರಮ ಕೈಗೊಳ್ಳಬೇಕು. ವಿದ್ಯುತ್ ಲೈನ್ ಗಳನ್ನು ಮತ್ತು ಟಿಸಿಗಳನ್ನು ಕೂಡಲೇ ರಿಪೇರಿ ಮಾಡಿ ಮೋಟರ್ ಪಂಪಸೆಟ್‌ಗಳಿಗೆ ವಿದ್ಯುತ್ ಒದಗಿಸಬೇಕು. ಹಾನಿಗೊಳಗಾಗಿರುವ ರೈತರ ಪಂಪಸೆಟ್ ಪರಿಹಾರ ನೀಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ ಅವರು ರೈತರ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳದಿದ್ದರೆ ಆ.7 ರಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನೂರಾರು ರೈತರು ಇದ್ದರು.ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸುವ ಮೊದಲು ಸ್ಥಳೀಯ ಜಿ.ಎಲ್.ಬಿ.ಸಿ ಪ್ರವಾಸಿ ಮಂದಿರದ ಆವರಣದಲ್ಲಿ ರೈತರ ಸಭೆ ನಡೆಸಿದ ಬಳಿಕ ರೈತರೆಲ್ಲರು ಬೈಕ್ ಮೂಲಕ ತಹಸೀಲ್ದಾರರ ಕಚೇರಿಗೆ ತೆರಳಿ ಮನವಿ ನೀಡಲಾಯಿತು.