ಸಾರಾಂಶ
ಅಶೋಕ ಡಿ. ಸೊರಟೂರ
ಲಕ್ಷ್ಮೇಶ್ವರ: ಗದಗ- ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪಾಳಾ- ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ರಾಜ್ಯಭಾರವಾಗಿದ್ದು, ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿದೆ.ಲಕ್ಷ್ಮೇಶ್ವರ ಪಟ್ಟಣದಿಂದ 40 ಕಿಮೀ ದೂರದ ಗದಗ ನಗರ ಮುಟ್ಟುವುದೆಂದರೆ ಜೀವ ಕೈಯಲ್ಲಿ ಬಂದ ಅನುಭವವಾಗುತ್ತದೆ ಎನ್ನುತ್ತಾರೆ ವಾಹನ ಸವಾರರು.
ಲಕ್ಷ್ಮೇಶ್ವರ- ಗದಗ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ದಾರಿ ಹುಡುಕುವುದೇ ಕಷ್ಟಕರವಾಗಿದೆ. ಎಲ್ಲಿ ನೋಡಿದಲ್ಲಿ ಗುಂಡಿಗಳದ್ದೇ ದರ್ಬಾರ್. ವಾಹನ ಸವಾರರು ಪ್ರಾಣ ಪಣಕ್ಕಿಟ್ಟು ಈ ಹೆದ್ದಾರಿಯಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಉಂಟಾಗಿರುವುದು ಯಾರ ತಪ್ಪಿಗಾಗಿ ಎನ್ನುವುದು ಯಕ್ಷಪ್ರಶ್ನೆಯಾಗಿದೆ.ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪ್ರತಿ ತಿಂಗಳಿಗೆ ಲಕ್ಷಾಂತರ ಸಂಬಳ ಪಡೆದರೂ ರಸ್ತೆ ದುರಸ್ತಿಗೆ ಆಸಕ್ತಿ ವಹಿಸುತ್ತಿಲ್ಲ. ಇನ್ನು ರಾಜಕಾರಣಿಗಳಿಗೆ ಅಮೂಲ್ಯ ವೋಟು ನೀಡಿದ ತಪ್ಪಿಗಾಗಿ ಇಂಥ ಪರಿಸ್ಥಿತಿ ಎದುರಿಸಬೇಕಾಗಿದೆಯೇ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.
ಶಿರಹಟ್ಟಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಎಷ್ಟು ಛೀಮಾರಿ ಹಾಕಿದರೂ ಸ್ಪಂದಿಸುವುದಿಲ್ಲ ಎಂಬ ಹಂತಕ್ಕೆ ತಲುಪಿರುವುದು ನೋವಿನ ಸಂಗತಿ. ದಪ್ಪ ಚರ್ಮದ ಅಧಿಕಾರಿಗಳಿಗೆ ಹಾಗೂ ಜಿಲ್ಲೆಯ ರಾಜಕಾರಣಿಗಳಿಗೆ ಈ ರಸ್ತೆಯ ದುರಸ್ತಿ ಬೇಕಾಗಿಲ್ಲ. ಯಾಕೆಂದರೆ ಅವರು ಪ್ರತಿನಿತ್ಯ ಈ ರಸ್ತೆಯ ಮೇಲೆ ಸಂಚಾರ ಮಾಡುವುದಿಲ್ಲ. ಹೀಗಾಗಿ ಇದರ ಅಗತ್ಯ ಅವರಿಗಿಲ್ಲವೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಲಕ್ಷ್ಮೇಶ್ವರ- ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಗದಗ ನಗರದಿಂದ ಹಾವೇರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಸುಲಭ ಮಾರ್ಗವಾಗಿದ್ದರೂ ನಮ್ಮ ರಾಜಕೀಯ ನಾಯಕರಿಗೆ ಈ ರಸ್ತೆಯ ದುರಸ್ತಿಯ ಬಗ್ಗೆ ಯಾಕೆ ಅಷ್ಟೊಂದು ನಿರಾಸಕ್ತಿ ಎಂಬುದು ತಿಳಿಯುತ್ತಿಲ್ಲ.
ರಸ್ತೆಯಲ್ಲಿನ ಗುಂಡಿ ಮುಚ್ಚುವಲ್ಲಿ ಸರ್ಕಾರ ವಿಫಲವಾಗಿದೆ. ಕಳೆದ ಹಲವು ವರ್ಷಗಳಲ್ಲಿ ಹೆದ್ದಾರಿಯ ಗುಂಡಿಗಳು ಹಲವರ ಪ್ರಾಣ ಬಲಿ ಪಡೆದಿದ್ದರೂ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿಲ್ಲ. ಪ್ರತಿನಿತ್ಯ ಹಲವು ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ ಉದಾಹರಣೆಗಳು ಕಾಣಸಿಗುತ್ತವೆ.ಜನರ ಜೀವ ಉಳಿಸಿ: ಗದಗ- ಲಕ್ಷ್ಮೇಶ್ವರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಕಿತ್ತು ಹೋಗಿ ಗುಂಡಿಮಯವಾಗಿದೆ. ರಸ್ತೆಯ ತುಂಬೆಲ್ಲ ಮೊಳಕಾಲುದ್ದ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಹಾಗೂ ಸಾರ್ವಜನಿಕರು ಗುಂಡಿ ಮುಚ್ಚುವಂತೆ ನೂರಾರು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ. ಗುಂಡಿ ಮುಚ್ಚಿ ಜನರ ಪ್ರಾಣ ಉಳಿಸುವ ಕಾರ್ಯ ಮಾಡಬೇಕು ಎಂದು ವಕೀಲ ಬಸವರಾಜ ಬಾಳೇಶ್ವರಮಠ ತಿಳಇಸಿದರು.
ಸಮರ್ಪಕ ಉತ್ತರ ನೀಡದ ಎಇಇಈ ರಸ್ತೆಯ ದುರಸ್ತಿ ಕುರಿತಾಗಿ ಲೊಕೋಪಯೋಗಿ ಇಲಾಖೆಯ ಎಇಇ ಫಕ್ಕೀರೇಶ ಅವರೊಂದಿಗೆ ಪೋನ್ ಮೂಲಕ ಸಂಪರ್ಕಿಸಿದರೆ ಮಗನನ್ನು ಆಸ್ಪತ್ರೆಗೆ ತೋರಿಸಲು ಬಂದಿರುವೆ ಎನ್ನುವ ಉತ್ತರ ನೀಡಿ ಪೋನ್ ಕರೆ ಕಟ್ ಮಾಡಿದರು.