ಸಾರಾಂಶ
ಖಾಜು ಸಿಂಗೆಗೋಳ
ಇಂಡಿ : ಗಡಿಜಿಲ್ಲೆ ವಿಜಯಪುರ ಜಿಲ್ಲೆಗೆ ಇದುವರೆಗೂ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಹಲವಾರು ನಾಯಕರು ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾದರೂ, ಕೇಂದ್ರದಲ್ಲಿ ವಿಜಯಪುರ ಜಿಲ್ಲೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಇಂಡಿ ಮತಕ್ಷೇತ್ರ ಸ್ವಾತಂತ್ರ್ಯ ನಂತರ ಹೇಗೆ ಸಚಿವ ಸ್ಥಾನದಿಂದ ವಂಚಿತವಾಗಿದೆಯೋ ಹಾಗೆಯೇ ವಿಜಯಪುರ ಜಿಲ್ಲೆ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದಾಗಿನಿಂದ ಕೇಂದ್ರದಲ್ಲಿ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ಪಡೆದುಕೊಂಡಿಲ್ಲ. ಈ ಬಾರಿಯಾದರೂ ಜಿಲ್ಲೆಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನದ ಸಚಿವ ಸ್ಥಾನ ಸಿಗುತ್ತದೆ ಎನ್ನುವುದು ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿದೆ.
1952 ರಿಂದ ವಿಜಯಪುರ ಜಿಲ್ಲೆಯ ಸಂಸದ ಸ್ಥಾನದ ಚುನಾವಣೆ ಆರಂಭವಾಗಿದ್ದು, 2019ರವರೆಗೂ ಕೇಂದ್ರ ಸಂಪುಟದಲ್ಲಿ (ಕ್ಯಾಬಿನೆಟ್) ಸ್ಥಾನ ದೊರೆತಿಲ್ಲ. ಬಸನಗೌಡ ಪಾಟೀಲ ಯತ್ನಾಳ ಅವರು ಸಂಸದರಾದ ಮೇಲೆ ವಿಜಯಪುರ ಜಿಲ್ಲೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸ್ಥಾನ, ಬಳಿಕ ಸಂಸದರಾದ ರಮೇಶ ಜಿಗಜಿಣಗಿ ಅವರು ಕೇಂದ್ರ ಕುಡಿಯುವ ನೀರು, ನೈರ್ಮಲ್ಯ ಖಾತೆಯ ರಾಜ್ಯ ಸಚಿವರಾಗಿದ್ದರು. ಅದನ್ನು ಬಿಟ್ಟರೆ ಇಲ್ಲಿಯವರೆಗೆ 18 ಲೋಕಸಭಾ ಚುನಾವಣೆ ಎದುರಿಸಿರುವ ವಿಜಯಪುರ ಜಿಲ್ಲೆಗೆ ಕೇಂದ್ರದಲ್ಲಿ ಒಂದೇ ಒಂದು ಕ್ಯಾಬಿನೆಟ್‌ನಲ್ಲಿ ಸ್ಥಾನ ಸಿಕ್ಕಿಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದೀಗ ಮತ್ತೆ ಕೇಂದ್ರದಲ್ಲಿ ಬಿಜೆಪಿ ಚುಕ್ಕಾಣಿ ಹಿಡಿದಿದೆ. ಸಚಿವ ಸಂಪುಟದ ಖಾತೆಗಳ ಹಂಚಿಕೆ ಕಾರ್ಯ ನಡೆಯಲಿದ್ದು, ಈ ಬಾರಿಯಾದರೂ ವಿಜಯಪುರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುತ್ತಾರಾ ಎನ್ನುವುದು ಬಹುತೇಕ ಜನರ ನಿರೀಕ್ಷೆ ಇತ್ತು. ವಿಜಯಪುರ ಜಿಲ್ಲೆಯ ಸಂಸದರಾಗಿ ಬಿಜೆಪಿಯಿಂದಲೇ 4 ಬಾರಿ, 3 ಬಾರಿ ಇತರೆ ಪಕ್ಷಗಳಿಂದ ಸಂಸದರಾಗಿ ರಮೇಶ ಜಿಗಜಿಣಗಿ ಆಯ್ಕೆಯಾಗಿದ್ದಾರೆ. ಅವರಿಗೆ ವರಿಷ್ಠರು ಕ್ಯಾಬಿನೆಟ್ ಸಚಿವ ಸ್ಥಾನ ನೀಡಬೇಕು. ಈ ಮೂಲಕ ವಿಜಯಪುರ ಜಿಲ್ಲೆಗೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂಬುದು ಬಹಳಷ್ಟು ಜನರ ಒತ್ತಾಯವಾಗಿತ್ತು. ಆದರೂ ಈ ಒತ್ತಾಸೆ ಈಡೇರಲಿಲ್ಲ.
ಕಳೆದ 2004 ರಿಂದ ವಿಜಯಪುರ ಜಿಲ್ಲೆಯನ್ನು ಬಿಜೆಪಿ ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದು, ಬಸನಗೌಡ ಪಾಟೀಲ ಯತ್ನಾಳ ಅವರು ಎರಡು ಬಾರಿ, ರಮೇಶ ಜಿಗಜಿಣಗಿ ಬಿಜೆಪಿಯಿಂದ 3 ಬಾರಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಿದ್ದು, ಈ ಲೋಕಸಭೆ ಚುನಾವಣೆಯಲ್ಲಿ ನಾಲ್ಕನೇ ಬಾರಿಗೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರರಾಗಿದ್ದಾರೆ.
ವಿಜಯಪುರ ಜಿಲ್ಲೆ ಶೈಕ್ಷಣಿಕ, ಔದ್ಯೋಗಿಕ, ನೀರಾವರಿ, ಆರೋಗ್ಯ ಸೇರಿದಂತೆ ಹಲವು ರಂಗದಲ್ಲಿ ಹಿಂದೆ ಬಿದ್ದಿದ್ದು, ಜಿಲ್ಲೆ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಮೇಶ ಜಿಗಜಿಣಗಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಗೆ ಪ್ರಾಧಾನ್ಯತೆ ನೀಡಬೇಕು ಎಂಬುದು ಜಿಲ್ಲೆಯ ಜನರ ಒತ್ತಾಸೆ.
---------
ಕೋಟ್ 1)
ಸಂಸದ ರಮೇಶ ಜಿಗಜಿಣಗಿ ಅವರು 40 ವರ್ಷಗಳ ಸುಧೀರ್ಘ ರಾಜಕೀಯ ರಂಗದಲ್ಲಿ ಜನಸೇವೆ ಮಾಡಿ, ಅಜಾತ ಶತ್ರು ಎನಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯಿಂದ 4 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ ಜಿಲ್ಲೆಗೆ ಸಚಿವ ಸ್ಥಾನದಿಂದ ಅನ್ಯಾಯ ಆಗಿದ್ದನ್ನು ಸರಿಪಡಿಸಬೇಕು.- ರವಿ ವಗ್ಗೆ, ಬಿಜೆಪಿ ಕಾರ್ಯಕರ್ತ
----------
ವಿಜಯಪುರ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ಸತತ ನಾಲ್ಕು ಬಾರಿ ವಿಜಯಪುರ ಜಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ ಅವರಿಗೆ ಕೇಂದ್ರ ಕ್ಯಾಬಿನೆಟ್‌ನಲ್ಲಿ ಸ್ಥಾನ ನೀಡಬೇಕು. ಕಾಂಗ್ರೆಸ್ ಪಕ್ಷ ವಿಜಯಪುರ ಜಿಲ್ಲೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೇ ಅನ್ಯಾಯ ಮಾಡಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಸರಿ ಮಾಡಿ, ವಿಜಯಪುರ ಜಿಲ್ಲೆಗೆ ನ್ಯಾಯ ನೀಡಬೇಕು.
- ಶಿವಾನಂದ ಲಿಂಗದಳ್ಳಿ, ಬಿಜೆಪಿ ಮುಖಂಡ.
---------
ಸೋಲಿಲ್ಲದ ಸರದಾರ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿ ವಿಜಯಪುರ ಜಿಲ್ಲೆಯಿಂದ 4 ಬಾರಿ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿ ಆಜಾತಶತ್ರುವಾಗಿ ರಾಜಕಾರಣ ಮಾಡುತ್ತಿರುವ ಸಂಸದರು ರಮೇಶ ಜಿಗಜಿಣಗಿ. ಜಿಲ್ಲೆಯ ಹಿರಿಯ ನಾಯಕರಾದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿ, ವಿಜಯಪುರ ಜಿಲ್ಲೆಗೆ ನ್ಯಾಯ ಒದಿಗಿಸಿಕೊಡಬೇಕು.
- ಅನಿಲಗೌಡ ಬಿರಾದಾರ, ಬಿಜೆಪಿ ಮುಖಂಡ,ಇಂಡಿ
----------
ಕಾಂಗ್ರೆಸ್ ಇದ್ದಾಗಲೂ ಸಿಕ್ಕಿಲ್ಲ ಕ್ಯಾಬಿನೆಟ್ ದರ್ಜೆ
1952 ರಿಂದ 1998 ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಅಧಿಕಾರ ನಡೆಸಿದ್ದರೂ ಅಂದು 1952 ಹಾಗೂ 1962 ರಲ್ಲಿ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದ ರಾಜಾರಾಮ ದುಬೆ, 1971 ರಿಂದ 1980 ವರೆಗೆ ಸಂಸದರಾಗಿ ಆಯ್ಕೆಯಾಗಿದ್ದ ಚೌದರಿ ಹಾಗೂ 1989 ರಿಂದ 1991 ವರೆಗಿನ ಅವಧಿಯಲ್ಲಿ ಸಂಸದರಾಗಿ ಆಯ್ಕೆಯಾಗಿರುವ ಶಿವಶಂಕರಪ್ಪ ಗುರಡ್ಡಿ ಅವರಿಗಾಗಲಿ,1998ರಲ್ಲಿ ಕಾಂಗ್ರೆಸ್‌ನ ಕೊನೆಯ ಸಂಸದರಾಗಿರುವ ಎಂ.ಬಿ.ಪಾಟೀಲ ಅವರಿಗಾಗಲಿ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ನೀಡಿಲ್ಲ. ವಿಜಯಪುರ ಜಿಲ್ಲೆಗೆ ಕಾಂಗ್ರೆಸ್ ಕೂಡ ಸಚಿವ ಸ್ಥಾನ ನೀಡುವಲ್ಲಿ ಅನ್ಯಾಯ ಮಾಡಿದ್ದು, ಜಿಲ್ಲೆಯನ್ನು ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿದೆ.