ಸಾರಾಂಶ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರಾಮೀಣ ಹಾಗೂ ಪಟ್ಟಣಗಳಲ್ಲಿ ಜರುಗುವ ಜಾತ್ರೆಗಳು ಸಂಬಂಧಗಳನ್ನು ಬೆಸೆಯಲು ಪ್ರಮುಖ ಪಾತ್ರವಹಿಸುತ್ತವೆ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.ಭಾನುವಾರ ಬೆಳಗ್ಗೆ ರಬಕವಿ ನಗರದ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ನಗರದ ಸಮಸ್ತ ಸಮಾಜ ಬಾಂಧವರ ನೇತೃತ್ವದಲ್ಲಿ ನಗರದ ಹನುಮಾನ ದೇವರ ಜಾತ್ರಾ ಮಹೋತ್ಸವ ನಿಮಿತ್ತ ನೀರೋಕುಳಿ ಹೊಂಡ ಅಗೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ಪ್ರತಿ ವರ್ಷ ಓಕುಳಿ ಕಾರ್ಯಕ್ರಮವನ್ನು ಅತೀವ ವಿಜ್ರಂಭಣೆಯಿಂದ ಆಚರಿಸುತ್ತಾ ಬಂದಿದ್ದು, ಮೂರು ದಿನಗಳ ಕಾಲ ಜರುಗುವ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಯಶಶ್ವಿಯಾಗಲಿ ಎಂದು ಶ್ರೀಗಳು ಹರಸಿದರು.ನಗರದ ಹಿರಿಯರಾದ ವಲ್ಲಿಸಾಬ ಹುಡೇದಮನಿ ಮಾತನಾಡಿ, ಜೂ.೧೩ ರಿಂದ ೧೫ರವರೆಗೆ ಹನುಮಾನ ದೇವರ ಜಾತ್ರಾ ಕಾರ್ಯಕ್ರಮ ಜರುಗಲಿವೆ. ಜೂ.೧೩ ಸಂಜೆ ೩ಕ್ಕೆ ನೀರೋಕುಳಿಯ ಹೊಂಡದಲ್ಲಿ ನೀರು ತುಂಬಿ ಪೂಜೆ ಸಲ್ಲಿಸಲಾಗುವುದು. ಜೂ.೧೪ ರಂದು ಮಧ್ಯಾಹ್ನ ೪ಕ್ಕೆ ನೀರೋಕುಳಿ, ನಂತರ ಅದೇ ದಿನ ಸಂಜೆ ೬ಕ್ಕೆ ಹಾಲಗಂಬ ಏರುವ ಹಾಲೋಕುಳಿ ಜರುಗುವುದು. ೧೫ ರಂದು ಮಧ್ಯಾಹ್ನ ಮರುಓಕುಳಿ ಜರುಗುವುದು. ಕುದುರೆ ಸೋಗು ಸೇರಿದಂತೆ ಇನ್ನಿತರ ಗ್ರಾಮೀಣ ಸೊಗಡನ್ನು ಬಿಂಬಿಸುವ ಮನರಂಜನೆ ಕಾರ್ಯಕ್ರಮ ನಡೆಯಲಿವೆ ಎಂದರು.ಈ ಸಂದರ್ಭದಲ್ಲಿ ಹಿರಿಯರಾದ ಭೀಮಶಿ ಪಾಟೀಲ, ಶಿವು ಹೊಸಮನಿ, ಸದಾಶಿವಯ್ಯ ಹಿರೇಮಠ, ಮಹಾದೇವ ಪಾಲಬಾಂವಿ, ರೇವಣಸಿದ್ದಪ್ಪ ಉಮದಿ, ಬೆನಕಪ್ಪ ಬೆಕ್ಕೇರಿ, ಎ.ಬಿ. ನಾಯಕ ಸೇರಿದಂತೆ ನಗರದ ಅನೇಕ ಹಿರಿಯರು ಮುಖಂಡರು ಇದ್ದರು.