ಸಾರಾಂಶ
ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಘಟಪ್ರಭಾ ನದಿಯ ಸೇತುವೆ ಮೇಲೆ ದಾಟುವಾಗ ರಭಸದಿಂದ ಹರಿಯುವ ನೀರಿನ ಸೆಳೆವಿಗೆ ಸಿಲುಕಿ ಟ್ರಾಲಿ ಮುಗುಚಿ ನದಿಗೆ ಬಿದ್ದು ಓರ್ವ ವ್ಯಕ್ತಿ ಕಾಣೆಯಾದ ಘಟನೆ ಸಮೀಪದ ನಂದಗಾಂವ ಗ್ರಾಮದ ಹತ್ತಿರ ಭಾನುವಾರ ನಡೆದಿದೆ.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಘಟಪ್ರಭಾ ನದಿಯ ಸೇತುವೆ ಮೇಲೆ ದಾಟುವಾಗ ರಭಸದಿಂದ ಹರಿಯುವ ನೀರಿನ ಸೆಳೆವಿಗೆ ಸಿಲುಕಿ ಟ್ರಾಲಿ ಮುಗುಚಿ ನದಿಗೆ ಬಿದ್ದು ಓರ್ವ ವ್ಯಕ್ತಿ ಕಾಣೆಯಾದ ಘಟನೆ ಸಮೀಪದ ನಂದಗಾಂವ ಗ್ರಾಮದ ಹತ್ತಿರ ಭಾನುವಾರ ನಡೆದಿದೆ.ರಬಕವಿ ಬನಹಟ್ಟಿ ಹಾಗೂ ಮೂಡಲಗಿ ತಾಲೂಕುಗಳ ಹಲವು ಗ್ರಾಮಗಳ ಸುತ್ತಮುತ್ತ ಸವದತ್ತಿ ವಿದ್ಯುತ್ ಕೇಂದ್ರದಿಂದ ಆಗಮಿಸುವ 110/220ಕೆವಿ ವಿದ್ಯುತ್ ಸಾಮರ್ಥ್ಯದ ಟವರ್ ನಿರ್ಮಾಣ ಕೆಲಸ ನಡೆದಿದೆ. ಈ ಕೆಲಸ ನಿರ್ವಹಿಸಲು ಸುಮಾರು 40-45 ಜನ ಕೋಲ್ಕತಾದಿಂದ ಕೂಲಿ ಕಾರ್ಮಿಕರು ಆಗಮಿಸಿದ್ದು, ಇವರು ಮೂರ್ನಾಲ್ಕು ತಂಡಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಭಾನುವಾರ ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಟ್ರ್ಯಾಕ್ಟರ್‌ನಲ್ಲಿ ಒಂದು ತಂಡದ ಒಟ್ಟು 12 ಜನ ಕೂಲಿ ಕಾರ್ಮಿಕರು ಕೆಲಸಕ್ಕೆಂದು ಪ್ರಯಾಣಿಸುತ್ತಿದ್ದರು. ಕಳೆದ 2-3 ದಿನದಿಂದ ಸೇತುವೆ ಮೇಲೆ ನೀರು ಹರಿಯತ್ತಿರುವುದರಿಂದ ರಸ್ತೆ ಬಂದ್ ಆಗಿದ್ದು, ಈ ದಾರಿಯಲ್ಲಿ ಹೋಗುವ ವಾಹನಗಳು ಸುತ್ತುಹಾಕಿ ಬೇರೆ ರಸ್ತೆಯಿಂದ ಹೊರಟಿದ್ದಾರೆ. ಆದರೆ, ಕಾರ್ಮಿಕರನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕ ಸಾಹಸ ಮೆರೆಯಲು ಹೋಗಿದ್ದರಿಂದ ಘಟನೆ ಸಂಭವಿಸಿದೆ. ಚಾಲಕ ಸೇತುವೆ ದಾಟಿಸುವಾಗ ಸ್ಥಳದಲ್ಲಿದ್ದ ಸ್ಥಳೀಯರು ಸೆಳೆತವಿದ್ದು ಹೋಗದಂತೆ ಎಚ್ಚರಿಕೆ ನೀಡಿದರೂ ಕೇಳದೆ ಟ್ರ್ಯಾಕ್ಟರ್ ದಾಟಿಸಲು ಯತ್ನಿಸಿದ್ದಾನೆ. ಸೇತುವೆ ಮಧ್ಯೆ ಬರುತ್ತಿದ್ದಂತೆಯೇ ನೀರಿ ಸೆಳೆತಕ್ಕೆ ಟ್ರಾಲಿ ಮುಗುಚಿ ನದಿ ಪಾಲಾಗಿದೆ. ನಾಲ್ಕು ದಿನಗಳಿಂದ ನದಿ ತುಂಬಿ ಹರಿಯುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತಟದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿಲ್ಲ. ಅಲ್ಲದೆ, ಈ ಕಾರ್ಮಿಕರನ್ನು ಸುರಕ್ಷಿತವಾಗಿ ಕೆಲಸದ ಸ್ಥಳಕ್ಕೆ ಮತ್ತು ಮರಳಿ ವಾಸ ಸ್ಥಳಕ್ಕೆ ತರುವ ಮೇಲ್ವಿಚಾರಕ ಕೂಡ ಇಲ್ಲದೆ ಇರುವುದು ಘಟನೆಗೆ ಕಾರಣ ಎಂಬುದು ಸ್ಥಳೀಯರ ಆರೋಪ. ಅದೃಷ್ಟವಶಾತ್ ಹೆಚ್ಚಿನ ಪ್ರಮಾಣದ ಪ್ರಾಣ ಹಾನಿ ಸಂಭವಿಸಿಲ್ಲವಾದರೂ ಓರ್ವ ಕಾರ್ಮಿಕ ಕಾಣೆಯಾಗಿದ್ದು, ಘಟನೆಗೆ ಗುತ್ತಿಗೆದಾರನೇ ಹೊಣೆ ಎನ್ನುತ್ತಿದ್ದಾರೆ ಸ್ಥಳೀಯರು. ಕಾಣೆಯಾದ ಕೂಲಿ ಕಾರ್ಮಿಕನ ಹುಡುಕಾಟ ನಡೆದಿದ್ದು, ರಾತ್ರಿಯವರೆಗೂ ಪತ್ತೆಯಾಗಿಲ್ಲ.