ಸಾರಾಂಶ
ಕಾರ್ಮಿಕ ವರ್ಗಕ್ಕೆ ಹಾಗೂ ದೇಶದ ಮತದಾರನಿಗೆ ಮಾಡಿರುವ ಅನ್ಯಾಯದ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಏ. 25ರಿಂದ ಮೇ 5ರ ವರೆಗೆ ಎಲ್ಲ ಕ್ಷೇತ್ರಗಳಲ್ಲಿ ಸಭೆ.
ಹುಬ್ಬಳ್ಳಿ:
ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ ಹಾಗೂ ಮಿತ್ರಪಕ್ಷಗಳನ್ನು ಕಾರ್ಮಿಕ ವರ್ಗವು ಒಂದಾಗಿ ಸೋಲಿಸುವ ಮೂಲಕ ಎಡ ಮತ್ತು ಪ್ರಜಾಪ್ರಭುತ್ವ ಹಾಗೂ ಧರ್ಮ ನಿರಪೇಕ್ಷ ಪಕ್ಷಗಳನ್ನು ಗೆಲ್ಲಿಸುವಂತೆ ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ. ಮಹಾಂತೇಶ ಮನವಿ ಮಾಡಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದುಡಿಯುವ ವರ್ಗಕ್ಕೆ ಬೆಲೆ ಇಲ್ಲದಂತಾಗಿದೆ. ಬಿಜೆಪಿ ಶ್ರೀಮಂತರ ಪರವಾಗಿ ಮತ್ತು ಬಡವರು, ದುಡಿಯುವ ವರ್ಗದ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಸೇರಿ ದೇಶದೆಲ್ಲೆಡೆ ಕಾರ್ಮಿಕ ವರ್ಗ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮತ ಚಲಾಯಿಸಲು ಕರೆ ನೀಡಿದೆ.
ಕಾರ್ಮಿಕ ವರ್ಗಕ್ಕೆ ಹಾಗೂ ದೇಶದ ಮತದಾರನಿಗೆ ಮಾಡಿರುವ ಅನ್ಯಾಯದ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಏ. 25ರಿಂದ ಮೇ 5ರ ವರೆಗೆ ಎಲ್ಲ ಕ್ಷೇತ್ರಗಳಲ್ಲಿ ಸಭೆ ನಡೆಸಲಾಗುವುದು. ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಿಪಿಐಎಂ ಅಭ್ಯರ್ಥಿಗೆ ಬೆಂಬಲಿಸಲು ಹಾಗೂ ಉಳಿದ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕರೆ ನೀಡಿದೆ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಅವರನ್ನು ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದರು.ಇದೇ ವೇಳೆ ಸಿಐಟಿಯುನಿಂದ ಕಾರ್ಮಿಕ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಜಿಲ್ಲಾಧ್ಯಕ್ಷ ಬಿ.ಐ. ಈಳಗೇರ, ಜಿಲ್ಲಾ ಉಪಾಧ್ಯಕ್ಷೆ ಸುನಂದಾ ಚಿಗರಿ, ಬಸವಣ್ಣಪ್ಪ ನೇಗಲಿ, ಬಿ.ಎನ್. ಪೂಜಾರಿ ಸೇರಿದಂತೆ ಹಲವರಿದ್ದರು.