ಶಾಲಾ ಮಕ್ಕಳಿಂದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ

| Published : Nov 04 2025, 12:15 AM IST

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಆಯ್ದ ಗ್ರಾಮಗಳಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ನ.3 ರಿಂದ 19 ರವರೆಗೆ ನಡೆಯಲಿದೆ. ಕುಷ್ಠರೋಗವು ಚರ್ಮ ಮತ್ತು ನರಗಳಿಗೆ ಸಂಬಂದಪಟ್ಟ ಕಾಯಿಲೆ ಆಗಿದೆ. ದೇಹದ ಮೇಲೆ ಯಾವುದೇ ಮಚ್ಚೆ ಕುಷ್ಠರೋಗ ಆಗಿರಬಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ಅಂಗವಾಗಿ ಗ್ರಾಮದಲ್ಲಿ ಜನಜಾಗೃತಿ ಜಾಥಾ ನಡೆಯಿತು.

ಗ್ರಾಪಂ ಸದಸ್ಯೆ ಸಿಂಧು ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ನಂತರ ಬಿಇಒ ಎಸ್.ಡಿ ಬೆನ್ನೂರ್ ಮಾತನಾಡಿ, ತಾಲೂಕಿನಾದ್ಯಂತ ಆಯ್ದ ಗ್ರಾಮಗಳಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಆಂದೋಲನ ನ.3 ರಿಂದ 19 ರವರೆಗೆ ನಡೆಯಲಿದೆ. ಕುಷ್ಠರೋಗವು ಚರ್ಮ ಮತ್ತು ನರಗಳಿಗೆ ಸಂಬಂದಪಟ್ಟ ಕಾಯಿಲೆ ಆಗಿದೆ. ದೇಹದ ಮೇಲೆ ಯಾವುದೇ ಮಚ್ಚೆ ಕುಷ್ಠರೋಗ ಆಗಿರಬಹುದು. ಹಾಗಾಗಿ ಎಲ್ಲರೂ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಬೇಕು ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ ಮಾತನಾಡಿ, ಆಂದೋಲನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ತರಬೇತಿ ಹೊಂದಿದ ಸ್ವಯಂ ಸೇವಕರು ಸೇರಿದಂತೆ ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಪುರುಷ ಹಾಗೂ ಮಹಿಳಾ ಸಿಬ್ಬಂದಿ ಇರುತ್ತಾರೆ ತಂಡದ ಸದಸ್ಯರು ಮನೆಗೆ ಬಂದಾಗ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಬಳಿಕ ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಕುಷ್ಟರೋಗದ ಬಗ್ಗೆ ಅರಿವು ಮೂಡಿಸಿದರು.

ಈ ವೇಳೆ ಶಾಲೆ ಮುಖ್ಯ ಶಿಕ್ಷಕ ಮಾದೇಗೌಡ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ವೇತ ಲತಾ, ಸಮುದಾಯ ಆರೋಗ್ಯ ಅಧಿಕಾರಿ ಬಸವರಾಜ, ಆಶಾ ಕಾರ್ಯಕರ್ತೆ ಪದ್ಮಮ್ಮ, ಲಾವಣ್ಯ ಹಾಗೂ ಸ್ವಯಂ ಸೇವಕರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಶಾಲೆಯ ಶಿಕ್ಷಕರು ಜಾಥಾ ಭಾಗವಹಿಸಿದ್ದರು.