ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು ಖಂಡಿಸಿ ಒಕ್ಕಲಿಗರ ಪ್ರತಿಭಟನೆ

| Published : Dec 01 2024, 01:31 AM IST

ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲು ಖಂಡಿಸಿ ಒಕ್ಕಲಿಗರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಸಮುದಾಯಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿರುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಉಂಟಾಗುವುದಿಲ್ಲ. ಇದನ್ನೇ ದೊಡ್ಡದು ಮಾಡಿ ಸ್ವಾಮೀಜಿಗಳ ವಿರುದ್ಧ ಸೈಯದ್ ಅಬ್ಬಾಸ್ ನೀಡಿರುವ ದೂರು ಖಂಡನೀಯ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ, ಒಕ್ಕಲಿಗರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಾಡಪ್ರಭು ಶ್ರೀ ಕೆಂಪೇಗೌಡ, ಚುಂಚಶ್ರೀ ಗೆಳೆಯರ ಬಳಗದ ಗೌರವಾಧ್ಯಕ್ಷ ಡಾ. ಬಿ ಕೃಷ್ಣ, ತಾಲೂಕು ಘಟಕದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ಬೆಂಗಳೂರು ಮೈಸೂರು ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನೆಗೆ ಇಳಿದ ಕಾರ್ಯಕರ್ತರು, ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ವಾಮೀಜಿ ವಿರುದ್ಧ ದೂರು ನೀಡಿರುವ ಸೈಯದ್ ಅಬ್ಬಾಸ್ ಹಾಗೂ ಎಫ್ ಐ ಆರ್ ದಾಖಲಿಸಿರುವ ಬೆಂಗಳೂರು ಉಪ್ಪಾರಪೇಟೆ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ಮುಸ್ಲಿಂ ಸಮುದಾಯಕ್ಕೆ ಶ್ರೀ ಚಂದ್ರಶೇಖರ ಸ್ವಾಮೀಜಿ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸಿರುವುದರಿಂದ ಯಾವುದೇ ಧಾರ್ಮಿಕ ಭಾವನೆಗಳಿಗೆ ಅಡ್ಡಿ ಉಂಟಾಗುವುದಿಲ್ಲ. ಇದನ್ನೇ ದೊಡ್ಡದು ಮಾಡಿ ಸ್ವಾಮೀಜಿಗಳ ವಿರುದ್ಧ ಸೈಯದ್ ಅಬ್ಬಾಸ್ ನೀಡಿರುವ ದೂರು ಖಂಡನೀಯ ಎಂದು ಕಿಡಿಕಾರಿದರು.

ಬೆಂಗಳೂರು ಉಪ್ಪಾರಪೇಟೆ ಪೊಲೀಸರು ಡಿಸೆಂಬರ್ ಎರಡರಂದು ವಿಚಾರಣೆಗೆ ಹಾಜರಾಗುವಂತೆ ಸ್ವಾಮೀಜಿಗಳಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು. ಇಲ್ಲವಾದಲ್ಲಿ ಇಡೀ ಸಮುದಾಯ ಸರ್ಕಾರದ ವಿರುದ್ಧ ತಿರುಗಿ ಬೀಳಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಸ್ಲಾಮಿಕ್ ಮೂಲವಾದಿಗಳು, ಜಿಹಾದಿಗಳು ಹಿಂದೂಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಇದನ್ನು ತಡೆಯಲು ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ನಾಡಪ್ರಭು ಒಕ್ಕಲಿಗರ ಸಂಘದ ಡಾ. ಬಿ.ಕೃಷ್ಣ , ದೇಶಹಳ್ಳಿ ಶಿವಪ್ಪ. ಮುಖಂಡರಾದ ಸಿ.ಎಸ್.ಶಂಕರಯ್ಯ, ದೊರೆಸ್ವಾಮಿ, ತಿಪ್ಪುರು ರಾಜೇಶ್, ನಾರಾಯಣ, ರವಿ ಚನ್ನಸಂದ್ರ, ಚನ್ನಸಂದ್ರ ಸತೀಶ್ ಮತ್ತಿತರರು ಭಾಗವಹಿಸಿದ್ದರು.