ಇರುವೈಲಿನ ನಗರ ಸಂಕೀರ್ತನೆಯ ವಿಶೇಷ ಪರಂಪರೆಗೆ ಅಮೃತ ಸಂಭ್ರಮ

| Published : Jan 14 2025, 01:00 AM IST

ಇರುವೈಲಿನ ನಗರ ಸಂಕೀರ್ತನೆಯ ವಿಶೇಷ ಪರಂಪರೆಗೆ ಅಮೃತ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆ ತಾಲೂಕಿನ ಇರುವೈಲು ಫಲ್ಗುಣಿ ನದಿ ಪರಿಸರದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಐತಿಹಾಸಿಕ ಕಾರಣಗಳಿಗಾಗಿಯೂ ಪ್ರಸಿದ್ಧ . ಇಲ್ಲಿನ ದೇವಿ ಯಕ್ಷಗಾನ, ಸಂಕೀರ್ತನೆ, ರಂಗಪೂಜಾ ಪ್ರಿಯೆ. ವರ್ಷದಲ್ಲಿ ಧನು ಸಂಕ್ರಮಣದಿಂದ ಮಕರ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯಲ್ಲಿ ದೇವಿ ಮಾಗಣೆಯ 12 ಗ್ರಾಮಗಳ ಸುಮಾರು 1300 ಮನೆಗಳಿಗೂ ಭೇಟಿ ನೀಡಿ ಸೇವೆ ಸ್ವೀಕರಿಸುವುದು ವಾಡಿಕೆ.

ಗಣೇಶ್ ಕಾಮತ್

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತುಳುನಾಡಿನಲ್ಲಿ ಭಜಕರ ದರ್ಶನಕ್ಕಾಗಿ ಹಲವು ದೇವಾಲಯಗಳಿವೆ. ದರ್ಶನ, ಉತ್ಸವಾದಿಗಳಲ್ಲಿ ದೇವರ ಪೇಟೆ ಸವಾರಿಯೂ ಇದೆ. ಆದರೆ ಮನೆ ಮನೆಗೂ ಊರಿನ ಆರಾಧ್ಯ ದೇವಿ ಭೇಟಿ ಇತ್ತು ಪೂಜೆ ಪ್ರಾರ್ಥನೆ ಸ್ವೀಕರಿಸುವ ವಿಶೇಷತೆಯ ವಿವರ ಇದು.

ಮೂಡುಬಿದಿರೆ ತಾಲೂಕಿನ ಇರುವೈಲು ಫಲ್ಗುಣಿ ನದಿ ಪರಿಸರದ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸನ್ನಿಧಿ ಐತಿಹಾಸಿಕ ಕಾರಣಗಳಿಗಾಗಿಯೂ ಪ್ರಸಿದ್ಧ . ಇಲ್ಲಿನ ದೇವಿ ಯಕ್ಷಗಾನ, ಸಂಕೀರ್ತನೆ, ರಂಗಪೂಜಾ ಪ್ರಿಯೆ. ವರ್ಷದಲ್ಲಿ ಧನು ಸಂಕ್ರಮಣದಿಂದ ಮಕರ ಸಂಕ್ರಮಣದವರೆಗಿನ ಒಂದು ತಿಂಗಳ ಅವಧಿಯಲ್ಲಿ ದೇವಿ ಮಾಗಣೆಯ 12 ಗ್ರಾಮಗಳ ಸುಮಾರು 1300 ಮನೆಗಳಿಗೂ ಭೇಟಿ ನೀಡಿ ಸೇವೆ ಸ್ವೀಕರಿಸುವುದು ವಾಡಿಕೆ. ಈ ನಗರ ಭಜನಾ ಮಹೋತ್ಸವಕ್ಕೆ ಇದೀಗ ಅಮೃತೋತ್ಸವ ಸಂಭ್ರಮ.

ಸಂಜೆ ಕತ್ತಲಾಗುತ್ತಿದ್ದಂತೆ ದೇವಳದಿಂದ ಹೊರಡುವ ಭಜನಾ ತಂಡಕ್ಕೆ ದೇವಿಯ ಭಜನಾ ಮೂರ್ತಿಯೇ ಅಧಿನಾಯಕಿ! ಪೂರ್ವ ಸೂಚನೆಯಂತೆ ಭಜಕರು ಮನೆಯ ಅಂಗಳ ಸಿಂಗರಿಸಿ ತುಳಸೀಕಟ್ಟೆಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಸ್ವಾಗತಿಸಿ ದೀಪಾಲಂಕಾರ ಸಹಿತ ನೈವೇದ್ಯ ಅರ್ಪಿಸಿ ಪೂಜಿಸುತ್ತಾರೆ.

ಮನೆಯಂಗಳದಲ್ಲಿ ಉತ್ಸವದ ತಂಡದಲ್ಲಿರುವ ಉತ್ಸಾಹಿ ಯುವಕರ ತಂಡದ ಭಜನೆ ಕಾರ್ಯಕ್ರಮಕ್ಕೆ ದೈವಿಕ ಕಳೆ ಮೂಡಿಸುತ್ತದೆ. ಬಳಿಕ ಮನೆ ಮಂದಿಯ ಯಥಾನುಶಕ್ತಿ ಆತಿಥ್ಯ, ಸತ್ಕಾರ.

ದಿನವೊಂದಕ್ಕೆ 50-70 ಮನೆ ಭೇಟಿ. ಕೆಲವೊಮ್ಮೆ ನೂರಾರು ಮನೆಯ ಗಡಿ ದಾಟುವುದೂ ಇದೆ. ಹೀಗೆ ಸಾಗುವ ನಗರ ಭಜನಾ ಉತ್ಸವ ತಡರಾತ್ರಿ ಮೂರರಿಂದ ನಾಲ್ಕರ ಹೊತ್ತಿಗೆ ಕೆಲವೊಮ್ಮೆ ಬೆಳಗಿನ ಜಾವ ಮರಳಿ ದೇವಸ್ಥಾನಕ್ಕೆ ತಲುಪುವುದೂ ಇದೆ. ಇದು ಒಂದು ತಿಂಗಳ ನಿತ್ಯ ಸಂಭ್ರಮ.

ವಿಶೇಷ ಎಂದರೆ ಈ ಭಜನಾ ಸಂಸ್ಕೃತಿಯನ್ನು ಉತ್ಸಾಹದಿಂದಲೇ ಮುಂದುವರಿಸಿಕೊಂಡು ಹೋಗುತ್ತಿರುವ ನೂರಾರು ಮಂದಿಯ ತಂಡ ಅದರಲ್ಲೂ ಎಳೆಯರ ಬಳಗವೇ ಅಧಿಕ.

ಕೀರ್ತಿಶೇಷರಾದ ಐ. ರಾಮ ಆಸ್ರಣ್ಣ, ಜನಾರ್ದನ ಆಚಾರ್ಯ, ವಾಸುದೇವ ಆಚಾರ್ಯ, ಪುಂಡಳೀಕ ಪ್ರಭು ನಡುಬಾಳಿಕೆ, ಮೋನಪ್ಪ ಶೆಟ್ಟಿ, ದೇಜು ಪೂಜಾರಿ ಕಾಳೂರು, ಪದ್ಮನಾಭ ಶೆಟ್ಟಿ ಮೊದಲಾದ ಹಿರಿಯರ ಪರಿಶ್ರಮ, ಬೆಂಗಳೂರಿನ ನಾರಾಯಣ ನಾಯಕ್ ಮಂಡಳಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಕಾರ್ಯದರ್ಶಿ ನಾರಾಯಣ ದೇವಾಡಿಗ ಸಹಿತ ಊರ ಪ್ರಮುಖರ ,ಕಾರ್ಯಕರ್ತರ ಉತ್ಸಾಹ ಈ ಭಜನಾ ಮಹೋತ್ಸವವನ್ನು ಇನ್ನಷ್ಟು ವರ್ಣಮಯ, ವಿಶಿಷ್ಟವಾಗಿಸಿದೆ.

ಇಂದು ಮಂಗಲೋತ್ಸವ:

ಈ ಬಾರಿ 75ನೇ ವರ್ಷದ ಭಜನಾ ಮಂಗಲೋತ್ಸವ ಮಕರ ಸಂಕ್ರಮಣದ ದಿನ ಮಂಗಳವಾರ ನಡೆಯಲಿದೆ. ಬೆಳಗ್ಗೆ 9ರಿಂದ ಚಂಡಿಕಾ ಯಾಗ, 11ರಿಂದ ಧಾರ್ಮಿಕ ಸಭೆ, ಹಿರಿಯ ಭಜಕರಿಗೆ ಸಮ್ಮಾನ, ಅಪರಾಹ್ಹ, ರಾತ್ರಿ ಮಹಾ ಅನ್ನಸಂತರ್ಪಣೆ, ಸಂಜೆ 7ರಿಂದ ಮಂಗಲೋತ್ಸವ ಸಂಕೀರ್ತನೆ ಆರಂಭ, ಜತೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ( ಜ 11ರಿಂದ 19 ) ಸಂಭ್ರಮ, ರಾತ್ರಿ ಪೂರ್ತಿ ಸಂಕೀರ್ತನೆ, ಪೂಜೆ ನಡೆದು ಮರುದಿನ ಉಷಾಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ....................

ಭಜಕರ ಹಸಿರು ಹೊರೆ ಕಾಣಿಕೆ ಕ್ಷೇತ್ರದಲ್ಲಿ ಮಹೋತ್ಸವ, ಮಂಗಲೋತ್ಸವದ ಅನ್ನದಾನಕ್ಕೆ ವಿನಿಯೋಗಿಸಲಾಗುತ್ತಿದೆ. ಕಾಣಿಕೆ, ವಂತಿಗೆ ಎಲ್ಲವನ್ನೂ ಸದ್ಬಳಕೆ ಮಾಡಿಕೊಂಡು ಈ ಬಾರಿ ಅಮೃತ ಮಹೋತ್ಸವ ಸವಿನೆನಪಿಗಾಗಿ ದೇವಳದ ಪ್ರಾಂಗಣಕ್ಕೆ ಶಾಶ್ವತ ಚಪ್ಪರ ನಿರ್ಮಾಣ ಮಾಡಲಾಗುತ್ತಿದೆ.

- ದಿವಾಕರ ಪ್ರಭು ಇರುವೈಲು, ಕ್ಷೇತ್ರದ ಮಾಜಿ ಮೊಕ್ತೇಸರ.