ಕರಾವಳಿ ಜನರಿಂದ ಈ ಬಾರಿ ಬದಲಾವಣೆ: ಡಿ.ಕೆ. ಶಿವಕುಮಾರ್

| Published : Feb 18 2024, 01:36 AM IST / Updated: Feb 18 2024, 03:24 PM IST

DK Shivakumar
ಕರಾವಳಿ ಜನರಿಂದ ಈ ಬಾರಿ ಬದಲಾವಣೆ: ಡಿ.ಕೆ. ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ವ್ಯಾಪಾರ ವಹಿವಾಟು ಕುಸಿದಿದೆ. ಈ ಪರಿಸ್ಥಿತಿಯನ್ನು ಸರಿದೂಗಿಸಲು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಜನ ಬದಲಾವಣೆ ಮಾಡುವ ವಿಶ್ವಾಸವಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು, ವ್ಯಾಪಾರ ವಹಿವಾಟು ಕುಸಿದಿದೆ. ಇಲ್ಲಿನ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿಯುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. 

ಈ ಪರಿಸ್ಥಿತಿಯನ್ನು ಸರಿದೂಗಿಸಲು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರಾವಳಿ ಭಾಗದ ಜನ ಬದಲಾವಣೆ ಮಾಡುವ ವಿಶ್ವಾಸವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಮಟ್ಟದ ಕಾಂಗ್ರೆಸ್‌ ಸಮಾವೇಶಕ್ಕೆ ಮೊದಲು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜಕೀಯದಲ್ಲಿ ಯಾವುದೂ ಶಾಶ್ವತವಿಲ್ಲ. ಅಸಾಧ್ಯ ಎಂಬುದಿಲ್ಲ. 

ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದ.ಕ.ದ ಜನ ಬದಲಾವಣೆ ಮಾಡಲಿದ್ದಾರೆ ಎಂಬ ನಂಬಿಕೆ ಇದೆ. ಕರಾವಳಿಯ ಯುವಕರು ಮತ್ತು ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ಸೌದಿಗೆ ಹೋಗುತ್ತಿದ್ದಾರೆ. ಇಲ್ಲಿ ಶಾಂತಿ ಕದಡಲಾಗುತ್ತಿದೆ. 

ಮಕ್ಕಳು ಬಿಜೆಪಿಯ ಧರ್ಮದ ಬಲೆಗೆ ಬಿದ್ದು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಅಭಿವೃದ್ಧಿಯನ್ನು ಫೋಕಸ್ ಮಾಡುತ್ತಿದ್ದೇವೆ ಎಂದರು.

ರಾಜ್ಯದ ಅನ್ಯಾಯಕ್ಕೆ ಏಕೆ ಧ್ವನಿ ಎತ್ತಲ್ಲ: ‘ದಕ್ಷಿಣ ಕನ್ನಡ ಭಾಗದ ತೆರಿಗೆ ನಮಗೆ ಬೇಕು’ ಎಂಬ ಶಾಸಕ ಹರೀಶ್‌ ಪೂಂಜ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದಾಗ ಅವರು ಧ್ವನಿ ಎತ್ತಲಿಲ್ಲ. ಮುಸಲ್ಮಾನರಿಗೆ ಶೇ.1ರಷ್ಟು ಅನುದಾನವನ್ನೂ ನೀಡಬಾರದೇ? ಬಿಜೆಪಿಯವರು ರಾಜಕಾರಣ ಮಾಡಲಿಕ್ಕೆ ಈ ರೀತಿ ಹೇಳುತ್ತಾರೆ ಎಂದರು.

ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರದ ಕುರಿತು ಮಾತನಾಡಿ, ಈಗಾಗಲೇ ಮೂರ್ನಾಲ್ಕು ಬಾರಿ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಮೀಕ್ಷೆ ನಡೆಯುತ್ತಿದೆ. ಎಲ್ಲ ಮುಗಿದ ನಂತರ ಅಭ್ಯರ್ಥಿ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

ಶಾಲೆ ವಿವಾದ: ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಲ್ಲ
ನಗರದ ಖಾಸಗಿ ಶಾಲೆ ವಿವಾದದಲ್ಲಿ ಶಾಸಕರ ವಿರುದ್ಧದ ಪ್ರಕರಣ ಹಿಂಪಡೆಯದಿದ್ದರೆ ಪ್ರತಿಭಟನೆ ಮಾಡುವ ಬಿಜೆಪಿ ಮುಖಂಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಅವರು ಮಾಡುತ್ತಿರಲಿ. 

ಕಾನೂನಿನ ಪ್ರಕಾರ ಕ್ರಮ ವಹಿಸಲಾಗುತ್ತದೆ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ನಾನು ಅವರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.

ಡಿಕೆಸು ವಿರುದ್ಧ ಕುಮಾರಸ್ವಾಮಿ ನಿಂತರೂ ಸ್ವಾಗತ
ಡಿ.ಕೆ ಸುರೇಶ್ ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರನ್ನು ನಿಲ್ಲಿಸಲು ಚರ್ಚೆ ನಡೆಯುತ್ತಿರುವ ಬಗ್ಗೆ ಕೇಳಿದಾಗ, ನಾನು ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿದ್ದೆ. ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಕುಮಾರಸ್ವಾಮಿ ಅವರ ಧರ್ಮಪತ್ನಿ ಅವರನ್ನು ನಿಲ್ಲಿಸಿದಾಗ ಅವರ ವಿರುದ್ಧ ನನ್ನ ತಮ್ಮ ಸ್ಪರ್ಧೆ ಮಾಡಿದ್ದರು. 

ಆಗಲೂ 1.35 ಲಕ್ಷ ಮತಗಳಿಂದ ಗೆದ್ದಿದ್ದೆವು. ಅವರು ಯಾರನ್ನಾದರೂ ನಿಲ್ಲಿಸಲಿ. ನಮಗೆ ನಮ್ಮ ಮತದಾರರಿದ್ದಾರೆ. ಸುರೇಶ್ ಅವರು ದೆಹಲಿಯಲ್ಲಿ ಕೂರುವ ಸಂಸದರಲ್ಲ. 

ಅವರು ಹಳ್ಳಿಯಲ್ಲಿ ಕೂರುವ ಸಂಸದ. ಬೇರೆ ಸಂಸದರಿಗೂ ಸುರೇಶ್‌ಗೂ ಏನು ವ್ಯತ್ಯಾಸವಿದೆ ಎಂದು ಜನ ನೋಡಿದ್ದಾರೆ. ಅವರು ಯಾರನ್ನೇ ನಿಲ್ಲಿಸಿದರೂ ಮತದಾರರು ಉತ್ತರ ಕೊಡುತ್ತಾರೆ. ಕುಮಾರಸ್ವಾಮಿ ಸ್ಪರ್ಧಿಸಿದರೂ ನಾವು ಸ್ವಾಗತಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.