ಸಾರಾಂಶ
ಹುಬ್ಬಳ್ಳಿ: ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಬದಲಾವಣೆ, ಅಭಿವೃದ್ಧಿಯ ಹಿನ್ನೆಲೆಯನ್ನಿಟ್ಟುಕೊಂಡು ಸಮಾಜ ಬಾಂಧವರ ಒತ್ತಾಯದ ಮೇರೆಗೆ ನನ್ನ ನೇತೃತ್ವದ ಬಣ ಚುನಾವಣೆಗೆ ಸ್ಪರ್ಧಿಸಿದೆ ಎಂದು ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಎ ಇಸ್ಲಾಂ ಸಂಸ್ಥೆಯು ನಿರೀಕ್ಷೆಗೆ ತಕ್ಕಂತೆ ಬೆಳವಣಿಗೆಯಾಗಿಲ್ಲ ಎಂಬ ನೋವು ಸಮುದಾಯವನ್ನು ಕಾಡುತ್ತಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ದಿಸೆಯಲ್ಲಿ ಸಂಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಸದಸ್ಯರ ಒತ್ತಡದ ಹಿನ್ನೆಲೆಯಲ್ಲಿ ನಮ್ಮ ಬಣ ಸ್ಪರ್ಧಿಸುತ್ತಿದೆ ಎಂದರು.1980ರ ದಶಕದಲ್ಲಿ 2 ಬಾರಿ ಸ್ಪರ್ಧಿಸಿ ಸಂಸ್ಥೆಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಆಗ ಶಾಸಕ, ಸಚಿವನಾಗುವ ಯೋಗ ಬಂದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಇತರರಿಗೆ ಬಿಟ್ಟುಕೊಟ್ಟು ಶಾಸಕನಾಗಿ ಕೆಲಸ ಮಾಡಿದ್ದೇನೆ. ಇಲ್ಲಿ ವರೆಗೆ ಸಂಸ್ಥೆಯ ಬೆಳವಣಿಗೆ ಬಗ್ಗೆ ಸದಸ್ಯರಲ್ಲಿ ಅಸಮಾಧಾನವಿದೆ. ಬದಲಾವಣೆ ಹಿನ್ನೆಲೆಯಲ್ಲಿ ಸದಸ್ಯರು ಸ್ಪರ್ಧಿಸುವಂತೆ ಒತ್ತಡ ತಂದಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಖಂಡಿತವಾಗಿ ನಮ್ಮ ಬಣ ಗೆಲವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ಬಣ ಅಧಿಕಾರಕ್ಕೆ ಬಂದಲ್ಲಿ ಬಿಎಎಂಎಸ್, ಬಿಎಚ್‌ಎಂಸಿ ಕಾಲೇಜು ಆರಂಭಿಸಲಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೌಶಲ್ಯ ತರಬೇತಿ ಕೇಂದ್ರ, ಆಸ್ಪತ್ರೆ ಅಭಿವೃದ್ಧಿಗೊಳಿಸಿ ಐಸಿಯು, ಯುಎಸ್‌ಜಿ ಯಂತ್ರಗಳ ಅಳವಡಿಕೆ ಸೇರಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಿದ್ದೇವೆ ಎಂದು ಭರವಸೆ ನೀಡಿದರು.ಕಾನೂನು ಕೋಶ ರಚನೆ, ಹೊಸದಾಗಿ ಸ್ಮಶಾನ ಹಾಗೂ ಈದ್ಗಾ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಬದ್ಧರಾಗಿದ್ದೇವೆ ಎಂದು ಪ್ರಣಾಳಿಕೆಯಲ್ಲಿನ ಅಂಶಗಳನ್ನು ಹೇಳಿ ಅವರು ಮತ ನೀಡುವಂತೆ ಮನವಿ ಮಾಡಿದರು.
ಫೆ. 18ರಂದು ನಡೆಯಲಿರುವ ಮತದಾನ ಬೆಳಗ್ಗೆ 8ರಿಂದ ಆರಂಭವಾಗಲಿದ್ದು ಸಂಜೆ 5.30ರ ಬಳಿಕ ಮತ ಎಣಿಕೆ ಶುರುವಾಗಲಿದೆ. ಒಟ್ಟು 11,900ಕ್ಕೂ ಅಧಿಕ ಮತದಾರರು ಹಕ್ಕು ಹೊಂದಿದ್ದಾರೆ. ಒಬ್ಬ ಮತದಾರ 52 ಮತಗಳನ್ನು ಹಾಕಬಹುದಾಗಿದೆ. ಒಟ್ಟು 4 ವಿವಿಧ ಬಣಗಳಿಂದ 211 ಜನರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಮ್ಮ ಬಣದವರೆ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ನವೀದ್ ಮುಲ್ಲಾ, ದಾದಾಹಯಾತ್ ಖೈರಾತಿ, ಸಿರಾಜ್ ಅಹ್ಮದ್ ಕುಡಚಿವಾಲೆ, ರಫೀಕ ಬಂಕಾಪುರ, ಮುನ್ನಾ ಸೇರಿದಂತೆ ಹಲವರಿದ್ದರು.