ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪ್ರಪಂಚಕ್ಕೆ ಸುಖ ಕೊಡುವ ತಾಕತ್ತು ಭಾರತಕ್ಕಿದ್ದು, ಇಂದು ಜಗತ್ತನ್ನು ಮೇಲಕ್ಕೆತ್ತುವ ಕೆಲಸ ಭಾರತದಿಂದ ನಡೆಯುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ಪ್ರಾಂತದ ಸಹ ಕಾರ್ಯವಾಹ ಪಟ್ಟಾಭಿರಾಮ ಹೇಳಿದ್ದಾರೆ.ನಗರದ ಮಧುವನ ಬಡಾವಣೆ ಸಮರ್ಪಣಾ ಟ್ರಸ್ಟ್ ಕಾರ್ಯಾಲಯದ ಆವರಣದಲ್ಲಿ ನಡೆದ ಸಮರ್ಪಣಾ ಟ್ರಸ್ಟ್ ಕಟ್ಟಡದ ದಶಮಾನೋತ್ಸವ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಧರ್ಮ ಎಂದರೆ ಎಲ್ಲವನ್ನು ಜೋಡಿಸುವುದು. ಆ ಮೂಲಕ ಭಾರತವನ್ನು ಹಿಂದೂ ಧರ್ಮ, ಸಂಸ್ಕೃತಿ ಆಧಾರದಲ್ಲಿ ಕಟ್ಟುವ ಕಾರ್ಯ ನಡೆಯುತ್ತಿದ್ದು, ಜಗತ್ತಿಗೆ ಸುಖ, ನೆಮ್ಮದಿ, ಶಾಂತಿ ಕೊಡುವ ತಾಕತ್ತು ಬೆಳೆದಿದ್ದು, ಭಾರತ ಶಕ್ತಿವಂತ ರಾಷ್ಟ್ರವಾಗುತ್ತಿರುವ ಕಾರಣದಿಂದ ಇಂದು ಭಾರತದ ಮಾತನ್ನು ಇಡೀ ಜಗತ್ತು ಕೇಳುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರಿನಲ್ಲಿ ಟ್ರಸ್ಟ್ ರಚನೆಗೊಂಡು, ಅದರ ಮೂಲಕ ಕುಟುಂಬಗಳನ್ನು ಜೋಡಿಸುವ ಮತ್ತು ಕುಟುಂಬಗಳು, ಮನೆಗಳನ್ನು ಕೇಂದ್ರವಾಗಿಸಿಕೊಂಡು ಸಮಾಜ ಕಟ್ಟುವ ಕಾರ್ಯವನ್ನು ಕಾರ್ಯಕರ್ತರು, ಪ್ರಚಾರಕರಿಂದ ನಡೆಯುತ್ತಿದೆ ಎಂದ ಅವರು, ಕಾರ್ಯಾಲಯದಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಎಲ್ಲರು ಭಾಗವಹಿಸುವಂತಾಗಬೇಕು. ವಿಶೇಷವಾಗಿ ಮಾತೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನರಾವ್ ಮಾತನಾಡಿ, ಜನರ ಸಹಕಾರ ಮತ್ತು ನೆರವಿನೊಂದಿಗೆ 2014ರಲ್ಲಿ ಲೋಕಾರ್ಪಣೆಗೊಂಡಿದ್ದ ಸಮರ್ಪಣಾ ಟ್ರಸ್ಟ್ ಕಟ್ಟಡ ಹತ್ತು ಹೆಜ್ಜೆಗಳನ್ನು ಯಶಸ್ವಿಯಾಗಿಡುವ ಮೂಲಕ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿದ್ದೇವೆ. ಹತ್ತು ವರ್ಷಗಳಲ್ಲಿ ಟ್ರಸ್ಟ್ ವತಿಯಿಂದ ಸಮಾಜ ಪರವಾದ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ತಿಳಿಸಿದರು.
ದಶಮಾನೋತ್ಸವದ ಅಂಗವಾಗಿ ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ಚಿತ್ರ ಬರೆಯುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಸುಗಮ ಸಂಗೀತ ಕಾರ್ಯಕ್ರಮ, ಪೌರ ಸೇವಾ ನೌಕರರಿಗೆ ಗೌರವ ಸಮರ್ಪಣೆ ಮತ್ತು ಅವರೊಂದಿಗೆ ಸಹ ಬೋಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದ ಅವರು, ಟ್ರಸ್ಟ್ ಹತ್ತು ವರ್ಷಗಳಲ್ಲಿ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿದ ಸಮಾಜದ ಎಲ್ಲರಿಗೂ ಕೃತಜ್ಞತೆ ತಿಳಿಸುವುದಾಗಿ ಹೇಳಿದರು.ಕಾಫಿ ಬೆಳೆಗಾರ ಎಂ.ಆರ್.ಗುರುಮೂರ್ತಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕವೇ ಅಸ್ಪೃಶ್ಯತೆ ಮತ್ತು ಜಾತಿ ವ್ಯವಸ್ಥೆ ನಿರ್ಮೂಲನವಾಗಬೇಕು. ಆ ಮೂಲಕ ಹಿಂದೂಸ್ಥಾನ ನಿರ್ಮಾಣ ಆಗಬೇಕು ಎಂದು ಹೇಳಿದರು.
ಆರ್ ಎಸ್ ಎಸ್ ಚಿಕ್ಕಮಗಳೂರು ನಗರ ಸಂಘ ಚಾಲಕ ಘನಶ್ಯಾಮ್ ಆಳ್ವ ಹಾಜರಿದ್ದರು. ಉಲ್ಲಾಸ್ ವೈಯಕ್ತಿಕ ಗೀತೆ ಹಾಡಿದರು. ಆರ್‌ಎಸ್ಎಸ್ ಜಿಲ್ಲಾ ಕಾರ್ಯವಾಹಕ ಪ್ರಶಾಂತ್ ಶರ್ಮ ಸ್ವಾಗತಿಸಿ, ರಾಜರಾಮ್ ಕೋಟೆ ವಂದಿಸಿ, ಪ್ರವೀಣ್ ನಿರೂಪಿಸಿದರು.