ಸಾರಾಂಶ
ನರಸಿಂಹರಾಜಪುರ: ಪಟ್ಟಣದಿಂದ ಶಿವಮೊಗ್ಗ ಹೋಗುವ ರಸ್ತೆಯಲ್ಲಿ ಮೆಣಸೂರು ಸೇತುವೆ ಸಮೀಪದ ಚೆಕ್ ಡ್ಯಾಂ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ನೀರು ಬೀಳುವ ದೃಶ್ಯ ಜಲಪಾತದಂತೆ ಕಂಗೊಳಿಸುತ್ತಿದ್ದು ಇದನ್ನು ನೋಡುವುದೇ ಪ್ರವಾಸಿಗರಿಗೆ ಹಬ್ಬವಾಗಿದೆ.
ನರಸಿಂಹರಾಜಪುರ: ಪಟ್ಟಣದಿಂದ ಶಿವಮೊಗ್ಗ ಹೋಗುವ ರಸ್ತೆಯಲ್ಲಿ ಮೆಣಸೂರು ಸೇತುವೆ ಸಮೀಪದ ಚೆಕ್ ಡ್ಯಾಂ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು ನೀರು ಬೀಳುವ ದೃಶ್ಯ ಜಲಪಾತದಂತೆ ಕಂಗೊಳಿಸುತ್ತಿದ್ದು ಇದನ್ನು ನೋಡುವುದೇ ಪ್ರವಾಸಿಗರಿಗೆ ಹಬ್ಬವಾಗಿದೆ.
ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿಗಾಗಿ 15 ವರ್ಷಗಳ ಹಿಂದೆ ಕಟ್ಟಿದ್ದ ಚೆಕ್ ಡ್ಯಾಂನಲ್ಲಿ ಪ್ರತಿ ವರ್ಷ ನೀರು ಉಕ್ಕಿ ಹರಿಯುವಾಗ ಜಲಪಾತದಂತೆ ಕಂಡು ಬರುತ್ತದೆ. ಪ್ರಸ್ತುತ ಕಳೆದ 15-20 ದಿನದಿಂದಲೂ ನೀರು ಉಕ್ಕಿ ಹರಿಯುತ್ತಿದ್ದು ನೀರಿನ ಬೋರ್ಗೆರತ ಜಲಪಾತವಾಗಿ ಬದಲಾಗಿದೆ. ಕೆಳಗೆ ಬೀಳುವಾಗ ನೀರು ನೊರೆ, ನೊರೆಯಾಗಿ ಪರಿವರ್ತನೆ ಯಾಗುತ್ತಿದ್ದು ಮುಖ್ಯ ರಸ್ತೆಯ ಪಕ್ಕದಲ್ಲೇ ಈ ಚೆಕ್ ಡ್ಯಾಂ ಬರುವುದರಿಂದ ವಾಹನ ಸವಾರರು ತಮ್ಮ ವಾಹನವನ್ನು ನಿಲ್ಲಿಸಿ ಈ ಮಿನಿ ಜಲಪಾತದ ನೀರಿನ ಸೊಬಗನ್ನು ನೋಡಿ ಆನಂದಿಸಿ ಹೋಗುತ್ತಿದ್ದಾರೆ.ಕಳೆದ 15 ದಿನದಿಂದಲೂ ಚೆಕ್ ಡ್ಯಾಂ ಕೆಳಗೆ ಮೀನುಗಾರರು ಬಲೆ ಬೀಸುತ್ತಿದ್ದಾರೆ. ಭದ್ರಾ ಹಿನ್ನೀರಿಗೆ ಬಂದ ಮೀನುಗಾರರು ಹಾಗೂ ಬೇರೆ ಕಡೆಯಿಂದ ಬಂದ ಮೀನುಗಾರರು ಸಹ ಮೀನಿಗೆ ಬಲೆ ಹಾಕಿ ಮೀನು ಹಿಡಿದು ಮಾರಾಟ ಮಾಡುತ್ತಿದ್ದಾರೆ. ಈ ಚೆಕ್ ಡ್ಯಾಂ ಪ್ರವಾಸಿಗರಿಗೆ ಜಲಪಾತವಾದರೆ, ಮೀನುಗಾರರಿಗೆ ಆದಾಯ ತರುವ ಮೂಲವಾಗಿದೆ.