ಹತ್ಯೆಗೊಂಡ ಬಾಲಕಿ ಕುಟುಂಬಕ್ಕೆ ₹10 ಲಕ್ಷದ ಚೆಕ್‌ ವಿತರಣೆ

| Published : May 10 2025, 01:03 AM IST

ಹತ್ಯೆಗೊಂಡ ಬಾಲಕಿ ಕುಟುಂಬಕ್ಕೆ ₹10 ಲಕ್ಷದ ಚೆಕ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಐದು ವರ್ಷದ ಬಾಲಕಿಯ ಮೇಲೆ ಬಿಹಾರ ಮೂಲದ ರಿತೇಶ್‌ ಕುಮಾರ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆಗೈದಿದ್ದ. ಈ ಸಂಬಂಧ ಅದೇ ದಿನ ಮೃತ ಬಾಲಕಿ ಮನೆಗೆ ಭೇಟಿ ನೀಡಿದ್ದ ಸಲೀಂಅಹ್ಮದ್‌ ಅವರು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು. ಅಲ್ಲದೇ ಸರ್ಕಾರದ ವತಿಯಿಂದ ₹10 ಲಕ್ಷ ಪರಿಹಾರ ಕೊಡಿಸುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಪರಿಹಾರದ ಚೆಕ್‌ ವಿತರಿಸಿದ್ದಾರೆ. ಪರಿಹಾರದ ಚೆಕ್‌ ವಿತರಣೆ ವಿಳಂಬವಾಗಿದ್ದರ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.

ಹುಬ್ಬಳ್ಳಿ: ಹತ್ಯೆಗೀಡಾದ 5 ವರ್ಷದ ಬಾಲಕಿ ಕುಟುಂಬಕ್ಕೆ ಶುಕ್ರವಾರ, ಸರ್ಕಾರ ಮಾಡಿದ್ದ ವಾಗ್ದಾನದಂತೆ ₹10 ಲಕ್ಷ ಪರಿಹಾರ ವಿತರಿಸಲಾಯಿತು. ಸರ್ಕಾರದ ಪರವಾಗಿ ವಿಧಾನ ಪರಿಷತ್‌ ಮುಖ್ಯಸಚೇತಕ ಸಲೀಂಅಹ್ಮದ ಅವರು ಚೆಕ್‌ ವಿತರಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆ ನಡೆಯಬಾರದಿತ್ತು. ಸರ್ಕಾರ ಘೋಷಿಸಿದ ₹10 ಲಕ್ಷ ಪರಿಹಾರವನ್ನು ಸಿಎಂ ಪರವಾಗಿ ಬಾಲಕಿ ಕುಟುಂಬಕ್ಕೆ ವಿತರಿಸಲಾಗಿದೆ. ಶಾಸಕ ಪ್ರಸಾದ್‌ ಅಬ್ಬಯ್ಯ ಸಂತ್ರಸ್ತ ಕುಟುಂಬಕ್ಕೆ ಮನೆ ಒದಗಿಸಿಕೊಡುವುದಾಗಿ ಹೇಳಿದ್ದಾರೆ. ಬಾಲಕಿ ಸಹೋದರಿಗೆ ಜಿಲ್ಲಾಡಳಿತದಿಂದ ಸಹಾಯ ಒದಗಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ ಎಂದರು.

ಹೆಚ್ಚಿನ ಪರಿಹಾರ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಪ್ರಕರಣಗಳಲ್ಲಿ ಸರ್ಕಾರದಿಂದ ₹5 ಲಕ್ಷ ಪರಿಹಾರ ವಿತರಿಸಲಾಗುತ್ತದೆ. ಆದರೆ, ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ₹10 ಲಕ್ಷ ಪರಿಹಾರ ನೀಡಲಾಗಿದೆ. ಹೆಚ್ಚಿನ ಪರಿಹಾರ ಕುರಿತು ಸಿಎಂ ಗಮನಸೆಳೆಯುವುದಾಗಿ ತಿಳಿಸಿದರು.

ಇದೇ ವೇಳೆ ಸಾಯಿನಗರ ಅಡುಗೆ ಅನಿಲ ಸೋರಿಕೆ ಪ್ರಕರಣದಲ್ಲಿ ಮೃತ 8 ಕುಟುಂಬಗಳಿಗೆ ₹40 ಲಕ್ಷ ಪರಿಹಾರ ಡಿಬಿಟಿ ಮೂಲಕ ಜಮೆ ಆಗಿದೆ. ಅಕ್ರಮವಾಗಿ ಸಿಲಿಂಡರ್‌, ಪಟಾಕಿ ಸಂಗ್ರಹಿಸುವುದು ಕಂಡು ಬಂದರೆ ಅಂತಹವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಗೆ ಸರ್ಕಾರ ನಿರ್ದೇಶನ ನೀಡಿದೆ. ಕೆಲವೆಡೆಯ ಅಕ್ರಮ ಸಿಲಿಂಡರ್‌ ಸಂಗ್ರಹ ಕುರಿತಂತೆ ಎಫ್‌ಐಆರ್‌ ಆಗಿದ್ದು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ಸೈನ್ಯಕ್ಕೆ ಕಾಂಗ್ರೆಸ್‌ ಬೆಂಬಲ: ಪಹಲ್ಗಾಂ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿರುವ ನಮ್ಮ ಸೈನ್ಯದ ಬಗ್ಗೆ ನಮಗೆ ಬಹಳ ಹೆಮ್ಮೆ ಇದೆ. ಉಗ್ರರ ಅಟ್ಟಹಾಸಕ್ಕೆ ತಕ್ಕ ಉತ್ತರ ನೀಡುವ ಮೂಲಕ ಭಾರತ ವಿಶ್ವಕ್ಕೆ ಸಂದೇಶ ನೀಡಿದೆ. ಕಾಂಗ್ರೆಸ್ ಪಕ್ಷದಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಪಕ್ಷಾತೀತವಾಗಿ ತಿರಂಗಾ ಯಾತ್ರೆ ಮಾಡಿ ಸೈನ್ಯಕ್ಕೆ ಬೆಂಬಲ ಸೂಚಿಸಿದ್ದೇವೆ. ಪಾಕಿಸ್ತಾನವೇ ದಾಳಿ ಆರಂಭಿಸಿದ್ದು, ಅದಕ್ಕೆ ತಕ್ಕ ಉತ್ತರ ನಮ್ಮ ಸೈನ್ಯ ನೀಡಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಪೂರ್ತಿ ಕರ್ನಾಟಕದ ಜನ ಸೈನ್ಯದ ಪರವಾಗಿದ್ದಾರೆ ಎಂದರು.

ಕೆಪಿಸಿಸಿ ಅಹಿಂಸೆಯ ಟ್ವೀಟ್‌ ಕುರಿತಂತೆ ಮಾತನಾಡಿದ ಅವರು, ಭಾರತ ಗಾಂಧೀಜಿ ಶಾಂತಿ ಜಪಿಸಿದ ನಾಡು. ಒಂದು ಕಪಾಳಕ್ಕೆ ಹೊಡೆದರೆ ಮತ್ತೊಂದು ಮುಂದೆ ಮಾಡು ಎಂದಿದ್ದರು. ಆದರೆ, ಹದ್ದು ಮೀರಿದರೆ ನಾವು ಕಪಾಳಮೋಕ್ಷ ಮಾಡಲೇಬೇಕಾಗುತ್ತದೆ. ದೇಶ ರಕ್ಷಣೆ ನಿಟ್ಟಿನಲ್ಲಿ ಸೈನ್ಯ ಏನು ಕ್ರಮಕೈಗೊಳ್ಳುತ್ತದೆಯೋ ಅದಕ್ಕೆ ನಮ್ಮ ಬೆಂಬಲವಿದೆ ಎಂದರು.

ಎಲ್ಲ ಮಸೀದಿಗಳಲ್ಲಿ ಭಾರತ ಸೈನಿಕರ ಪರ ಪ್ರಾರ್ಥನೆಗೆ ಸುತ್ತೋಲೆ ಹೊರಡಿಸಿರುವ ಕುರಿತು ಮಾತನಾಡಿ, ಎಲ್ಲ ಮಸೀದಿಗಳಲ್ಲಿ ದೇಶದ ಪರವಾಗಿ ಮತ್ತು ಸೈನಿಕರ ಪರವಾಗಿ ಪ್ರಾರ್ಥನೆ ಸಲ್ಲಿಸಲು ತಿಳಿಸಿರುವುದಾಗಿ ಹೇಳಿದ್ದು, ಶುಕ್ರವಾರ ಎಲ್ಲೆಡೆ ಪ್ರಾರ್ಥನೆ ಮಾಡಲಾಗಿದೆ. ಆ ಮೂಲಕ ಅಲ್ಪಸಂಖ್ಯಾತರು ಸಂದೇಶ ನೀಡಿದ್ದಾರೆ ಎಂದರು.

ಈ ‍‍ವೇಳೆ ಜಿಲ್ಲಾಧಿಕಾರಿ ದಿವ್ಯಪ್ರಭು, ಕಾಂಗ್ರೆಸ್‌ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.----

ಗಮನ ಸೆಳೆದಿದ್ದ ಕನ್ನಡಪ್ರಭ: ಐದು ವರ್ಷದ ಬಾಲಕಿಯ ಮೇಲೆ ಬಿಹಾರ ಮೂಲದ ರಿತೇಶ್‌ ಕುಮಾರ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿ ಹತ್ಯೆಗೈದಿದ್ದ. ಈ ಸಂಬಂಧ ಅದೇ ದಿನ ಮೃತ ಬಾಲಕಿ ಮನೆಗೆ ಭೇಟಿ ನೀಡಿದ್ದ ಸಲೀಂಅಹ್ಮದ್‌ ಅವರು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು. ಅಲ್ಲದೇ ಸರ್ಕಾರದ ವತಿಯಿಂದ ₹10 ಲಕ್ಷ ಪರಿಹಾರ ಕೊಡಿಸುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಪರಿಹಾರದ ಚೆಕ್‌ ವಿತರಿಸಿದ್ದಾರೆ. ಪರಿಹಾರದ ಚೆಕ್‌ ವಿತರಣೆ ವಿಳಂಬವಾಗಿದ್ದರ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.