ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಜೈನಕಾಶಿ- ವಿದ್ಯಾಕಾಶಿ ಎಂದೇ ಹೆಸರು ಮಾಡಿರುವ ಮೂಡುಬಿದಿರೆಯಲ್ಲಿ ದೇಶದ ವೈವಿಧ್ಯಮಯ ಕಲೆ, ಸಂಸ್ಕೃತಿ ಮಿಳಿತಗೊಂಡ 30ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ‘ಆಳ್ವಾಸ್ ವಿರಾಸತ್’ಗೆ ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಮಂಗಳವಾರ ಅದ್ಧೂರಿಯ ವರ್ಣರಂಜಿತ ಚಾಲನೆ ದೊರೆಯಿತು.ಆರು ದಿನಗಳ ಪರ್ಯಂತ ಮೇಳೈಸಲಿರುವ ವಿರಾಸತ್‌ಗೆ ಚಾಲನೆ ನೀಡಿದ ಶ್ರೀಕ್ಷೇತ್ರ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ವಿರಾಸತ್ ಜ್ಯೋತಿ ಅಖಂಡವಾಗಿ ಬೆಳಗಲಿ ಎಂದು ಆಶಿಸುವುದರೊಂದಿಗೆ ದೇಶದ ಸಾಂಸ್ಕೃತಿಕ ಲೋಕವೇ ಮೂಡುಬಿದಿರೆಯಲ್ಲಿ ಅನಾವರಣಗೊಂಡಿತು.
ಪ್ರಧಾನ ವೇದಿಕೆ- ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಿತ್ಯವೂ ಸಾಂಸ್ಕೃತಿಕ ರಸದೌತಣ ಒಂದೆಡೆಯಾದರೆ, ವಿಶಾಲ ಆಳ್ವಾಸ್ ಕ್ಯಾಂಪಸ್ಸಿನಲ್ಲಿ ಅನ್ವೇಷಣಾತ್ಮಕ ಶತಾಯುಷಿ ಕೃಷಿಕ ಮಿಜಾರುಗುತ್ತು ಆನಂದ ಆಳ್ವರ ಸ್ಮರಣಾರ್ಥ ಕೃಷಿಮೇಳ ಜತೆಗೆ ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳಗಳು ಡಿ.15ರವರೆಗೆ ಉತ್ಸವದ ವಾತಾವರಣ ಮೂಡಿಸಲಿವೆ.ಕಲೆ, ಸಂಸ್ಕೃತಿ ಅನಾವರಣ:
ವಿರಾಸತ್‌ನ ಉದ್ಘಾಟನಾ ಕಾರ್ಯಕ್ರಮದ ಬಳಿಕ 140ಕ್ಕೂ ಅಧಿಕ ತಂಡಗಳ 4 ಸಾವಿರಕ್ಕೂ ಅಧಿಕ ಕಲಾವಿದರ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಕಿಕ್ಕಿರಿದು ಸೇರಿದ್ದ ಸಹಸ್ರಾರು ಪ್ರೇಕ್ಷಕ ವರ್ಗವನ್ನು ದೇಸಿ ಸಂಸ್ಕೃತಿಯ ರಂಗಿನ ಲೋಕಕ್ಕೆ ಕರೆದೊಯ್ದಿತು. ಅತಿಥಿ ಗಣ್ಯರ ಸಮ್ಮುಖದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ದೇಶದೆಲ್ಲೆಡೆಯ ಒಂದೊಂದೇ ತಂಡಗಳು ವೇದಿಕೆಯ ಮುಂಭಾಗದಲ್ಲಿ ಸಾಲಾಗಿ ಸಾಗುತ್ತಾ ತಮ್ಮ ಕಲಾಕೌಶಲ, ಸಾಂಸ್ಕೃತಿಕ ಹಿರಿಮೆಯನ್ನು ಸಾದರಪಡಿಸುತ್ತಿದ್ದುದು ಮೈ ನವಿರೇಳಿಸುವಂತಿತ್ತು. ಸ್ವತಃ ಕಲಾವಿದರಾಗಿರುವ ವಿರಾಸತ್ ರೂವಾರಿ ಡಾ.ಎಂ. ಮೋಹನ್ ಆಳ್ವ ಮಾರ್ಗದರ್ಶನ ನೀಡಿದರು.ವಿಶೇಷ ಅಂಚೆ ಲಕೋಟೆ:
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದ ವಿಶೇಷ ಅಂಚೆ ಲಕೋಟೆಯನ್ನು ಗಣ್ಯರು ಬಿಡುಗಡೆಗೊಳಿಸಿದರು.ಭವ್ಯ ಸಾಂಸ್ಕೃತಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ರಥ ಸಂಚಲನಕ್ಕೆ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಟೀಲಿನ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.
ಸನಾತನ ಸಂಸ್ಕೃತಿ ಅನಾವರಣ:ಸಾಂಸ್ಕೃತಿಕ ಮೆರವಣಿಗೆ ಬಳಿಕ ದೇಶದ ಸನಾತನ ಸಂಸ್ಕೃತಿಯ ಅನಾವರಣವಾಯಿತು. ವೇದಿಕೆ ಮುಂಭಾಗದಲ್ಲಿ ರಥವನ್ನೆಳೆದು ವೇದಘೋಷಗಳು ಮೊಳಗಿದವು. ಭಜನ್‌ಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ವಿಘ್ನ ನಿವಾರಕ ವಿನಾಯಕ, ಸರಸ್ವತಿ, ಲಕ್ಷ್ಮೀ, ಹನುಮಂತ, ಶ್ರೀರಾಮ, ಶ್ರೀಕೃಷ್ಣಾದಿ ಆರೂಢ ದೇವರ ಮೆರವಣಿಗೆ ಜತೆಗೆ ಸಾಂಪ್ರದಾಯಿಕ ರಥಾರತಿಯು ವಿರಾಸತ್‌ಗೆ ವಿಶೇಷ ಮೆರುಗು ತಂದುಕೊಟ್ಟಿತು. ಈ ಮೂಲಕ ಏಕಕಾಲದಲ್ಲಿ ಒಂದೇ ಕಡೆ ಇಷ್ಟೊಂದು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮೊದಲ ದಿನವೇ ಆಳ್ವಾಸ್ ವಿರಾಸತ್ ಸಾಕ್ಷಿಯಾಯಿತು.
ಕೈಮಗ್ಗ ಸೀರೆಗಳ ಉತ್ಸವ:ವಿರಾಸತ್‌ನಲ್ಲಿ ವಿವಿಧ ಮೇಳಗಳ ಜತೆಜತೆಗೆ 30ನೇ ವರ್ಷದ ವಿಶೇಷ ಆಕರ್ಷಣೆಯಾಗಿ, ಕೈಮಗ್ಗ ಸೀರೆಗಳ ಉತ್ಸವವನ್ನು ಆಯೋಜಿಸಲಾಗಿದ್ದು, ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿದೆ.
ಇಂದು ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ30ನೇ ವರ್ಷದ ಆಳ್ವಾಸ್ ವಿರಾಸತ್‌ನ 2ನೇ ದಿನವಾದ ಬುಧವಾರ ಬೆಳಗ್ಗಿನಿಂದಲೇ ಎಲ್ಲ ಮಹಾಮೇಳಗಳು ತೆರೆದಿರಲಿವೆ. ಪ್ರದರ್ಶನ ಮತ್ತು ಮಾರಾಟ ದಿನಪೂರ್ತಿ ನಡೆಯಲಿದೆ. ಸಂಜೆ 5.45ರಿಂದ 6.30ರವರೆಗೆ ಆಳ್ವಾಸ್ ವಿರಾಸತ್- 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಬಾರಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು. 6.35ರಿಂದ 7.30ರವರೆಗೆ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡುವರು. ಬಳಿಕ ರಾತ್ರಿ 7.45ರಿಂದ 9ರವರೆಗೆ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ ರಾತ್ರಿ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ.ಫೋಟೊ
ಪ್ರತ್ಯೇಕ ಬರಲಿದೆ