ಸಂವಿಧಾನದಿಂದ ಜನಸಾಮಾನ್ಯರಿಗೂ ನೆಮ್ಮದಿಯ ಜೀವನ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ

| Published : Jan 27 2025, 12:46 AM IST

ಸಂವಿಧಾನದಿಂದ ಜನಸಾಮಾನ್ಯರಿಗೂ ನೆಮ್ಮದಿಯ ಜೀವನ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನವನ್ನು ದೇಶದ ಪ್ರತಿಯೊಬ್ಬ ಸಾಮಾನ್ಯ ಜನತೆಗೂ ಅನುಕೂಲವಾಗುವ ರೀತಿಯಲ್ಲಿ ರಚಿಸಲಾಗಿದ್ದು, ಸಮಾನತೆಯ ಪ್ರಮುಖ ಉದ್ದೇಶ ಹೊಂದಿದೆ.

ಕಾರವಾರ: ಸಂವಿಧಾನದಲ್ಲಿನ ಸಮಾನತೆಯ ಆಶಯದಂತೆ ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ರಾಜ್ಯದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯ ಜೀವನ ನಡೆಸಲು ಅಗತ್ಯವಿರುವ ಸೌಲಭ್ಯ ಮತ್ತು ಅವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.

ನಗರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋರಣ ನೆರವೇರಿಸಿ ಮಾತನಾಡಿ, ನಮ್ಮ ಸಂವಿಧಾನವನ್ನು ದೇಶದ ಪ್ರತಿಯೊಬ್ಬ ಸಾಮಾನ್ಯ ಜನತೆಗೂ ಅನುಕೂಲವಾಗುವ ರೀತಿಯಲ್ಲಿ ರಚಿಸಲಾಗಿದ್ದು, ಸಮಾನತೆಯ ಪ್ರಮುಖ ಉದ್ದೇಶ ಹೊಂದಿದೆ. ರಾಜ್ಯದಲ್ಲಿ ಪ್ರತಿಯೊಬ್ಬ ಪ್ರಜೆಗೂ ನೆಮ್ಮದಿಯ ಜೀವನದೊಂದಿಗೆ, ಸುರಕ್ಷಿತ ಮತ್ತು ನೆಮ್ಮದಿಯ ವಾತಾವಾರಣ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.

ಜಿಲ್ಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅನುದಾನದ ಕೊರತೆಯಿಲ್ಲ. ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಪ್ರಥಮಾದ್ಯತೆಯನ್ನು ನೀಡಿದ್ದು, ಎಲ್ಲ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲಾಗುತ್ತಿದೆ. ₹2000 ಕೋಟಿ ವೆಚ್ಚದಲ್ಲಿ ಕುಡಿಯವ ನೀರಿನ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ಗೇರುಸೊಪ್ಪ ಜಲಾಶಯದಲ್ಲಿ ₹8000 ಕೋಟಿ ವೆಚ್ಚದಲ್ಲಿ ಜಲವಿದ್ಯುತ್ ಯೋಜನೆಗೆ ಅನುಮೋದನೆ ದೊರೆತಿದೆ. ಕಾರವಾರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗುವುದು ಎಂದ ಸಚಿವರು, ಕ್ಯಾನ್ಸರ್ ಆಸ್ಪತ್ರೆ ಕೂಡಾ ಶೀಘ್ರದಲ್ಲಿ ಕಾರ್ಯರಂಭ ಮಾಡಲಿದೆ ಎಂದರು.

ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಜನತೆಗೆ ತಲುಪಿಸಿದ್ದು, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ₹400 ಕೋಟಿ ಮೊತ್ತದ ಉಚಿತ ಪ್ರಯಾಣ ವ್ಯವಸ್ಥೆ ಮತ್ತು ಗೃಹಲಕ್ಷ್ಮೀ ಯೋಜನೆಯಲ್ಲಿ ₹1000 ಕೋಟಿ ನೆರವು ನೀಡಿದ್ದು, ಗೃಹಜ್ಯೋತಿ ಯೋಜನೆಯಡಿ ₹300 ಕೋಟಿ ಮೊತ್ತದ ಉಚಿತ ವಿದ್ಯುತ್, ಅನ್ನಭಾಗ್ಯ ಯೋಜನೆಯಡಿ ₹250 ಕೋಟಿ ಹಾಗೂ ಯುವನಿಧಿ ಯೋಜನೆಯಡಿ ₹6 ಕೋಟಿ ನೆರವು ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ ₹2000 ಕೋಟಿಗೂ ಅಧಿಕ ನೆರವು ನೀಡಲಾಗಿದೆ ಎಂದರು.

ಧ್ವಜಾರೋಹಣದ ಬಳಿಕ ತೆರೆದ ವಾಹನದಲ್ಲಿ ತೆರಳಿದ ಸಚಿವರು ಗೌರವವಂದನೆ ಸ್ವೀಕರಿಸಿದರು. ಪೊಲೀಸ್, ಅರಣ್ಯ, ಗೃಹರಕ್ಷಕ ದಳ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಕಂದಾಯ ಇಲಾಖೆ, ಜಿಪಂ, ಪೊಲೀಸ್ ಇಲಾಖೆ, ಜಿಲ್ಲಾ ನಗರಾಭಿವೃದ್ಧಿ ಕೋಶದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಮತ್ತು ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ವಿಶೇಷ ಆಹಾರದ ಕಿಟ್ ವಿತರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರಪ್ರೇಮ ಮೂಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಸತೀಶ ಸೈಲ್, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪವಿಭಾಗಾಧಿಕಾರಿ ಕನಿಷ್ಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಇದ್ದರು.