ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಲ್ಲೇಶ್ವರದ ದತ್ತಾತ್ರೇಯ ದೇವಸ್ಥಾನ ವಾರ್ಡ್‌ನಲ್ಲಿನ ರಾಜ್‌ಶಂಕರ್ ಆಟದ ಮೈದಾನದ ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡಲು ಬಿಬಿಎಂಪಿ ಮೂವರು ಮುಖ್ಯ ಎಂಜಿನಿಯರ್‌ಗಳ ಸಮಿತಿ ರಚಿಸಿದೆ. ಜತೆಗೆ ಮೈದಾನದ ಗೇಟ್‌ನ ನಿರ್ವಹಣೆ ಮಾಡದೆ ನಿರ್ಲಕ್ಷ್ಯವಹಿಸಿದ ಸಹಾಯಕ ಎಂಜಿನಿಯರ್‌ನ್ನು ಅಮಾನತುಗೊಳಿಸಲಾಗಿದೆ.ಸುದ್ದಿಗಾರರೊಂದಿಗೆ ಮಾತನಾಡಿರುವ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದುರ್ಘಟನೆಗೆ ಕಾರಣ ತಿಳಿಯಲು ಮೂವರು ಮುಖ್ಯ ಎಂಜಿನಿಯರ್‌ಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ನಡೆಸಿರುವ ಗುತ್ತಿಗೆದಾರ, ಕಾಮಗಾರಿ ಯಾವಾಗ ಪೂರ್ಣಗೊಂಡಿತು, ನಂತರ ನಿರ್ವಹಣೆ ಮಾಡಲಾಗಿದೆಯೇ ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲಿಸಲಿದೆ ಎಂದರು.
ಪಶ್ವಿಮ ವಲಯದ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲು ಮುಂದಾಗಿದ್ದರು. ಆದರೆ, ಆ ವಲಯದಲ್ಲಿ ನಡೆದಿರುವ ಘಟನೆ ಬಗ್ಗೆ ಅವರೇ ವರದಿ ನೀಡಿದರೆ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಹೀಗಾಗಿ ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಹರಿದಾಸ್, ಟಿವಿಸಿಸಿ ಮುಖ್ಯ ಎಂಜಿನಿಯರ್ ವಿಶ್ವನಾಥ್ ಹಾಗೂ ಗುಣಮಟ್ಟ ನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್ ರಾಜೇಂದ್ರ ಪ್ರಸಾದ್ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಸೆ. 30ರೊಳಗೆ ವರದಿ ನೀಡುವಂತೆ ಹೇಳಲಾಗಿದ್ದು, ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.ಸಹಾಯಕ ಎಂಜಿನಿಯರ್ ಅಮಾನತು
ಘಟನೆ ಸಂಬಂಧ ಕಾಮಗಾರಿ ಗುಣಮಟ್ಟ ಪರಿಶೀಲಿಸುವಲ್ಲಿ ಹಾಗೂ ನಿರ್ವಹಣೆ ಮಾಡುವಲ್ಲಿ ವಿಫಲವಾದ ವಾರ್ಡ್‌ನ ಸಹಾಯಕ ಎಂಜಿನಿಯರ್ ಟಿ.ಶ್ರೀನಿವಾಸ ರಾಜು ಅವರನ್ನು ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಆದೇಶಿಸಿದ್ದಾರೆ. ಘಟನೆ ಕುರಿತು ಮೂರು ದಿನದಲ್ಲಿ ವಿವರಣೆ ನೀಡುವಂತೆ ಕಾರ್ಯಪಾಲಕ ಎಂಜಿನಿಯರ್ ಎಲ್.ವೆಂಕಟೇಶ್ ಅವರಿಗೆ ನೋಟಿಸ್ ನೀಡಲಾಗಿದೆ.ಕುಟುಂಬಕ್ಕೆ ₹10 ಲಕ್ಷ: ಗುಂಡೂರಾವ್ಬೆಂಗಳೂರು: ಗೇಟ್ ಬಿದ್ದು ಸಾವನ್ನಪ್ಪಿದ ಬಾಲಕನ ಕುಟುಂಬದವರಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.ಪ್ಯಾಲೇಸ್ ಗುಟ್ಟಹಳ್ಳಿಯ ವಿವೇಕಾನಂದ ಬ್ಲಾಕ್‌ನಲ್ಲಿನ ನಿವಾಸದಲ್ಲಿ ಮೃತ ಬಾಲಕ ನಿರಂಜನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ದಿನೇಶ್ ಗುಂಡೂರಾವ್ ಪಾಲಕರಿಗೆ ಸಾಂತ್ವನ ಹೇಳಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮೃತ ಬಾಲಕನ ಕುಟುಂಬದವರಿಗೆ ಬಿಬಿಎಂಪಿ ಮತ್ತು ಸರ್ಕಾರದಿಂದ ₹5 ಲಕ್ಷ ಪರಿಹಾರ ನೀಡಲಾಗುವುದು. ಜತೆಗೆ ಗಾಂಧಿನಗರದ ಬ್ಲಾಕ್ ಕಾಂಗ್ರೆಸ್‌ನಿಂದ ₹5 ಲಕ್ಷ ಸೇರಿಸಿ ಒಟ್ಟು ₹10 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.ಮೈದಾನದ ಕಾಮಗಾರಿ ಗುಣಮಟ್ಟದ ಪರಿಶೀಲನೆಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ಜತೆಗೆ ಮಾತನಾಡಿದ್ದೇನೆ. ಘಟನೆಯಲ್ಲಿ ನಿರ್ಲಕ್ಷ್ಯವಹಿಸಿದ ಹಾಗೂ ಗುಣಮಟ್ಟದ ಕಾಮಗಾರಿ ನಡೆಸದ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸರ್ಕಾರ ಸತ್ತು ಹೋಗಿದೆ: ಪಿ.ಸಿ.ಮೋಹನ್ ಆಕ್ರೋಶನಿರಂಜನ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಸಂಸದ ಪಿ.ಸಿ.ಮೋಹನ್ ಅವರು, ಕಳಪೆ ಕಾಮಗಾರಿಯಿಂದ ಬಾಲಕ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಪಟ್ಟಂತೆ ಮುಖ್ಯ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರದೆಲ್ಲೆಡೆ ರಸ್ತೆ ಗುಂಡಿ ಸೃಷ್ಟಿಯಾಗಿ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಅದರ ನಡುವೆಯೇ ಕಳಪೆ ಕಾಮಗಾರಿಯಿಂದ ಗೇಟ್ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಸರ್ಕಾರ ಸತ್ತು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))