ಸಮರ್ಥ ಶಿಕ್ಷಕ ಉತ್ತಮ ರಾಷ್ಟ್ರ ನಿರ್ಮಾಪಕ

| Published : Apr 02 2024, 01:04 AM IST

ಸಮರ್ಥ ಶಿಕ್ಷಕ ಉತ್ತಮ ರಾಷ್ಟ್ರ ನಿರ್ಮಾಪಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಇಂದಿನ ಪ್ರಶಿಕ್ಷಣಾರ್ಥಿಗಳು ಭಾವಿ ಶಿಕ್ಷಕರು. ಇಂತಹ ಬಹುದೊಡ್ಡ ಪಾತ್ರ ನಿರ್ವಹಿಸಲು ಅಣಿಯಾಗುವ ಪ್ರಶಿಕ್ಷಣಾರ್ಥಿಗಳು ಜವಾಬ್ದಾರಿಯುತವಾಗಿ ಮುನ್ನಡೆಯಬೇಕು ಎಂದು ಭಾಷ್ ಇಂಡಿಯಾ ಫೌಂಡೇಶನ್ ಕ್ಷೇತ್ರ ನಿರ್ದೇಶಕ ಡಾ.ಎಂ.ಪುಂಡಲೀಕ ಕಾಮತ್ ಹೇಳಿದರು.

ರಾಮನಗರ: ಇಂದಿನ ಪ್ರಶಿಕ್ಷಣಾರ್ಥಿಗಳು ಭಾವಿ ಶಿಕ್ಷಕರು. ಇಂತಹ ಬಹುದೊಡ್ಡ ಪಾತ್ರ ನಿರ್ವಹಿಸಲು ಅಣಿಯಾಗುವ ಪ್ರಶಿಕ್ಷಣಾರ್ಥಿಗಳು ಜವಾಬ್ದಾರಿಯುತವಾಗಿ ಮುನ್ನಡೆಯಬೇಕು ಎಂದು ಭಾಷ್ ಇಂಡಿಯಾ ಫೌಂಡೇಶನ್ ಕ್ಷೇತ್ರ ನಿರ್ದೇಶಕ ಡಾ.ಎಂ.ಪುಂಡಲೀಕ ಕಾಮತ್ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜು ವತಿಯಿಂದ ಆಯೋಜಿಸಿದ್ದ ಸಮುದಾಯ ಜೀವನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸುಧಾರಣೆಯ ನಿಜವಾದ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯ. ಪ್ರಶಿಕ್ಷಣಾರ್ಥಿಗಳು ತರಬೇತಿ ಸಮಯದಲ್ಲಿ ಶಿಸ್ತು ಸಮಯಪ್ರಜ್ಞೆ ಮತ್ತು ನೈತಿಕ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಶಿಕ್ಷಕರಾಗಿ ಮಕ್ಕಳ ಮನಸ್ಸು ಗೆಲ್ಲಲು ಸಾಧ್ಯವಾಗುತ್ತದೆ. ಹೊಸ ವಿಷಯಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದರು.

ಸಮರ್ಥ ಶಿಕ್ಷಕ ಉತ್ತಮ ರಾಷ್ಟ್ರ ನಿರ್ಮಾಪಕ ಎಂಬುದು ಅತಿಶಯೋಕ್ತಿಯ ಮಾತಲ್ಲ. ಒಂದು ಸದೃಢ ರಾಷ್ಟ್ರವನ್ನು ನಿರ್ಮಾಣ ಮಾಡುವುದಕ್ಕೆ ಶಿಕ್ಷಕ ಸಮುದಾಯದಿಂದ ಮಾತ್ರವೇ ಸಾಧ್ಯ. ಅದರಲ್ಲಿಯೂ ಪ್ರಾಥಮಿಕ, ಪ್ರೌಢಶಾಲಾ ಹಂತದ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಬೀರುವ ಪ್ರಭಾವವನ್ನು ಮತ್ತಾರೂ ಬೀರಲು ಸಾಧ್ಯವಿಲ್ಲ. ತಮ್ಮ ಭವಿಷ್ಯತ್ತಿಗೆ ಬಾಲ್ಯದಲ್ಲೇ ಬುನಾದಿ ಹಾಕಿದ ಶಿಕ್ಷಕರನ್ನು-ಉಪನ್ಯಾಸಕರು, ಪ್ರಾಧ್ಯಾಪಕರೂ ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ ಶಿಕ್ಷಕರು ಸದಾ ಅಭಿನಂದನಾರ್ಹರಾಗಿರುತ್ತಾರೆ ಎಂದರು.

ಕಾವೇರಿ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ದೇವರಾಜಪ್ಪ ಮಾತನಾಡಿ, ಪ್ರಶಿಕ್ಷಣಾರ್ಥಿಗಳು ತಮ್ಮ ಜೀವನದಲ್ಲಿ ಪರಿಮಾಣಾತ್ಮಕ ನಿರ್ಧಾರಗಳಿಂದ ಮೌಲ್ಯಯುತ ಬದುಕು ಕಟ್ಟಿಕೊಳ್ಳಲು ಸಾದ್ಯವಾಗುತ್ತದೆ. ತಮ್ಮ ವ್ಯಕ್ತಿತ್ವವನ್ನು ಆದರ್ಶಮಯವಾಗಿಟ್ಟಿಕೊಂಡಿರಬೇಕು. ಶಿಸ್ತು, ಪ್ರಾಮಾಣಿಕತೆ ಗುಣಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.

ಶಿಕ್ಷಕರಾಗುವವರು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ವರ್ಗದಲ್ಲಿ ಚಟುವಟಿಕೆಗಳನ್ನು ರೂಪಿಸಿದರೆ, ಕಲಿಕೆ ಪರಿಣಾಮಕಾರಿಯಾಗುತ್ತದೆ. ಪಠ್ಯ ಚಟುವಟಿಕೆಗಳಲ್ಲಿ ಮಕ್ಕಳ ಆಸಕ್ತಿ ಕೆರಳಿಸಬೇಕು. ಬೋಧನೆ-ಕಲಿಕೆ ಪ್ರಕ್ರಿಯೆ ಆಸಕ್ತಿದಾಯಕವಾಗಿರುವಂತೆ ನೋಡಿಕೊಳ್ಳಬೇಕು. ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಂಡಾಗ ಪರಿಪೂರ್ಣ ಶಿಕ್ಷಕನಾಗಲು ಸಾದ್ಯ. ಅಂತಹ ಪ್ರವೃತ್ತಿಯನ್ನು ಭಾವಿ ಶಿಕ್ಷಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ. ರಾಜೇಶ್ ಮಾತನಾಡಿ, ಶಿಕ್ಷಣ ಸಂಸ್ಕಾರ ಕಲಿಸುವ ಪ್ರಮುಖ ಅಸ್ತ್ರವಾಗಿದೆ ಎಂಬುದನ್ನು ಮರೆಯಬಾರದು. ಸಮಾಜ ಹಾಗೂ ನಾಡಿಗೆ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಗಳನ್ನು ನೀಡುವುದು ಧ್ಯೇಯವಾಗಬೇಕು. ಮಕ್ಕಳಿಗೆ ಆರಂಭದಿಂದಲೇ ನೈತಿಕ ಶಿಕ್ಷಣ ನೀಡಿದರೆ ಭವಿಷ್ಯದ ಪ್ರಜೆಗಳಾಗಿರುವ ಇಂದಿನ ಮಕ್ಕಳು ಭ್ರಷ್ಟಾಚಾರಗಳಿಂದ ದೂರ ಇರುತ್ತಾರೆ. ತಪ್ಪು ಮಾಡಿದರೆ ಪಾಪಪ್ರಜ್ಞೆ ಅವರಲ್ಲಿ ಕಾಡುತ್ತದೆ. ಹೀಗಾಗಿ ದೇಶದ ಭವಿಷ್ಯ ರೂಪಿಸುವ ಹೊಣೆ ಹೊತ್ತಿರುವ ಶಿಕ್ಷಕರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ಕೊಡುಗೆಯಾಗಿ ನೀಡಿ ಎಂದರು.

ಶಿಬಿರದ ಮುಖ್ಯಸ್ಥೆ ಬಿಂದುಕುಮಾರ್, ಶಿಬಿರದ ಸಂಯೋಜಕ ಚಂದ್ರಮೌಳೇಶ್ ಇತರರಿದ್ದರು. 31ಕೆಆರ್ ಎಂಎನ್ 9.ಜೆಪಿಜಿ

ರಾಮನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜು ಆಯೋಜಿಸಿದ್ದ ಸಮುದಾಯ ಜೀವನ ಶಿಬಿರವನ್ನು ಪ್ರಶಿಕ್ಷಣಾರ್ಥಿಗಳು ಉದ್ಘಾಟಿಸಿದರು.