ಐವಾನ್‌ ಹೇಳಿಕೆ ವಿರುದ್ಧ ಬಿಜೆಪಿ ವಕೀಲರ ಪ್ರಕೋಷ್ಟದಿಂದ ದೂರು ದಾಖಲು

| Published : Aug 23 2024, 01:11 AM IST

ಐವಾನ್‌ ಹೇಳಿಕೆ ವಿರುದ್ಧ ಬಿಜೆಪಿ ವಕೀಲರ ಪ್ರಕೋಷ್ಟದಿಂದ ದೂರು ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ವಿಧಾನಪರಿಷತ್ತು ಸದಸ್ಯ ಐವಾನ್‌ ಡಿಸೋಜಾ ಮಂಗಳೂರಿನಲ್ಲಿ ಆ.19ರಂದು ಪ್ರತಿಭಟನೆ ವೇಳೆ ರಾಜ್ಯಪಾಲರು ಮತ್ತು ರಾಜ್ಯಪಾಲರ ಕಚೇರಿ ಮೇಲೆ ಬಾಂಗ್ಲಾ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ರಾಷ್ಟ್ರವಿರೋಧಿ ಹೇಳಿಕೆ ನೀಡಿದ್ದಾರೆ. ಇಂಥ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಬಿಜೆಪಿ ವಕೀಲರ ಪ್ರಕೋಷ್ಟದ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ದೂರು ದಾಖಲು ಮಾಡಲಾಗಿದೆ.

- ಪ್ರಚೋದನಾಕಾರಿ ಹೇಳಿಕೆ ಹಿನ್ನೆಲೆ ಪ್ರಕರಣ ದಾಖಲಿಸಲು ಎಸ್‌ಪಿಗೆ ಒತ್ತಾಯ

- ಪೊಲೀಸ್‌ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಮುಖಂಡರ ಮನವಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾಂಗ್ರೆಸ್‌ ವಿಧಾನಪರಿಷತ್ತು ಸದಸ್ಯ ಐವಾನ್‌ ಡಿಸೋಜಾ ಮಂಗಳೂರಿನಲ್ಲಿ ಆ.19ರಂದು ಪ್ರತಿಭಟನೆ ವೇಳೆ ರಾಜ್ಯಪಾಲರು ಮತ್ತು ರಾಜ್ಯಪಾಲರ ಕಚೇರಿ ಮೇಲೆ ಬಾಂಗ್ಲಾ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ರಾಷ್ಟ್ರವಿರೋಧಿ ಹೇಳಿಕೆ ನೀಡಿದ್ದಾರೆ. ಇಂಥ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಬಿಜೆಪಿ ವಕೀಲರ ಪ್ರಕೋಷ್ಟದ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ದೂರು ದಾಖಲು ಮಾಡಲಾಗಿದೆ.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಬಳಿ ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಎ.ಸಿ.ರಾಘ‍ವೇಂದ್ರ ಮೊಹರೆ, ಜಿಲ್ಲಾ ಸಂಚಾಲಕ ಎಚ್.ದಿವಾಕರ ಇತರರ ನೇತೃತ್ವದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

ಬಿಜೆಪಿ ಕಾನೂನು ಪ್ರಕೋಷ್ಟದ ಮುಖಂಡರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ಹಗರಣ ತನಿಖೆಗೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ, ಇದನ್ನು ವಿರೋಧಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಎಂಎಲ್‌ಸಿ ಐವಾನ್ ಡಿಸೋಜಾ ರಾಜ್ಯಪಾಲರು ಹಿಂದಕ್ಕೆ ಹೋಗಬೇಕು. ಹೋಗದಿದ್ದರೆ ಬಾಂಗ್ಲಾ ದೇಶದಲ್ಲಾದ ರೀತಿಯಲ್ಲಿ ರಾಜ್ಯಪಾಲರ ಕಚೇರಿಗೂ ದಾಳಿ ಮಾಡಬೇಕಾಗುತ್ತದೆ. ಅದನ್ನು ಮಾಡಿಯೇ ಮಾಡುತ್ತೇವೆ ಎಂದಿರುವುದು ಪ್ರಚೋದನಾಕಾರಿ ಹೇಳಿಕೆಯಾಗಿದೆ. ಇಂತಹ ಐವಾನ್ ಡಿಸೋಜಾ ವಿರುದ್ಧ ಪೊಲೀಸ್ ಇಲಾಖೆ ಮೊದಲು ಕ್ರಮ ಕೈಗೊಳ್ಳಲಿ ಎಂದರು.

ಸಚಿವರಾದ ಕೃಷ್ಣ ಭೈರೇಗೌಡ, ಜಮೀರ್ ಅಹಮ್ಮದ್‌ ಖಾನ್‌ ಸಹ ಸಾಂವಿಧಾನಿಕ ಹುದ್ದೆ ಹೊಂದಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಮಾನ ಮರ್ಯಾದೆ ಇದೆಯಾ? ನಾಚಿಕೆ ಇದೆಯಾ ಅಂತೆಲ್ಲಾ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ. ರಾಜ್ಯದಲ್ಲಿ ಗಲಭೆ ನಡೆದರೆ ಅದಕ್ಕೆ ರಾಜ್ಯಪಾಲರೇ ಹೊಣೆ. ಜನ ಸುಮ್ಮನೇ ಕೂಡುವುದಿಲ್ಲ ಎಂಬ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಸಹ ಪ್ರಚೋದನಾಕಾರಿಯಾಗಿದೆ ಎಂದು ಆರೋಪಿಸಿದರು.

ಮನವಿ ಸಲ್ಲಿಕೆ ಸಂದರ್ಭ ಬಿಜೆಪಿ ಕಾನೂನು ಪ್ರಕೋಷ್ಟದ ಯು.ಜಿ.ಪಾಟೀಲ, ಅಜೇಯ ಇತರರು ಇದ್ದರು.

- - -

ಕೋಟ್‌

ರಾಜ್ಯಪಾಲರು ರಾಜ್ಯದ ಪ್ರಥಮ ಪ್ರಜೆ ಹಾಗೂ ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅಂಥವರನ್ನೇ ಕಾಂಗ್ರೆಸ್‌ ನಾಯಕರು ಅವಮಾನಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗಡಿಸುವ ದುರುದ್ದೇಶದಿಂದಲೇ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಿದ್ದಾರೆ

- ಮುಖಂಡರು, ಬಿಜೆಪಿ ವಕೀಲರ ಪ್ರಕೋಷ್ಟ

- - - -22ಕೆಡಿವಿಜಿ1:

ರಾಜ್ಯಪಾಲರ ನಿಂದಿಸಿದ ಕಾಂಗ್ರೆಸ್‌ ನಾಯಕರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮ ಜರುಗಿಸುವಂತೆ ಒತ್ತಾಯಿಸಿ ದಾವಣಗೆರೆಯಲ್ಲಿ ಎಸ್‌ಪಿ ಅವರಿಗೆ ಬಿಜೆಪಿ ಕಾನೂನು ಪ್ರಕೋಷ್ಟದಿಂದ ಮನವಿ ಸಲ್ಲಿಸಲಾಯಿತು.