ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ನಾಡ ಕಚೇರಿ ಕಂಪ್ಯೂಟರ್ ಆಪರೇಟರ್ ನನ್ನ ಸಾವಿಗೆ ಉಪತಹಶೀಲ್ದಾರ್ ರವರೇ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ನಾಡ ಕಚೇರಿ ಒಳಗೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ಜರುಗಿದೆ.
ತಾಲೂಕಿನ ಹರತಲೆ ಗ್ರಾಮದ ಪರಮೇಶ್(೩೫) ಆತ್ಮಹತ್ಯೆ ಮಾಡಿಕೊಂಡವರು.ಪರಮೇಶ್ ಕಳೆದ ಹಲವಾರು ವರ್ಷಗಳಿಂದಲೂ ಸಹ ಹುಲ್ಲಹಳ್ಳಿ ನಾಡ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಮಧ್ಯಾಹ್ನ ೪ ಗಂಟೆ ವೇಳೆಯಲ್ಲಿ ಕಚೇರಿಯಲ್ಲಿಯೇ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ನನಗೆ ಕಳೆದ ಏಪ್ರಿಲ್ ತಿಂಗಳಿನಿಂದ ಸಂಬಳ ಆಗದೆ ಇರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ. ಜೊತೆಗೆ ಹುಲ್ಲಹಳ್ಳಿ ನಾಡ ಕಚೇರಿಯ ಉಪ ತಹಶೀಲ್ದಾರ್ ಎನ್.ಪಿ.ಶಿವಕುಮಾರ್ ರವರು ನಾನೊಬ್ಬ ಅಂಗವಿಕಲ ಎನ್ನುವುದು ಗೊತ್ತಿದ್ದರೂ ಸಹ ವಯಕ್ತಿಕ ದ್ವೇಷ ಸಾಧಿಸುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದರು. ಆದ್ದರಿಂದ ನಾನು ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ನನ್ನ ಸಾವಿಗೆ ನೇರವಾಗಿ ಉಪ ತಹಶೀಲ್ದಾರ್ ಎನ್.ಪಿ.ಶಿವಕುಮಾರ್ ರವರೇ ನೇರ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ವಾಟ್ಸಪ್ ಸ್ಟೇಟಸ್ನಲ್ಲಿ ಹಾಕಿ ವಿಷ ಸೇವಿಸಿದ್ದರು. ಸಾವು ಮತ್ತು ಬದುಕಿನ ನಡುವೆ ಒದ್ದಾಡುತ್ತಿದ್ದಾಗ ಸ್ಥಳೀಯರು ಅವರನ್ನು ಹುಲ್ಲಹಳ್ಳಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.