ಸಾರಾಂಶ
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮಾಡಿರುವ ಮಹಾದ್ರೋಹ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಸಂಯಕ್ತ ಹೋರಾಟ-ಕರ್ನಾಟಕ ವತಿಯಿಂದ ನ.26ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆ ಸಂಬಂಧ ನಡೆದ ಪೂರ್ವಸಿದ್ದತಾ ಸಭೆ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಸರ್ವೊದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದಾಗಿ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದ ಪ್ರಧಾನಿ ಮೋದಿರವರು ಈಗ ಬೆಂಬಲ ಬೆಲೆ ನೀಡಲು ಆಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಇದು ದೇಶದ ರೈತರಿಗೆ ಮಾಡಿದ ಮಹಾದ್ರೋಹವಾಗಿದೆ. ಕೃಷಿಗೆ ಮಾಡಿದ ಸಾಲ ತೀರಿಸಲು ಆಗದೆ ರೈತ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾನೆಂದರು.
ರೈತರ ಆತ್ಮಹತ್ಯೆಗೆ ಮೂಲ ಕಾರಣ ಸಾಲ. ಹಾಗಾಗಿ ಬೆಂಬಲ ಬೆಲೆ ರೂಪಿಸಿ ಕಾನೂನು ರೂಪ ಕೊಡಬೇಕು. ಅದೇ ರೀತಿ ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರವೃತ್ತಿ ಕೈಬಿಟ್ಟು ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಬೇಕು. ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಅನುದಾನ ತರಲು ಯತ್ನಿಸಬೇಕು. ಜೊತೆಗೆ ತನ್ನ ಪಾಲಿನ ಆರ್ಥಿಕ ನಿರ್ವಹಣೆ ಮಾಡುವುದರ ಮೂಲಕ ನಿಗದಿತ ಅವಧಿಯೊಳಗೆ ಯೋಜನೆ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ವಿವಿ ಸಾಗರ ಹಿನ್ನೀರಿನ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಿ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ವಿದ್ಯುತ್ ಖಾಸಗೀಕರಣವಾಗಬಾರದು. ಭೂಮಿ ಸಾಗುವಳಿ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು. ಬ್ಯಾಂಕ್‍ಗಳು ಸಾಲ ವಸೂಲು ಮಾಡುವುದನ್ನು ನಿಲ್ಲಿಸಬೇಕು. ಸ್ವಾಮಿನಾಥನ್ ವರದಿ ಪ್ರಕಾರ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದರು.ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ಮಾತನಾಡಿ, ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ಪತ್ರ ನೀಡಬೇಕು. ಭೂಮಿಗಾಗಿ ಅರ್ಜಿ ಸಲ್ಲಿಸಿರುವವರನ್ನು ಒಕ್ಕಲೆಬ್ಬಿಸಬಾರದು. ಅರಣ್ಯ ಇಲಾಖೆ ದೌರ್ಜನ್ಯ ಕಿರುಕುಳ ನಿಲ್ಲಬೇಕು. ಜಿಲ್ಲೆಯ ಗ್ರಾಮೀಣ ನಗರ ಪ್ರದೇಶಗಳೊಳಗೊಂಡಂತೆ ವಸತಿ ರಹಿತರಿಗೆ ನಿವೇಶನ, ಮನೆಗಳ ಹಂಚಿಕೆ ಸೇರಿ ಹತ್ತು ಹಲವಾರು ಬೇಡಿಕೆ ಮುಂದಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ನ.26ರ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ತಿಳಿಸಿದರು.
ರೈತ ಮುಖಂಡರಾದ ಧನಂಜಯ ಹಂಪಯ್ಯನಮಾಳಿಗೆ, ಮಲ್ಲಿಕಾರ್ಜುನ್ ಡಿ.ಎಸ್ ಹಳ್ಳಿ, ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ನಿತ್ಯಶ್ರೀ, ಕೆ.ಟಿ. ತಿಪ್ಪೇಸ್ವಾಮಿ, ಸತ್ಯಪ್ಪ ಮಲ್ಲಾಪುರ, ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ. ಗೌಸ್‍ಪೀರ್, ರೈತ ಸಂಘದ ಸಿದ್ದರಾಮಪ್ಪ, ಎಐಡಿಎಸ್ಓ ರವಿಕುಮಾರ್, ಕರ್ನಾಟಕ ರಾಜ್ಯ ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾ ಇನ್ನು ಉಪಸ್ಥಿತರಿದ್ದರು.-------------ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಂಯುಕ್ತ ಹೋರಾಟ ಕರ್ನಾಟಕದ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನ.26ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಕರಪತ್ರ ಬಿಡುಗಡೆ ಮಾಡಲಾಯಿತು.- 23 ಸಿಟಿಡಿ5.