ಬಂಡವಾಳ ಶಾಹಿಗಳು, ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ

| Published : Aug 18 2024, 01:45 AM IST / Updated: Aug 18 2024, 01:46 AM IST

ಬಂಡವಾಳ ಶಾಹಿಗಳು, ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಕೆಲವು ದಿನಗಳಿಂದ ತರಳಬಾಳು ಮಠದ ವಿಚಾರವಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದು, ಅವು ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷಗಳಾಗಿವೆ ಎಂದು ತರಳಬಾಳು ಮಠದ ಕಾರ್ಯದರ್ಶಿ ವಾಗ್ದಾಳಿ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಕೆಲವು ದಿನಗಳಿಂದ ತರಳಬಾಳು ಮಠದ ವಿಚಾರವಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದು, ಅವು ಬಂಡವಾಳ ಶಾಹಿಗಳು ಮತ್ತು ನಿಷ್ಠಾವಂತ ಭಕ್ತರ ನಡುವಿನ ಸಂಘರ್ಷಗಳಾಗಿವೆ ಎಂದು ತರಳಬಾಳು ಮಠದ ಕಾರ್ಯದರ್ಶಿ ವಾಗ್ದಾಳಿ ನಡೆಸಿದ್ದಾರೆ.ಮಠದ ವೆಬ್‌ಸೈಟಿನಲ್ಲಿ ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಟ್ರಸ್ಟ್‌ ಡೀಡ್‌ ಬಗ್ಗೆ ದೀರ್ಘವಾಗಿ ಬರೆದಿರುವ ಕಾರ್ಯದರ್ಶಿ ವಾಸ್ತವವಾಗಿ ಇದು ಶ್ರೀಗಳು ಮತ್ತು ಶಿಷ್ಯರ ನಡುವಿನ ಸಂಘರ್ಷವಲ್ಲ ಎಂದಿದ್ದಾರೆ.ಮಠದ ವಿರುದ್ಧ ಮಿಥ್ಯಾರೋಪಗಳ ಜಾಹೀರಾತು ಕೊಟ್ಟು ವಿಕೃತ ಅಟ್ಟಹಾಸ ಮೆರೆಯುವುದನ್ನು ನೋಡಿದರೆ “ಊರೆಲ್ಲಾ ಉಗಾದಿ ಮಾಡಿದರೆ ಅಡ್ನಾಡಿ ಅಮಾವಾಸ್ಯೆ ಮಾಡಿದನಂತೆ” ಎಂಬ ಗಾದೆ ಮಾತು ನೆನಪಾಗುತ್ತದೆ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಾಧು ಸದ್ಧರ್ಮ ಸಂಘದ ಬೈಲಾ ಮತ್ತು ಮಠದ ಟ್ರಸ್ಟ್‌ ಡೀಡ್‌ ಬಗ್ಗೆ ಅನೇಕ ಬಾರಿ ಸ್ಪಷ್ಟೀಕರಣ ನೀಡಿದ್ದರೂ ಪದೇಪದೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಅವ್ಯಾಹತವಾಗಿ ಅಪಪ್ರಚಾರ ನಡೆಸಲಾಗುತ್ತಿದೆ.ವಾಸ್ತವವಾಗಿ ಮಠದ ಟ್ರಸ್ಟ್ ಡೀಡಿನ 12 ನೆಯ ಕಲಂನಲ್ಲಿ ಯಾವುದೇ ಆಸ್ತಿ/ಹಣ ಶ್ರೀ ಜಗದ್ಗುರುಗಳವರ ಹೆಸರಿನಲ್ಲಾಗಲೀ , ಶಾಖಾಮಠದ ಸ್ವಾಮಿಗಳ ಹೆಸರಿನಲ್ಲಾಗಲೀ ಅಥವಾ ಮಠದಿಂದ ವ್ಯವಹರಿಸಿದ ಯಾವ ವ್ಯಕ್ತಿಯ ಹೆಸರಿನಲ್ಲಾಗಲೀ ಇದ್ದರೆ ಅದೆಲ್ಲವೂ ಮಠಕ್ಕೇ ಸೇರಿದ್ದೆಂದು ಸ್ಪಷ್ಟವಾಗಿ ವಿವರಿಸಲಾಗಿದೆ.

ನಿಜ ಸಂಗತಿ ಹೀಗಿದ್ದರೂ ಶ್ರೀ ಜಗದ್ಗುರುಗಳ ಮಠದ ಎಲ್ಲಾ ಆಸ್ತಿಪಾಸ್ತಿಗಳನ್ನು ತಮ್ಮ ಸ್ವಂತ ಹೆಸರಿಗೆ ಮಾಡಿಕೊಂಡಿದ್ದಾರೆಂದೂ, ಕಳೆದ 35 ವರ್ಷಗಳಿಂದ ಯಾರ ಗಮನಕ್ಕೂ ತರದೆ ಟ್ರಸ್ಟ್ ಡೀಡನ್ನು ಮುಚ್ಚಿಟ್ಟುಕೊಂಡಿದ್ದಾರೆಂದೂ ಕೆಲವರು ಮಿಥ್ಯಾರೋಪ ಮಾಡಿ ಇದನ್ನು ರದ್ದುಪಡಿಸಬೇಕೆಂದು ಬಹಿರಂಗವಾಗಿ ಮತ್ತು ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಿ ಮಠದ ಮತ್ತು ಸಮಾಜದ ಗೌರವಾದರಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ ಎಂದಿದ್ದಾರೆ.ಕೆಲವು ಬಂಡವಾಳ ಶಾಹಿಗಳು ಮಠದ ಮೇಲೆ ಹಿಡಿತ ಸಾಧಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಮಾಡುತ್ತಿರುವ ಹುನ್ನಾರ ಮತ್ತು ದುಷ್ಕೃತ್ಯ ಇದಾಗಿದೆ ಎಂದು ಕಾರ್ಯದರ್ಶಿ ಹರಿಹಾಯ್ದಿದ್ದಾರೆ.