ಸಾಂತ್ವನ ಹೇಳುವ ಕೆಲಸ ಮಾಡದ ಕಾಂಗ್ರೆಸ್‌ ಸರ್ಕಾರ

| Published : May 05 2024, 02:00 AM IST

ಸಾರಾಂಶ

ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಕೆ.ಎಚ್‌.ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿರು.

ಕನ್ನಡಪ್ರಭ ವಾರ್ತೆ ಬೆಳಗಾವಿಅಧಿವೇಶನ ನಡೆಯುವ ಸಂದರ್ಭದಲ್ಲಿ ಬೆಳಗಾವಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಯಿತು. ಅಲ್ಲಿಗೆ ಯಾವ ಸಚಿವರು, ಶಾಸಕರು ಹೋಗಿ ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.ಬೆಳಗಾವಿ ತಾಲೂಕಿನ ಬಾಳೆಕುಂದ್ರಿ ಕೆ.ಎಚ್‌.ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ನೇಹಾ ಹತ್ಯೆ ಪ್ರಕರಣ, ಮೊನ್ನೆಯಷ್ಟೆ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ಸುವ್ಯವಸ್ಥೆ ‌ಸಂಪೂರ್ಣ ಹಾಳಾಗಿದೆ ಎಂದು ಆರೋಪಿಸಿದರು.ಯಡಿಯೂರಪ್ಪ ಸಿಎಂ ಆಗುವ ಮುನ್ನ ಬರಗಾಲವಿತ್ತು. ಯಡಿಯೂರಪ್ಪ ಸಿಎಂ ಆದ ನಂತರ ಮಹಾಪ್ರವಾಹ ಆಗಿ ಬೆಳೆ, ಮನೆ ಎಲ್ಲವೂ ಹಾನಿಯಾಗಿತ್ತು. ಯಡಿಯೂರಪ್ಪ ಏಕಾಂಗಿಯಾಗಿದ್ದರು. ಕ್ಯಾಬಿನೇಟ್ ಸಹ ಇನ್ನೂ ಆಗಿರಲಿಲ್ಲ. ಪ್ರತಿ ಹೆಕ್ಟೇರ್‌ಗೆ ₹14 ಸಾವಿರ, ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ಕೊಟ್ಟಿದ್ದರು. ಈಗಲೂ ಬರಗಾಲ ಇದೆ. ಆದರೆ, ಕಾಂಗ್ರೆಸ್ ಸರ್ಕಾರ ಬರಿ ₹2 ಸಾವಿರ ಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮಗೆ ಒಳ್ಳೆದು ಮಾಡಿ ಅಂತ ದೇವರಿಗೆ ಮೊರೆ ಇಡುತ್ತೇವೆ. ಮೇ 7 ರಂದು ಮತ್ತೊಂದು ಪುಷ್ಪಾರ್ಚನೆ ಮಾಡಿ ದೇವರಿಗೆ ಬೇಡಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ. ಅವರ ಆಯಸ್ಸು ವೃದ್ಧಿಸಲಿ ಎಂದು ಪ್ರಾರ್ಥನೆ ಮಾಡಿ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು ನನ್ನ ಸಂಕಲ್ಪ.‌ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್ ಗೆಲ್ಲಬೇಕು. ಶೆಟ್ಟರ್ ಅವರನ್ನು ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಿ, ಈ ಸಂಕಲ್ಪಕ್ಕೆ ನೀವೆಲ್ಲರೂ ಕೈ ಜೋಡಿಸಿಬೇಕು ಎಂದು ಮನವಿ ಮಾಡಿದರು.10 ದಿನದ ಹಿಂದೆ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿತ್ತು. ಆಗ ಮೋದಿ ಒಂದು ಮಾತು ಹೇಳಿದರು. ಮೈ ಇಸ್ ದೇಶ್ ಕೋ ರುಕ್ನೆ ನಹಿ ದೂಂಗಾ. ಮೈ ಇಸ್ ದೇಶ್ ಕೋ ದುಕ್ನೆ ನಹಿ ದೂಂಗಾ ಅಂತ ಮೋದಿ ಹೇಳಿದ್ದಾರೆ. 2014ರಲ್ಲಿ ಮೋದಿ ಪ್ರಧಾನಿಯಾದಾಗ ಈ ದೇಶಕ್ಕೆ ಭವಿಷ್ಯ ಇಲ್ಲ ಎನ್ನುವ ಮಾತು ಆಡುತ್ತಿದ್ದರು.‌ ಮೋದಿಯವರು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಿ ತೋರಿಸಿದ್ದಾರೆ. ಭಾರತವನ್ನು ವಿಶ್ವದ ಅಗ್ರಗಣ್ಯ ದೇಶಗಳೊಂದಿಗೆ ಕೊಂಡೊಯ್ಯಬಹುದು ಎಂದು ಮೋದಿ ತೋರಿಸಿದ್ದಾರೆ. ಒಂದು ದಿನವೂ ರಜೆ ವಿಶ್ರಾಂತಿ ತೆಗೆದುಕೊಳ್ಳದೇ ಮೋದಿ ಕೆಲಸ ಮಾಡುತ್ತಿದ್ದಾರೆ.‌ ಇಂತಹ ಪ್ರಧಾನಿ ನಮಗೆ ಸಿಕ್ಕಿದ್ದು ಸಂತೋಷ ಮತ್ತು ಹೆಮ್ಮೆಯ ವಿಚಾರ ಎಂದು ತಿಳಿಸಿದರು.‌ ಆರ್ಟಿಕಲ್ 370 ಕಾಂಗ್ರೆಸ್ ಪಕ್ಷದ ಪಾಪದ ಕೂಸು. ಅದರಿಂದ ಕಾಶ್ಮೀರ ಉಗ್ರರ ಅಡಗುದಾಣ ಆಗುತಿತ್ತು.‌ ಅಲ್ಲಿರುವ ಹಿಂದುಗಳು ಕುಟುಂಬವನ್ನು ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಕಾಂಗ್ರೆಸ್ 370 ಆರ್ಟಿಕಲ್ ತೆಗೆದುಹಾಕಲಿಲ್ಲ. ಆದರೆ, ಕೊಟ್ಟ ಭರವಸೆಯಂತೆ ಆರ್ಟಿಕಲ್ 370 ತೆಗೆದುಹಾಕಲಾಯಿತು ಎಂದರು.ಈ ವೇಳೆ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ್, ಬಿಜೆಪಿ ಜಿಲ್ಲಾದ್ಯಕ್ಷ ಸುಭಾಷ ಪಾಟೀಲ್, ಧನಂಜಯ್ ಜಾಧವ್, ಮುರಗೇಂದ್ರಗೌಡಾ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷದವರು ಅಧಿಕಾರ ಹಣದ ಬಲದಿಂದ ಗೆಲ್ಲಲು ಹೊರಟಿದ್ದಾರೆ. ಅಪ್ಪಿತಪ್ಪಿ ಇಲ್ಲಿ ಕಾಂಗ್ರೆಸ್ ಗೆದ್ದರು ಸಹ ದೇಶಾದ್ಯಂತ ಕಾಂಗ್ರೆಸ್ ಗೆಲ್ಲೋದು ಕೇವಲ 40 ಜನ ಎಂಪಿಗಳು. ಇಲ್ಲಿ ಗೆದ್ದರೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಬಿಜೆಪಿ ಇಲ್ಲಿ ಗೆದ್ದರೇ ದೇಶಾದ್ಯಂತ 400 ಎಂಪಿಗಳು ಗೆಲ್ಲುತ್ತಾರೆ. ಶೆಟ್ಟರ್ ಅವರನ್ನು ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಿ.

-ಬಿ.ವೈ.ವಿಜಯೇಂದ್ರ,

ಬಿಜೆಪಿ ರಾಜ್ಯಾಧ್ಯಕ್ಷ.