ಕರುಣೆಯ ಪ್ರಜ್ಞೆಗೆ ಆತ್ಮಬಲ ತುಂಬಿದ ಸಂವಿಧಾನ: ಟಿ.ಎಂ. ಭಾಸ್ಕರ

| Published : Jan 27 2024, 01:17 AM IST

ಕರುಣೆಯ ಪ್ರಜ್ಞೆಗೆ ಆತ್ಮಬಲ ತುಂಬಿದ ಸಂವಿಧಾನ: ಟಿ.ಎಂ. ಭಾಸ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಿಮಿತ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಧ್ವಜಾರೋಹಣ ನೆರವೇರಿಸಿದರು.

ಶಿಗ್ಗಾಂವಿ: ಅನೇಕ ಸಂಕಷ್ಟಗಳ ನಡುವೆ ಏಕತೆ ಮತ್ತು ಸಾಮರಸ್ಯ ಸಾಧಿಸುವ ನೀತಿ, ಕರುಣೆಯ ಪ್ರಜ್ಞೆಗೆ ಬಹುದೊಡ್ಡ ಆತ್ಮದ ಬಲವನ್ನು ತುಂಬಿದ ಪವಿತ್ರ ಗ್ರಂಥ ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಭಾರತೀಯ ಸಂವಿಧಾನವಾಗಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿ, ೭೫ ವರ್ಷಗಳ ಕಾಲ ಈ ಸಂದರ್ಭದಲ್ಲಿ ಜಗತ್ತು ಸ್ಪರ್ಧಾತ್ಮಕ ಓಟದಲ್ಲಿ ಇರುವ ಹಿನ್ನೆಲೆಯಲ್ಲಿ ಜಾಗತೀಕರಣ, ಖಾಸಗೀಕರಣ, ಔದಾರೀಕರಣ ಎನ್ನುವ ಕಣ್ಣಿಗೆ ಕಾಣದೆ ಇರುವ ಬೇಲಿಗಳ ನಡುವೆ ಚಿಂತನ-ಮಂಥನಗಳಿಗೆ ಹೊಳೆಯದಿರುವ, ಹೊಳೆದರೂ ಏನು ಮಾಡದ ರೀತಿಯಲ್ಲಿ ಅಸ್ಪೃಶ್ಯತೆ, ಅನಾಗರಿಕತೆ, ಜಾತೀಯತೆ, ಮತಾಂಧತೆ, ಸಂಕುಚಿತ ಮನೋಭಾವನೆ, ಪೂರ್ವಾಗ್ರಹ ಆಲೋಚನೆ ಕ್ರಮಗಳು ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹಾಗೂ ರಾಷ್ಟ್ರದ ಜನತೆಗೆ ಶೋಭೆ ತರುವ ಗುಣಾಂಶಗಳು ಅಲ್ಲ ಎಂದರು.

ಭಾರತೀಯರ ಚೈತನ್ಯ ಶಕ್ತಿಯಾಗಿರುವ ಸುಭಾಶ್ಚಂದ್ರ ಬೋಸ್, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್, ಜವಾಹರ್ ಲಾಲ್ ನೆಹರು ಹೀಗೆ ಇನ್ನೂ ಅನೇಕ ಚಿಂತಕರ ಆಲೋಚನೆ ಕ್ರಮದ ಹಿನ್ನೆಲೆಯಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ನಮ್ಮೆಲ್ಲರ ಶಿಕ್ಷಣದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಿದರು. ಸ್ವಾತಂತ್ರ‍್ಯ ನಂತರ ಸಂದರ್ಭದಲ್ಲಿ ನಮಗೆಲ್ಲ ಓದುವ, ಬರೆಯುವ, ಐಕ್ಯತೆ, ಭಾವೈಕ್ಯತೆ, ಸಾಮರಸ್ಯ, ದೇಶದ ಪ್ರಗತಿ ವಿಜ್ಞಾನದಲ್ಲಿ ಅಡಗಿದೆ ಎನ್ನುವ ಅಭೂತಪೂರ್ವ ಬರವಣಿಗೆಯನ್ನು ಹೊಂದಿರುವ ಭಾರತೀಯರ ಗಣರಾಜ್ಯ ಎನಿಸಿಕೊಂಡಿರುವ ಹರಿದು ಹಂಚಿ ಹೋಗಿರುವ ಅನೇಕ ರಾಜ್ಯಗಳನ್ನು ಒಂದೇ ಸೂರಿನೆಡೆಗೆ ತರುವುದರ ಮೂಲಕ ನಾವೆಲ್ಲಾ ಭಾರತೀಯರು ಭಾರತೀಯ ಮಕ್ಕಳು, ಸಹೋದರರು ಎನ್ನುವ ಭಾವನೆ ಭಾರತೀಯ ಸಂವಿಧಾನ ಕಟ್ಟಿಕೊಟ್ಟಿದೆ ಎಂದರು.

ಸಾಂಪ್ರದಾಯಿಕ ಶಿಕ್ಷಣದ ಕಡೆಗೆ ಆದ್ಯತೆ ನೀಡಿ, ಪಾರಂಪರಿಕ ವಸ್ತುಗಳನ್ನು ಸಂಗ್ರಹಿಸುವ ಮತ್ತು ಅದನ್ನು ಅಧ್ಯಯನಕ್ಕೆ ಒಳಪಡಿಸುವ ನಮ್ಮ ಆಲೋಚನಾ ಕ್ರಮಗಳನ್ನು ವಿಸ್ತರಿಸುವ, ಜಾಗತಿಕ ಮಟ್ಟದಲ್ಲಿ ಅದನ್ನು ಗುರುತಿಸುವ ವಾತಾವರಣ ಸೃಷ್ಟಿಮಾಡುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಜವಾಬ್ದಾರಿ ವಿಶ್ವವಿದ್ಯಾಲಯದ ಅಧ್ಯಾಪಕರ ಮೇಲಿದೆ ಎಂದರು.

ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ಎಂ. ಸಾಲಿ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.