ಕೆಟ್ಟುನಿಂತ ಕಂಟೈನರ್‌: ಪರದಾಡಿದ ಪ್ರಯಾಣಿಕರು

| Published : May 13 2024, 12:04 AM IST

ಸಾರಾಂಶ

ವಾರದ ರಜೆ ಮೂಡ್‌ನಲ್ಲಿ ನೆರೆಯ ಊಟಿಯತ್ತ ತೆರಳುತ್ತಿದ್ದ ಹಾಗೂ ವಾಪಸ್‌ ಬರುತ್ತಿದ್ದ ಪ್ರವಾಸಿಗರು ಬಂಡೀಪುರ ದ್ವಾರದ ಬಳಿ ಕಂಟೈನರ್‌ ಕೆಟ್ಟು ನಿಂತ ಹಿನ್ನೆಲೆ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೇ ಸಿಲುಕಿ ಪರದಾಡಿದ ಸ್ಥಿತಿ ಭಾನುವಾರ ಮಧ್ಯಾಹ್ನ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ವಾರದ ರಜೆ ಮೂಡ್‌ನಲ್ಲಿ ನೆರೆಯ ಊಟಿಯತ್ತ ತೆರಳುತ್ತಿದ್ದ ಹಾಗೂ ವಾಪಸ್‌ ಬರುತ್ತಿದ್ದ ಪ್ರವಾಸಿಗರು ಬಂಡೀಪುರ ದ್ವಾರದ ಬಳಿ ಕಂಟೈನರ್‌ ಕೆಟ್ಟು ನಿಂತ ಹಿನ್ನೆಲೆ ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೇ ಸಿಲುಕಿ ಪರದಾಡಿದ ಸ್ಥಿತಿ ಭಾನುವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಮೇಲುಕಾಮನಹಳ್ಳಿ ಬಳಿಯ ಬಂಡೀಪುರ ಪ್ರವೇಶ ದ್ವಾರದ ಮುಂದೆ ಬೃಹತ್ ಗಾತ್ರದ ಕಂಟೈನರ್ ವಾಹನ‌ ಕೆಟ್ಟು ನಿಂತ ಪರಿಣಾಮ ಊಟಿ, ಗೂಡಲೂರು, ಬಂಡೀಪುರದತ್ತ ತೆರಳುತ್ತಿದ್ದ ಪ್ರವಾಸಿಗರ ವಾಹನಗಳು ಕಿಲೋಮೀಟರ್ ಗಟ್ಟಲೇ ಟ್ರಾಫಿಕ್‌ನಲ್ಲಿ ಸಿಲುಕಿದರು.

ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು, ವೀಕೆಂಡ್ ಸಮಯದಲ್ಲಿ ಸಾವಿರಾರು ವಾಹನಗಳ ಸಂಚಾರ ಇರುತ್ತದೆ. ಪ್ರವೇಶದ್ವಾರದ ಬಳಿಯೇ ವಾಹನ ಕೆಟ್ಟು ನಿಂತಿರುವ ಕಾರಣ ಕಿಮೀಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಹಿಂದೆ ಮುಂದೆ ಸಾಗದೇ ಪ್ರಯಾಣಿಕರು ಟ್ರಾಫಿಕ್ ಜಾಮ್‌ಗೆ ತುತ್ತಾದರು. ಬಳಿಕ ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಮಧ್ಯ ಪ್ರವೇಶಿಸಿ ದ್ವಾರದ ಬಳಿ ಕೆಟ್ಟು ನಿಂತ ಕಂಟೈನರ್‌ ವಾಹನವನ್ನು ವಾಪಸ್‌ ತೆಗೆಸುವಲ್ಲಿ ಸಫಲರಾದ ಬಳಿಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ದೊಡ್ಡ ಕಂಟೈನರ್‌ ಬಂಡೀಪುರ ರಸ್ತೆಯಲ್ಲಿ ಹೋಗಲು ಆಗುವುದಿಲ್ಲ. ಬೇರೆ ಮಾರ್ಗದಲ್ಲಿ ತೆರಳುವಂತೆ ಹೇಳಿದ ಬಳಿಕ ಕಂಟೈನರ್‌ ವಾಪಸ್‌ ತೆರಳಿತು ಎಂದರು.