ಮಣ್ಣಿನ ಮಡಕೆಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿರುವುದರಿಂದ ಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗಿ ಕೇವಲ ದೀಪಾವಳಿಗೆ ಹಣತೆ, ಮಣ್ಣೆತ್ತಿನ ಅಮಾವಾಸ್ಯೆಗೆ ಎತ್ತು ಮಾಡಲು ಸೀಮಿತವಾಗಿದ್ದ ಕುಂಬಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.

ಶರಣು ಸೊಲಗಿ

ಮುಂಡರಗಿ: ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ಜನತೆಯ ದೇಹ ತಂಪಾಗಿಸಲು ಮಣ್ಣಿನ ಮಡಕೆಯಲ್ಲಿ ತುಂಬಿರುವ ನೀರು ತಂಪು ಹಾಗೂ ಆರೋಗ್ಯಕ್ಕೂ ಉತ್ತಮ ಎಂಬ ಉದ್ದೇಶದಿಂದ ಬಡವರ ಫ್ರಿಡ್ಜ್ ಎಂದೇ ಖ್ಯಾತಿ ಹೊಂದಿರುವ ಮಣ್ಣಿನ ಮಡಕೆಗಳಿಗೀಗ ಭಾರೀ ಬೇಡಿಕೆ ಬಂದಿದೆ.ಹಿತ್ತಾಳೆ, ತಾಮ್ರ, ಸ್ಟೀಲ್‌ಗಳ ಭಾರೀ ಮಾರಾಟದ ಭರಾಟೆಯಲ್ಲಿ ವಿವಿಧ ವರ್ಣರಂಜಿತ ಪ್ಲಾಸ್ಟಿಕ್ ದುನಿಯಾದಲ್ಲಿ ನೆಲಕಟ್ಟಿದ ನಮ್ಮ ದೇಶಿ ಮಣ್ಣಿನ ಮಡಕೆಗಳಿಗೆ ಬೇಸಿಗೆ ಬಂತೆಂದರೆ ಸಾಕು ಭಾರೀ ಬೇಡಿಕೆ ಬರುತ್ತದೆ. ಅದರಲ್ಲೂ ಪ್ರಸ್ತುತ ವರ್ಷ ಮಾರ್ಚ್ ಕೊನೆಯ ವಾರದಲ್ಲಿಯೇ 37ರಿಂದ 38 ಡಿಗ್ರಿಯವರೆಗೆ ಇರುವ ಬಿಸಿಲಿನ ತಾಪಮಾನಕ್ಕೆ ಜನ ಕಂಗಾಲಾಗಿ ಮನೆಯಲ್ಲಿರುವ ಫಿಡ್ಜ್‌ ಬಿಟ್ಟು ಮಣ್ಣಿನ ಮಡಕೆಯಲ್ಲಿನ ನೀರಿಗೆ ಮಾರುಹೋಗಿದ್ದಾರೆ.ಬಡವರ ಫ್ರಿಡ್ಜ್​‌ ಎಂಬ ಖ್ಯಾತಿ ಹೊಂದಿದರೂ ಈ ಮಣ್ಣಿನ ಹರವೆ, ಅಥವಾ ಗಡಿಗೆ, ಮೊಸರು ಹಾಕುವ ಕುಡಿಕೆ, ನೀರು ತುಂಬಿಡುವ ಮಣ್ಣಿನ ಕೊಡ, ಬಿಂದಿಗೆಗಳನ್ನು ಬಡವರು ಮಾತ್ರ ಉಪಯೋಗಿಸುವುದಿಲ್ಲ. ಮನೆಯಲ್ಲಿ ಫ್ರಿಡ್ಜ್ ಇರುವವರೂ ಖರೀದಿಸುತ್ತಾರೆ. ಆದ್ದರಿಂದ ಮಣ್ಣಿನ ಮಡಕೆಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿರುವುದರಿಂದ ಆಧುನಿಕತೆಯ ಭರಾಟೆಯಲ್ಲಿ ಮೂಲೆಗುಂಪಾಗಿ ಕೇವಲ ದೀಪಾವಳಿಗೆ ಹಣತೆ, ಮಣ್ಣೆತ್ತಿನ ಅಮಾವಾಸ್ಯೆಗೆ ಎತ್ತು ಮಾಡಲು ಸೀಮಿತವಾಗಿದ್ದ ಕುಂಬಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಪಟ್ಟಣದ ಅನ್ನದಾನೀಶ್ವರ ಮಠದ ಹತ್ತಿರವಿರುವ ಕುಂಬಾರ ಓಣಿಯಲ್ಲಿ ಹಾಗೂ ಭಜಂತ್ರಿ ಓಣಿಯಲ್ಲಿ ಮತ್ತು ಹೆಸರೂರು ರಸ್ತೆ ಆಶ್ರಯ ಕಾಲನಿಯಲ್ಲಿ, ಹೊಸ ಬಸ್ ನಿಲ್ದಾಣದ ಹತ್ತಿರ ಹೀಗೆ ಅನೇಕ ಕಡೆ ಮಣ್ಣಿನ ಹರವೆ, ಮಡಕೆ, ಮಣ್ಣಿನ ಕೊಡ, ಬಿಂದಿಗೆ, ಮಗಿಗಳು ಹಾಗೂ ನೀರಿನ ಬಾಟಲ್‌ಗಳ ಮಾದರಿಯ ಮಣ್ಣಿನ ಬಾಟಲಿಗಳು ದೊರೆಯುತ್ತವೆ. ₹50ರಿಂದ ₹650ರ ವರೆಗಿನ ಮಡಕೆಗಳು ಮಾರಾಟಕ್ಕೆ ಲಭ್ಯವಿದ್ದು, ಪ್ರತಿನಿತ್ಯ ಪಟ್ಟಣದ ಎಲ್ಲ ಕಡೆ ಉತ್ತಮ ಮಾರಾಟವಾಗುತ್ತಿವೆ.

ವ್ಯಾಪಾರ ಜೋರಾಗೈತಿ: ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಮಾಣದಾಗ ಬಿಸಲ ಐತಿ. ಹಿಂಗಾಗಿ ಈ ವರ್ಷ ಮಾರ್ಚ್ ಮೊದಲ್ನೇ ವಾರದಾದ ವ್ಯಾಪಾರ ಜೋರಾಗೈತಿ. ಮೊದ್ಲ ನಮ್ ಹಿರಿಯಾರು ಇಲ್ಲೆ ಎಲ್ಲ ವಸ್ತುಗಳನ್ನು ತಾವ ಮಾಡಿ ಸುಡ್ತಿದ್ರು, ಆದ್ರ ಈಗ ನಾನು ದೂರದ ಸೊಲ್ಲಾಪುರ ಹಾಗೂ ಕೂಡ್ಲಿಗಿ ಸಮೀಪದ ಶಿವಪುರದಾಗಿಂದ ವಿವಿಧ ಚಿತ್ರಚಿತ್ತಾರಗಳುಳ್ಳ ಮಣ್ಣಿನ ಹರವೆ, ಗಡಿಗೆ ಹಾಗೂ ನೌಕ್ರಿ ಮಾಡೂ ಜನಾ ತಮ್ಮ ಮೋಟಾರ್ ಸೈಕಲ್ದಾಗ ಹಾಗೂ ಕಾರಿನ್ಯಾಗ ಇಟಗೊಂಡು ಹೋಗಾಕ ಅನುಕೂಲ ಆಗೂವಂಗ ಮಣ್ಣಿನ ಬಾಟಲ್ ಬಂದಾವು. ಅವುಕ ಭಾಳಾ ಬೇಡಿಕಿ ಐತಿ ಎಂದು ಮಡಕೆ ಮಾರಾಟಗಾರರಾದ ಪರಸಪ್ಪ ಕುಂಬಾರ ತಿಳಿಸಿದರು.