ಮಾಗಡಿ: ಒಂದು ದೇಶದ ಸುಭದ್ರತೆ ಅಲ್ಲಿನ ಶಿಕ್ಷಣದ ಮೇಲೆ ನಿಂತಿದ್ದು ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಬಿಇಒ ರಾಜೇಗೌಡ ಹೇಳಿದರು.

ಪಟ್ಟಣದ ಹೊಂಬಾಳಮ್ಮ ಪೇಟೆ ಸರ್ಕಾರಿ ಶಾಲಾ ಆವರಣದಲ್ಲಿ 356ಕ್ಕೂ ಹೆಚ್ಚು ಸರ್ಕಾರಿ ಶಾಲಾ ಮಕ್ಕಳಿಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಉಚಿತ ಶಾಲಾ ಶಿಕ್ಷಣ ಸಾಮಗ್ರಿ ವಿತರಿಸಿ ಮಾತನಾಡಿದ ಅವರು, ಶಿಕ್ಷಣವೇ ಮಕ್ಕಳಿಗೆ ಆಸ್ತಿ. ಯುವ ಬೆಂಗಳೂರು ಟ್ರಸ್ಟ್ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ತಾಲೂಕಿನಲ್ಲಿ ಶೈಕ್ಷಣಿಕ ಕ್ಷೇತ್ರ ಉತ್ತಮ ಸ್ಥಿತಿಯಲ್ಲಿದ್ದು ಮತ್ತಷ್ಟು ಆಸಕ್ತಿ ವಹಿಸಿದರೆ ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಬರಲಿದೆ. ಅತಿ ಹೆಚ್ಚು ಕೆಪಿಎಸ್ ಶಾಲೆ ಹೊಂದಿರುವ ತಾಲೂಕಾಗಿದೆ. ಯುವ ಬೆಂಗಳೂರು ಟ್ರಸ್ಟ್ ಸದಸ್ಯರ ಸಂಪಾದನೆಯಲ್ಲಿ ಸರ್ಕಾರಿ ಶಾಲೆಗಳಿಗೆ ನೆರವು ನೀಡುತ್ತಿರುವುದು ಇತರರಿಗೂ ಮಾದರಿ ಎಂದು ತಿಳಿಸಿದರು.

ಯುವ ಬೆಂಗಳೂರು ಟ್ರಸ್ಟ್ ಅಧ್ಯಕ್ಷ ಕಿರಣ್ ಸಾಗರ್ ಮಾತನಾಡಿ, ಚೀನಾದಲ್ಲಿ ಎಐ ತಂತ್ರಜ್ಞಾನದಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವಕಾಶ ನೀಡಿದರೆ, ನಮ್ಮ ಟ್ರಸ್ಟ್‌ ವತಿಯಿಂದ ಶಿಕ್ಷಕರಿಗೆ ಪ್ರಸ್ತುತ ತಂತ್ರಜ್ಞಾನದ ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ ನಡೆಸುತ್ತೇವೆ. ಇದರಿಂದ ಮಕ್ಕಳು ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಸಹಾಯವಾಗಲಿದೆ ಎಂದರು.

ಯುವ ಬೆಂಗಳೂರು ಟ್ರಸ್ಟ್‌ ಉಪಾಧ್ಯಕ್ಷ ಬಿ.ವಿ.ಸುನಿಲ್ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಶಕ್ತರನ್ನಾಗಿ ರೂಪಿಸುವುದೇ ಯುವ ಬೆಂಗಳೂರು ಟ್ರಸ್ಟ್‌ ಮುಖ್ಯ ಉದ್ದೇಶ. ಟ್ರಸ್ಟ್ 2008ರಿಂದಲೂ ನಿರಂತರ ಸಾಮಾಜಿಕ ಕಾರ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅಲ್ಲಿನ ಶೈಕ್ಷಣಿಕ ಗುಣಮಟ್ಟ ಹಾಗೂ ಪರಿಸರ ಅಭಿವೃದ್ಧಿಪಡಿಸಲಾಗುತ್ತಿದೆ. ಕಂಪ್ಯೂಟರ್ ಆಧಾರಿತ ''''''''ಸ್ಮಾರ್ಟ್ ಕ್ಲಾಸ್'''''''' ಯೋಜನೆ ಜಾರಿಗೆ ತಂದು ಡಿಜಿಟಲ್ ಕಲಿಕೆಗೆ ಒತ್ತು ನೀಡಲಾಗಿದೆ ಎಂದರು.

ಇದೇ ವೇಳೆ ತಾಲೂಕು ನೌಕರರ ಸಂಘದ ಅಧ್ಯಕ್ಷ ಜಯರಾಂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಮುಖ್ಯಶಿಕ್ಷಕ ಲಿಂಗರಾಜು, ಎಸ್‌ಡಿಎಂಸಿ ಅಧ್ಯಕ್ಷ ನರಸಿಂಹಮೂರ್ತಿ ಮಾಜಿ ನೌಕರ ಸಂಘದ ಅಧ್ಯಕ್ಷ ಶಿವರಾಂ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ವೇತಾ, ಅಶೋಕ್ ಯಾದವ್ ಇತರರು ಭಾಗವಹಿಸಿದ್ದರು.