ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ದೇಶದ ನಿಜವಾದ ಸಂಪತ್ತು ಸಾಂಸ್ಕೃತಿಕ ಸಿರಿವಂತಿಕೆಯಲ್ಲಿ ಅಡಗಿದೆ ಎಂದು ಚಲನಚಿತ್ರ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅಭಿಪ್ರಾಯಪಟ್ಟರು.ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥನ ಮಠದ ಭೈರವೈಕ್ಯ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಶ್ರೀಗಳ 81ನೇ ಜಯಂತ್ಯೋತ್ಸವ ಹಾಗೂ 12ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ದೇಶ ಸಾಂಸ್ಕೃತಿವಾಗಿ ಗಟ್ಟಿಯಾದಾಗ ಮಾತ್ರ ಆ ದೇಶದೊಳಗಿನ ಧರ್ಮ, ಮಠ, ಮಂದಿರಗಳು ಸದೃಢವಾಗಿರುತ್ತವೆ ಎಂದರು.
ಭಾರತ ಅನಾಧಿಕಾಲದಿಂದಲೂ ಸಾಂಸ್ಕೃತಿಕವಾಗಿ ಸಿರಿವಂತವಾಗಿರುವ ದೇಶ. ಆದರೆ, ನಮ್ಮೊಳಗಿನ ಅಪ್ರಜ್ಞೆಯಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ಜಗತ್ತಿಗೆ ನಾವು ನಮ್ಮ ಸಂಸ್ಕೃತಿಯ ಸಿರಿವಂತಿಕೆಯನ್ನು ನೀಡುತ್ತಿದ್ದೇವೆ. ಜಗತ್ತು ಭಾರತದ ಸಂಸ್ಕೃತಿಯತ್ತ ಆಕರ್ಷಿತವಾಗುತ್ತಿದೆ ಎಂದರು.ನಮ್ಮ ಸಾಂಸ್ಕೃತಿಕ ಕಂಪನ್ನು ಪಾಶ್ಚಾತ್ಯರಿಗೆ ನೀಡಿ ನಾವು ಅವರಿಂದ ವಿಜ್ಞಾನವನ್ನು ಪಡೆಯುತ್ತಿದ್ದೇವೆ. ನಾವು ಪಾಶ್ಚಾತ್ಯ ರಾಷ್ಟ್ರಗಳಿಂದ ಪಡೆಯುತ್ತಿರುವ ವಿಜ್ಞಾನ ಒಂದು ಕಾಲದಲ್ಲಿ ನಮ್ಮದೇ ಆಗಿತ್ತು. ಸಾಂಸ್ಕೃತಿಕ ತಳಹದಿಯ ಮೇಲೆ ವೈಜ್ಞಾನಿಕವಾಗಿ ವಿಕಸಿತವಾದ ಭಾರತವನ್ನು ನಮ್ಮ ಹಿರಿಯರು ನಿರ್ಮಿಸಿದ್ದರು. ಹೊಸ ಅರಿವಿನೊಂದಿಗೆ ನಾವು ಅದನ್ನು ಪುನರ್ ನಿರ್ಮಿಸಬೇಕಾಗಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಶಾಲೆಗಳು ಸಮುದಾಯದ ಆಸ್ತಿ. ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ಭಾವಿಸಿ ಪ್ರೀತಿಯಿಂದ ಕಲಿಸಬೇಕೆಂದರು. ಕಲಿಕೆಯ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಬೇಕು ಎಂದರು.ಗ್ರಾಮೀಣ ಶಾಲೆಯಲ್ಲಿ ಕಲಿತವರೇ ದೇಶದಲ್ಲಿ ಅತಿ ಹೆಚ್ಚು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಸರ್ಕಾರ ಮತ್ತು ಸಮುದಾಯ ಗ್ರಾಮೀಣ ಶಾಲೆಗಳನ್ನು ಕಡೆಗಣಿಸಬಾರದು. ಗ್ರಾಮೀಣ ಮಕ್ಕಳ ಬೌದ್ಧಿಕ ಶಕ್ತಿಯನ್ನು ವಿಕಸಿಸಿದರೆ ಅವರು ದೇಶದ ಆಸ್ತಿಯಾಗುತ್ತಾರೆಂದರು.
ಆದಿಚುಂಚನಗಿರಿ ಹೇಮಗರಿ ಶಾಖಾ ಮಠದ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿದರು. ಉತ್ತರ ಕರ್ನಾಟಕದ ನಿಡಸೋಸಿ ಮಠದ ಪೀಠಾಧ್ಯಕ್ಷ ಡಾ.ಶಿವಲಿಂಗೇಶ್ವರ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಚಲನ ಚಿತ್ರ ಹಾಸ್ಯ ನಟ ಉಮೆಶ್, ಚಿತ್ರನಟಿ ಡಾ.ಗಿರಿಜಾ ಲೋಕೇಶ್, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಜಿಪಂ ಮಾಜಿ ಉಪಾಧ್ಯಕ್ಷ ಬ್ಯಾಲದಕೆರೆ ಪಾಪೇಗೌಡ, ವಕಳಿ ಎಸ್.ಸಿ.ವಿಜಯಕುಮಾರ್, ತಾಲೂಕಿನ ಹಿರಿಯ ರಾಜಕಾರಣಿ ಬಿ.ನಂಜಪ್ಪ ಇದ್ದರು.ಡಾ.ಬಾಲಗಂಗಾಧರನಾಥ ಶ್ರೀಗಳ ಪುಣ್ಯ ಸ್ಮರಣೆ ಅಂಗವಾಗಿ ಬಿಜಿಎಸ್ ಶಾಲಾ ಆವರಣದಲ್ಲಿ ಹೋಮ, ಹವನ, ಯಜ್ಞಾಧಿ ಧಾರ್ಮಿಕ ಕಾರ್ಯಗಳನ್ನು ನಡೆಸಿ ಶ್ರೀಗಳ ಪುತ್ಥಳಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗುರು ನಮನ ಸಲ್ಲಿಸಲಾಯಿತು.