ಸೋಮನಕಟ್ಟೆ ಕೆರೆ ಏರಿ ಮಧ್ಯೆ ಬಿರುಕು

| Published : Jun 08 2024, 12:32 AM IST

ಸಾರಾಂಶ

ಮಾಗಡಿ: ತಾಲೂಕಿನ ಹಾಲಸಿಂಗನಹಳ್ಳಿಗೆ ಹೊಂದಿಕೊಂಡಿರುವ ಸೋಮನಕಟ್ಟೆ ಕೆರೆ ಕೋಡಿ ಹರಿಯುತ್ತಿದ್ದು ಹೊಂಗೆಕಾವಲ್ ಏರಿ ಮಧ್ಯೆ ದೊಡ್ಡ ಬಿರುಕು ಉಂಟಾಗಿ ಅಪಾರ ನೀರು ವ್ಯರ್ಥವಾಗುತ್ತಿದೆ.

ಮಾಗಡಿ: ತಾಲೂಕಿನ ಹಾಲಸಿಂಗನಹಳ್ಳಿಗೆ ಹೊಂದಿಕೊಂಡಿರುವ ಸೋಮನಕಟ್ಟೆ ಕೆರೆ ಕೋಡಿ ಹರಿಯುತ್ತಿದ್ದು ಹೊಂಗೆಕಾವಲ್ ಏರಿ ಮಧ್ಯೆ ದೊಡ್ಡ ಬಿರುಕು ಉಂಟಾಗಿ ಅಪಾರ ನೀರು ವ್ಯರ್ಥವಾಗುತ್ತಿದೆ.

ಕೆರೆ ಏರಿ ಒಡೆದು ಹೋದರೆ ಕೆರೆಗೆ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಉಂಟಾಗಲಿದೆ. ಕೂಡಲೇ ಏರಿ ಸರಿಪಡಿಸುವಂತೆ ಹಾಲಸಿಂಗನಹಳ್ಳಿ, ಹೂಜಗಲ್ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುಮಾರು 45 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಸೋಮನಕಟ್ಟೆ ಕೆರೆ ಮೂರು ವರ್ಷಗಳ ಬಳಿಕ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೆರೆ ಕೋಡಿ ಬಿದ್ದಿದೆ.

ಶುಕ್ರವಾರ ಸ್ಥಳೀಯರು ಕೆರೆ ತುಂಬಿದ ಹಿನ್ನೆಲೆಯಲ್ಲಿ ಭೇಟಿ ನೀಡಿದ ವೇಳೆ ಹೊಂಗೆಕಾವಲ್ ಏರಿಯ ಮಧ್ಯೆ ದೊಡ್ಡದಾದ ಬಿರುಕು ಉಂಟಾಗಿ ಅಪಾರ ನೀರು ವ್ಯರ್ಥವಾಗಿ ಹರಿಯುತ್ತಿರುವ ಬಗ್ಗೆ ಕಲ್ಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರುವುದರಿಂದ ಸಣ್ಣ ನೀರಾವರಿ ಇಲಾಖೆಯವರೇ ಏರಿಯನ್ನು ಸರಿಪಡಿಸಬೇಕೆಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಸಣ್ಣ ನೀರಾವರಿ ಅಧಿಕಾರಿಗಳ ಭೇಟಿ: ಸೋಮನಕಟ್ಟೆ ಕೆರೆ ಏರಿ ಮಧ್ಯಭಾಗದಲ್ಲಿ ದೊಡ್ಡದಾದ ರಂಧ್ರ ಉಂಟಾಗಿ ಸಾಕಷ್ಟು ನೀರು ಹರಿದು ಹೋಗುತ್ತಿರುವ ಬಗ್ಗೆ ಸ್ಥಳೀಯರು ಸಣ್ಣ ನೀರಾವರಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿರುವ ಮೇರೆಗೆ ಸಣ್ಣ ನೀರಾವರಿ ಇಲಾಖೆ ಅಭಿಯಂತರ ಕೊಟ್ರೇಶ್ ಸ್ಥಳಕ್ಕೆ ಭೇಟಿ ನೀಡಿ ಏರಿಗೆ ಯಾವುದೇ ರೀತಿ ಅಪಾಯ ಉಂಟಾಗುವುದಿಲ್ಲ. ಕೂಡಲೇ ಇಲಾಖೆಯಿಂದ ಕಾಮಗಾರಿ ಆರಂಭಿಸಿ ನೀರು ವ್ಯರ್ಥವಾಗದಂತೆ ಕ್ರಮ ವಹಿಸಲಾಗುತ್ತದೆ. ಹಲವು ವರ್ಷಗಳಿಂದ ಕೆರೆಗೆ ನೀರು ಬರದ ಹಿನ್ನೆಲೆಯಲ್ಲಿ ಏರಿಯ ಮಣ್ಣು ಸಡಿಲವಾಗಿರುತ್ತದೆ. ಹೆಚ್ಚು ನೀರು ಬಂದ ನಂತರ ಒತ್ತಡ ಹೆಚ್ಚಾಗಿ ಅಲ್ಲಲ್ಲಿ ಬಿರುಕು ಉಂಟಾಗಿ ನೀರು ಹೋಗುವುದು ಸಾಮಾನ್ಯವಾಗಿದೆ. ಮೊದಲ ಹಂತದಲ್ಲೇ ವಿಷಯ ತಿಳಿದಿದ್ದು ಹೆಚ್ಚಿನ ಹಾನಿ ಉಂಟಾಗದಂತೆ ಕ್ರಮ ವಹಿಸಲಾಗುತ್ತದೆ. ಕೆರೆಯಲ್ಲಿ ನೀರು ಉಳಿಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಪೋಟೋ 7ಮಾಗಡಿ3:

ಸೋಮನಕಟ್ಟೆ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡು ವ್ಯರ್ಥವಾಗಿ ಹರಿಯುತ್ತಿರುವ ನೀರು.