ಮಾಜಿ ಶಾಸಕ‌ ಕೃಷ್ಣಾರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

| Published : Mar 27 2024, 01:01 AM IST

ಮಾಜಿ ಶಾಸಕ‌ ಕೃಷ್ಣಾರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್.ಆರ್. ರಮೇಶ್ ಪತ್ರಿಕಾಗೋಷ್ಠಿ ನಡೆಸಿ, ದಾಖಲೆಗಳನ್ನು ಬಿಡುಗಡೆಗೊಳಿಸಿ ಲೋಕಾಯುಕ್ತ ಮತ್ತು ಬಿಎಂಟಿಎಫ್ ತನಿಖಾ ಸಂಸ್ಥೆಗಳಲ್ಲಿ ದೂರುಗಳನ್ನು ದಾಖಲಿಸಿದ್ದರು. ಪ್ರತಿಯಾಗಿ ದೂರುದಾರ ಎನ್.ಆರ್..ರಮೇಶ್ ವಿರುದ್ಧ ಎಂ.ಕೃಷ್ಣಾರೆಡ್ಡಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾಜಿ ಉಪ ಸಭಾಪತಿ ಹಾಗೂ ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ (ಜೆಕೆ) ಎಂ.ಕೃಷ್ಣಾರೆಡ್ಡಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದೆ.

ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ದಾಖಲಿಸಿದ ದೂರಿನ ಅನ್ವಯ ಪಿಸಿಆರ್ 17136/2022 ಗೆ ಸಂಬಂಧಿಸಿದಂತೆ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ ನ ಕಲಂ 200 ರ ಅನ್ವಯ ಐಪಿಸಿ ಸೆಕ್ಷನ್ 499 ರ ಅಡಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ 42 ನೇ ಅಡಿಷನಲ್ ಚೀಫ್ ಮೆಟ್ರೋಪಾಲಿಟಿನ್(ಎಸಿಎಂಎಂ) ವಿಶೇಷ ಕೋರ್ಟ್ ನ ನ್ಯಾಯಾಧೀಶ ಜೆ.ಪ್ರೀತ್ ಅವರು ಪೋಲೀಸರಿಗೆ ಆದೇಶವನ್ನು ನೀಡಿದ್ದಾರೆ.

ಏನಿದು ಪ್ರಕರಣ:

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಗಣೇಶ‌ ಮಂದಿರ ವಾರ್ಡ್ ವ್ಯಾಪ್ತಿಯ ಬನಗಿರಿ ನಗರಕ್ಕೆ ಸೇರಿರುವ ಕತ್ರಿಗುಪ್ಪೆ ಸರ್ವೇ ನಂ. 125 ಮತ್ತು 126 ಕ್ಕೆ ಸೇರಿರುವ ಸುಮಾರು 350 ಕೋಟಿ ಮೌಲ್ಯದ 4.31 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತಿಗೆ 41 ಮಂದಿ ಸರ್ಕಾರಿ ನೆಲಗಳ್ಳರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸುವ ಯತ್ನ ನಡೆಸಿದ್ದರು. ಈ ಸಂಬಂಧ ಲೋಕಾಯುಕ್ತ ಮತ್ತು ಬಿಎಂಟಿಎಫ್ ನಲ್ಲಿ ದೂರುಗಳನ್ನು ಸಲ್ಲಿಸಲಾಗಿತ್ತು. ಜೊತೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೋಲೀಸ್ ಠಾಣೆಯಲ್ಲಿ ಎಫ್ ಐಆರ್ ಸಹ ದಾಖಲಾಗಿತ್ತು. ಸದನ ಸಮಿತಿಯ ಅಧ್ಯಕ್ಷರೂ ಆಗಿದ್ದ ಕೃಷ್ಣಾ ರೆಡ್ಡಿಯವರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆದೇಶವನ್ನು ಸೂಚಿಸುವ ಬದಲಾಗಿ, ಪಾಲಿಕೆಯ ಆಸ್ತಿಯನ್ನು ಪಾಲಿಕೆಯ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದ ಅಧಿಕಾರಿಯ ವಿರುದ್ಧವೇ ಕ್ರಮ ತೆಗೆದುಕೊಂಡಿದ್ದರು.

ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಎನ್.ಆರ್. ರಮೇಶ್ ಪತ್ರಿಕಾಗೋಷ್ಠಿ ನಡೆಸಿ, ದಾಖಲೆಗಳನ್ನು ಬಿಡುಗಡೆಗೊಳಿಸಿ ಲೋಕಾಯುಕ್ತ ಮತ್ತು ಬಿಎಂಟಿಎಫ್ ತನಿಖಾ ಸಂಸ್ಥೆಗಳಲ್ಲಿ ದೂರುಗಳನ್ನು ದಾಖಲಿಸಿದ್ದರು. ಪ್ರತಿಯಾಗಿ ದೂರುದಾರ ಎನ್.ಆರ್..ರಮೇಶ್ ವಿರುದ್ಧ ಎಂ.ಕೃಷ್ಣಾರೆಡ್ಡಿಯವರು ಅವಹೇಳನಕಾರಿಯಾಗಿ ಮಾತನಾಡಿದ್ದರು.

ಈ ಸಂಬಂಧ ಎನ್.ಆರ್.ರಮೇಶ್ ರವರು ಮಾಜಿ ಶಾಸಕ ಎಂ.ಕೃಷ್ಣಾ ರೆಡ್ಡಿ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ ನ ಕಲಂ 200 ರ ಅನ್ವಯ ಐಪಿಸಿ ಸೆಕ್ಷನ್ 500 ರರಡಿ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಅಡಿಶನಲ್ ಚೀಫ್ ಮೆಟ್ರೋಪಾಲಿಟಿನ್ ನ್ಯಾಯಾಧೀಶ ಜೆ. ಪ್ರೀತ್ ಅವರು ಪೋಲೀಸರಿಗೆ ಆದೇಶ ನೀಡಿದ್ದಾರೆ.

ಸದ್ಯ ನ್ಯಾಯಾಲಯದ ಆದೇಶದಂತೆ ಮಾಜಿ ಶಾಸಕ ಎಂ.ಕೃಷ್ಣಾ ರೆಡ್ಡಿಯವರು ನ್ಯಾಯಾಲಯದ ಮುಂದೆ ಹಾಜರಾಗಿ ಜಾಮೀನು ಪಡೆದುಕೊಳ್ಳಬೇಕಿದೆ.