ಕಮರಿದ ಕೈ; ಅರಳಿ ನಳನಳಿಸಿದ ಕಮಲ

| Published : Jun 05 2024, 12:30 AM IST

ಸಾರಾಂಶ

ಚಿಕ್ಕಮಗಳೂರುಕಾಂಗ್ರೆಸ್‌ನ ಭದ್ರ ಕೋಟೆಯಲ್ಲಿ ಕೈ ಮತ್ತೆ ಕಮರಿದೆ. 1998ರಲ್ಲಿ ಅರಳಿದ ಕಮಲ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಇನ್ನಷ್ಟು ಶೈನಿಂಗ್ ಪಡೆದುಕೊಂಡಿದೆ.

- ಗ್ಯಾರಂಟಿಗೆ ಸೋಲು- ಮೋದಿಗೆ ಗೆಲುವು । ಕಾಫಿಯ ನಾಡಲ್ಲಿ ಬಿಜೆಪಿಗೆ 25ನೇ ಸಂಸ್ಥಾಪನಾ ವರ್ಷ

ಆರ್. ತಾರಾನಾಥ್‌ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕಾಂಗ್ರೆಸ್‌ನ ಭದ್ರ ಕೋಟೆಯಲ್ಲಿ ಕೈ ಮತ್ತೆ ಕಮರಿದೆ. 1998ರಲ್ಲಿ ಅರಳಿದ ಕಮಲ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಇನ್ನಷ್ಟು ಶೈನಿಂಗ್ ಪಡೆದುಕೊಂಡಿದೆ.ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಗೆಲ್ಲುತ್ತೋ, ಪ್ರಧಾನಿ ನರೇಂದ್ರ ಮೋದಿ ಗೆಲ್ಲುತ್ತಾರೋ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಕಾರಣ, ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿರುವ ಕೆ. ಜಯ ಪ್ರಕಾಶ್ ಹೆಗ್ಡೆ ಅವರು ಸೌಮ್ಯ ಸ್ವಭಾವದವರು. ಹಾಗಾಗಿ ವೈಯಕ್ತಿಕ ಟೀಕೆಗಳು ಚುನಾವಣೆ ಕೊನೆಯವರೆಗೂ ಹತ್ತಿರಕ್ಕೆ ಸುಳಿಯಲಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ನುಡಿದಂತೆ ಸರ್ಕಾರ 5 ಗ್ಯಾರಂಟಿ ಜಾರಿ ಮಾಡಿದೆ. ಚಿಕ್ಕ ಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರು ಇದ್ದಾರೆ. ಹಾಗಾಗಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆಂಬ ಲೆಕ್ಕಾಚಾರ ಇತ್ತು.ಇನ್ನೊಂದೆಡೆ, ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ, ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿ ಪ್ರಧಾನಿಯಾಗಬೇಕು. ನಮಗೆ ಇಲ್ಲಿ ಯಾರು ಸ್ಪರ್ಧೆ ಮಾಡಿದ್ದಾರೆ ಎಂಬುದು ಮುಖ್ಯವಲ್ಲ, ಮೋದಿ ಪ್ರಧಾನಿ ಆಗಬೇಕೆಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಹಾಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗೆ ಸೋಲಾಗಿದೆ. ಪ್ರಧಾನಿ ಮೋದಿಯವರಿಗೆ ಗೆಲುವಾಗಿದೆ. 25ನೇ ವರ್ಷ:

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದ್ದು 1998ರಲ್ಲಿ. ಅಂದರೆ, 25 ವರ್ಷಗಳ ಹಿಂದೆ ಡಿ.ಸಿ. ಶ್ರೀಕಂಠಪ್ಪ ಜಯಗಳಿಸಿದ್ದರು. ಅವರು ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ನಂತರದಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ 2009 ರಲ್ಲಿ ನಡೆದ ಚುನಾವಣೆಯಲ್ಲಿ ಡಿ.ವಿ. ಸದಾನಂದಗೌಡ ಜಯಗಳಿದರು. ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಬಿಜೆಪಿಯಲ್ಲಿ ಕ್ಷೀಪ್ರ ಬೆಳವಣಿಗೆಯಾದ ಪರಿಣಾಮ ಸದಾನಂದಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾದರು. 2012 ಮಾರ್ಚ್‌ 21 ರಂದು ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಜಯಗಳಿದರು. ಅವರ ಅಧಿಕಾರದ ಅವಧಿ 2014 ರ ಡಿಸೆಂಬರ್ 13ಕ್ಕೆ ಮುಕ್ತಾಯಗೊಂಡಿತು. ಜಯಪ್ರಕಾಶ್ ಹೆಗ್ಡೆ ಸಂಸದರಾಗಿದ್ದ ಅವಧಿ 21 ತಿಂಗಳು ಮಾತ್ರ. 2014 ಹಾಗೂ 2018 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಜಯಗಳಿಸಿದ್ದರು. ಈ ಬಾರಿ 2024 ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರ ತಮ್ಮದೆ ಎಂದು ಬಿಜೆಪಿ ಮತ್ತೊಮ್ಮೆ ಸಾಭೀತುಪಡಿಸಿದೆ.ಪೋಟೋ ಫೈಲ್‌ ನೇಮ್‌ 4 ಕೆಸಿಕೆಎಂ 1ಕೋಟಾ ಶ್ರೀನಿವಾಸ್‌ ಪೂಜಾರಿ