ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತಾಲೂಕಿನ ಅಗತಗೌಡನಹಳ್ಳಿ ಗ್ರಾಮದ ಬಳಿ ರೈತರ ಫಲವತ್ತಾದ ಕೃಷಿ ಭೂಮಿ ಮಧ್ಯೆ ಕ್ರಷರ್ ಮತ್ತು ಎಂ.ಸ್ಯಾಂಡ್ ಘಟಕ ಆರಂಭಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಬೇಕು ಎಂದು ಗ್ರಾಮದ ರೈತರು, ಯುವಕರು, ಮಹಿಳೆಯರು ಮಾಜಿ ಸಂಸದ ಎ.ಸಿದ್ದರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಕ್ರಷರ್ ಹಾಗೂ ಎಂ.ಸ್ಯಾಂಡ್ ಘಟಕದ ಆರಂಭಕ್ಕೆ ಅನುಮತಿ ಪಡೆದ ನೆಪದಲ್ಲಿ ಕೆಲಸ ಶುರು ಮಾಡಲು ಕ್ರಷರ್ ಮಾಲೀಕರು ಹೊರಟಿದ್ದಾರೆ. ಗ್ರಾಮಸ್ಥರ ವಿರೋಧ ಕಂಡು ರೌಡಿಗಳನ್ನು ಕರೆಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕ್ರಷರ್ ಮತ್ತು ಎಂ.ಸ್ಯಾಂಡ್ ಆರಂಭವಾಗುವ ಘಟಕದ ಸಮೀಪ ಅಗತಗೌಡನಹಳ್ಳಿ ಗ್ರಾಮ, ಪ್ರೌಢಶಾಲೆ, ವಿದ್ಯಾರ್ಥಿ ನಿಲಯವಿದೆ. ಜೊತೆಗೆ ಕ್ರಷರ್ ಘಟಕದ ಸುತ್ತಲೂ ರೈತರ ಫಲವತ್ತಾದ ಕೃಷಿ ಭೂಮಿ ನಂಬಿ ರೈತರು ಜೀವನ ಸಾಗಿಸುತ್ತಿದ್ದಾರೆ. ಕ್ರಷರ್ ಆರಂಭಿಸಿದರೆ ಧೂಳಿನಿಂದ ಕೃಷಿಗೆ ತೊಂದರೆಯಾಗಲಿದೆ ಎಂದು ದೂರಿದರು. ಅಲ್ಲದೆ ಪ್ರೌಢಶಾಲೆ, ವಿದ್ಯಾರ್ಥಿ ನಿಲಯವಿದ್ದು, ಕ್ರಷರ್ ಸದ್ದಿನಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗಲಿದೆ. ಆದರೂ ಕ್ರಷರ್ ಆರಂಭಿಸಲು ಕ್ರಷರ್ ಮಾಲೀಕರು ಮುಂದಾಗಿದ್ದಾರೆ ಎಂದರು.
ಸ್ಥಳ ಪರಿಶೀಲನೆ ನಡೆಸಲಿ:ಜಿಲ್ಲಾಧಿಕಾರಿಗಳು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಕವಾಗಲಿರುವ ಕ್ರಷರ್ ಆರಂಭಕ್ಕೆ ತಡೆ ಹಾಕಬೇಕು ಎಂದು ಗ್ರಾಮಸ್ಥರು ಸಾಂಕೇತಿಕವಾಗಿ ಪ್ರತಿಭಟನೆ ಆರಂಭಿಸಿದ್ದು, ಕ್ರಷರ್ ನೀಡುವ ಅನುಮತಿ ರದ್ದು ಪಡಿಸದಿದ್ದರೆ ಗ್ರಾಮಸ್ಥರೆಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್, ಗ್ರಾಪಂ ಸದಸ್ಯ ರಾಜೇಶ್, ರೈತಸಂಘದ ಜಗದೀಶ್, ನಾಗಪ್ಪ, ಗ್ರಾಮಸ್ಥರಾದ ಹನುಮಯ್ಯ, ಹರೀಶ್, ಮೋಹನ್ ದಾಸ್, ಗುರುಸ್ವಾಮಿ, ಸಿದ್ದರಾಜು, ಮರಿಸ್ವಾಮಿ ಸೇರಿದಂತೆ ಕ್ರಷರ್ ಘಟಕದ ಸುತ್ತ ಮುತ್ತಲಿನ ರೈತರು, ಮಹಿಳೆಯರು ಭಾಗವಹಿಸಿದ್ದರು.೨೭ಜಿಪಿಟಿ೧
ಗುಂಡ್ಲುಪೇಟೆ ತಾಲೂಕಿನ ಅಗತಗೌಡನಹಳ್ಳಿ ಬಳಿ ಕ್ರಷರ್ ಆರಂಭಿಸದಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಕ್ರಷರ್ ಘಟಕ ಆರಂಭಕ್ಕೆ ರೈತರ ವಿರೋಧ
ಫಲವತ್ತಾದ ಕೃಷಿ ಜಮೀನಿನಲ್ಲಿ ಕ್ರಷರ್ ಘಟಕ ಆರಂಭಕ್ಕೆ ರೈತರ ವಿರೋಧವಿರುವ ಕಾರಣ ಕ್ರಷರ್ ಲೈಸನ್ಸ್ ರದ್ದುಪಡಿಸಿ ರೈತರು ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಸಂಸದ ಎ.ಸಿದ್ದರಾಜು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದ ರೈತರು ಒಂದು, ಎರಡು ಎಕರೆ ಕೃಷಿ ಭೂಮಿ ನಂಬಿ ಬದುಕುತ್ತಿದ್ದಾರೆ, ಕ್ರಷರ್ ಆರಂಭಿಸಿದರೆ ಧೂಳಿಗೆ ಫಸಲು ನಾಶವಾಗುತ್ತದೆ. ಅಲ್ಲದೆ ಕ್ರಷರ್ ಸದ್ದಿಗೆ ಅನತಿ ದೂರದ ಪ್ರೌಢ ಶಾಲೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರು. ಫಲವತ್ತಾದ ಕೃಷಿ ಭೂಮಿ ಹೊಂದಿದ ರೈತರು ಕ್ರಷರ್ ಆರಂಭಕ್ಕೆ ವಿರೋಧವಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಕೂಡ ಸಲ್ಲಿಸಿದ್ದಾರೆ. ಆದರೂ ಹಣ ಬಲ, ಅಧಿಕಾರಿಯೊಬ್ಬರ ಬಲದಿಂದ ಕ್ರಷರ್ ಆರಂಭಕ್ಕೆ ಪ್ರಯತ್ನಿಸಿದ್ದಾರೆ. ಇದು ಖಂಡನೀಯ ಎಂದರು. ಜಿಲ್ಲಾಧಿಕಾರಿಗಳು ಕ್ರಷರ್ ಲೈಸನ್ಸ್ ರದ್ದು ಪಡಿಸಿ ರೈತರು ಕೃಷಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.