ನಟ ಜೈದ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಕಲ್ಟ್ ಎಂಬ ಕನ್ನಡ ಚಲನಚಿತ್ರ ಇದೇ ತಿಂಗಳ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದ ಅಂಗವಾಗಿ ಹಾಸನ ನಗರಕ್ಕೆ ಆಗಮಿಸಿದ ನಾಯಕ ನಟ ಜೈದ್ ಖಾನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಚಿತ್ರದ ವಿಷಯ ಹಾಗೂ ಸಂದೇಶದ ಬಗ್ಗೆ ಮಾಹಿತಿ ನೀಡಿದರು. ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕುಟುಂಬದೊಂದಿಗೆ ಬಂದು ನೋಡಬೇಕು ಎಂದು ಜೈದ್ ಖಾನ್ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಹಾಸನ
ನಟ ಜೈದ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ `ಕಲ್ಟ್ ಎಂಬ ಕನ್ನಡ ಚಲನಚಿತ್ರ ಇದೇ ತಿಂಗಳ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರದ ಅಂಗವಾಗಿ ಹಾಸನ ನಗರಕ್ಕೆ ಆಗಮಿಸಿದ ನಾಯಕ ನಟ ಜೈದ್ ಖಾನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಚಿತ್ರದ ವಿಷಯ ಹಾಗೂ ಸಂದೇಶದ ಬಗ್ಗೆ ಮಾಹಿತಿ ನೀಡಿದರು.ಉಪಾಧ್ಯಕ್ಷ ಕನ್ನಡ ಸಿನಿಮಾ ಖ್ಯಾತಿಯ ಅನಿಲ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ಅರ್ಪಿಸಿದೆ. ಜೆ.ಎಸ್. ವಾಲಿ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿದೆ. ನಗರದ ಖಾಸಗಿ ಹೋಟೆಲೊಂದರಲ್ಲಿ ಮಾತನಾಡಿದ ಜೈದ್ ಖಾನ್, ಇಂದಿನ ಯುವಜನರು ಪ್ರೀತಿಯ ಹೆಸರಿನಲ್ಲಿ ಯಾವ ರೀತಿಯ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ಸ್ಪಷ್ಟ ಸಂದೇಶದ ಮೂಲಕ ಹೇಳಲಾಗಿದೆ ಎಂದರು.ಮದುವೆಯ ನಂತರ ಪೋಷಕರು ತಮ್ಮ ಬದುಕಿನಲ್ಲಿ ಮುಳುಗಿ ಮಕ್ಕಳಿಗೆ ಸಮಯ ನೀಡದೇ ಇರುವ ವಾಸ್ತವ ಸ್ಥಿತಿಯನ್ನೂ ಚಿತ್ರ ಎತ್ತಿಹಿಡಿಯುತ್ತದೆ. ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಕು, ಜವಾಬ್ದಾರಿ ಮುಗಿಯುತ್ತದೆ ಎಂಬ ಭಾವನೆ ತಪ್ಪು ಎಂಬುದನ್ನು ಈ ಚಿತ್ರ ಹೇಳುತ್ತದೆ ಎಂದು ಹೇಳಿದರು.ಈ ಸಿನಿಮಾ ಕುಟುಂಬ ಸಮೇತ ನೋಡಬಹುದಾದ ಚಿತ್ರವಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದಲ್ಲಿ ರಚಿತಾ ರಾಮ್, ರಂಗಾಯಣ ರಘು ಸೇರಿದಂತೆ ಕೆಲವೇ ಪ್ರಮುಖ ಕಲಾವಿದರು ಅಭಿನಯಿಸಿದ್ದು, ಒಟ್ಟು ಆರು ಹಾಡುಗಳು ಚಿತ್ರದ ಆಕರ್ಷಣೆಯಾಗಿವೆ. ಜನವರಿ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕುಟುಂಬದೊಂದಿಗೆ ಬಂದು ನೋಡಬೇಕು ಎಂದು ಜೈದ್ ಖಾನ್ ಮನವಿ ಮಾಡಿದರು.ಈ ವೇಳೆ ಚಿತ್ರದ ನಾಯಕಿ ಮಲೈಕಾ ಟಿ. ವಸುಪಾಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಎವಗ್ರೀನ್ ಚಾರಿಟಬಲ್ ಟ್ರಸ್ಟ್ ನಿರ್ದೇಶಕ ಎಸ್. ದರ್ಶನ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದು, ಕಲ್ಟ್ ಚಿತ್ರದ ಬಿಡುಗಡೆಗೆ ಶುಭ ಹಾರೈಸಿದರು.