ಅವೈಜ್ಞಾನಿಕ ಸೈಕಲ್ ಟ್ರ್ಯಾಕ್ ಯೋಜನೆ!

| Published : May 31 2024, 02:30 AM IST

ಸಾರಾಂಶ

ನಗರದ ಪ್ರಮುಖ ಮತ್ತು ಜನನಿಬಿಡ ರಸ್ತೆಗಳಲ್ಲೇ ಈ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ರಸ್ತೆಗಳಲ್ಲಿ ವಾಹನಗಳು ಸುಗಮವಾಗಿ ಸಂಚರಿಸುವುದು ಕನಸಿನ ಮಾತು. ರಸ್ತೆಗಳ ಮುಕ್ಕಾಲು ಭಾಗ ಪಾರ್ಕಿಂಗ್ ಆಗಿ ಬದಲಾಗಿದೆ. ಪಾದಚಾರಿ ಮಾರ್ಗಗಳನ್ನು ವ್ಯಾಪಾರಸ್ಥರಿಗೆ ಮಾರಲಾಗಿದೆ. ಹೀಗಾಗಿ ಪಾದಚಾರಿಗಳೂ ರಸ್ತೆಯ ನಡುವೆಯೇ ಓಡಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಇರುವ ಕಾಲು ಭಾಗದ ರಸ್ತೆಯಲ್ಲಿ ವಾಹನಗಳು ಝಿಗ್ ಝಾಗ್ ರೀತಿಯಲ್ಲಿ ಸರ್ಕಸ್ ಮಾಡುತ್ತಾ ಸಂಚರಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗಾಯದ ಮೇಲೆ ಬರೆ ಎಂಬಂತೆ ಮೈಸೂರಿನ ಹಲವು ಭಾಗಗಳಲ್ಲಿ ಅವೈಜ್ಞಾನಿಕವಾಗಿ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದೆ. ಖಾಸಗಿ ಸಂಸ್ಥೆಗಳಿಂದ ನಿರ್ಮಾಣವಾದ ಈ ಸೈಕಲ್ ಟ್ರ್ಯಾಕ್ ಗಳಲ್ಲಿ ಸೈಕಲ್ ಸವಾರಿ ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ.

ನಗರದ ಪ್ರಮುಖ ಮತ್ತು ಜನನಿಬಿಡ ರಸ್ತೆಗಳಲ್ಲೇ ಈ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗಿದೆ. ಮೈಸೂರು ವಿವಿ ಕುವೆಂಪು ಪ್ರತಿಮೆಯಿಂದ ಕುಕ್ಕರಹಳ್ಳಿ ರಸ್ತೆ, ಕೌಟಿಲ್ಯ ವೃತ್ತದಿಂದ ಎಂಡಿಎ ಕಚೇರಿ, ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ವೃತ್ತ, ಕುಕ್ಕರಹಳ್ಳಿಯಿಂದ ವಿಶ್ವಮಾನವ ಜೋಡಿ ರಸ್ತೆ ಮಾರ್ಗವಾಗಿ ಹೊರ ವರ್ತುಲ ರಸ್ತೆ, ಅಶೋಕ ವೃತ್ತದಿಂದ ಟೆನ್ನಿಸ್ ಕೋರ್ಟ್, ಚಾಮರಾಜ ಜೋಡಿ ರಸ್ತೆ, ರಮಾವಿಲಾಸ ರಸ್ತೆ, ಕೌಟಿಲ್ಯ ವೃತ್ತದ ರಸ್ತೆ, ರಾಮಸ್ವಾಮಿ ವೃತ್ತದಿಂದ ದಾಸಪ್ಪ ವೃತ್ತ, ಮೈಸೂರು ವಿಶ್ವವಿದ್ಯಾನಿಲಯದ ರಸ್ತೆಯವರೆಗೂ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದೆ.

ಬಲ್ಲಾಳ್ ವೃತ್ತದಿಂದ ಕೆ.ಜಿ. ಕೊಪ್ಪಲ್ ಗೆ ಹೋಗುವ ಕಾಂತರಾಜ ಅರಸ್ ರಸ್ತೆಯ ರಾಮಮಂದಿರ ಬಳಿ ಇರುವ ಸೈಕಲ್ ಟ್ರ್ಯಾಕ್ ಮೂಲಕ ಸೈಕಲ್ ಸಂಚರಿಸಲು ಪೊಲೀಸರ ಬ್ಯಾರಿಕೇಡ್ ಅಡ್ಡಿಯಾಗಿದೆ. ಅಲ್ಲದೆ, ರಾಮಮಂದಿರ ಬಳಿಯ ಸೈಕಲ್ ಟ್ರ್ಯಾಕ್ ಆಟೋ ಟ್ರ್ಯಾಕ್ ಆಗಿ ಪರಿವರ್ತಿತವಾಗಿದೆ.

ಈ ಸೈಕಲ್ ಟ್ರ್ಯಾಕ್ ನಿಂದ ಸೈಕಲ್ ಸವಾರರಿಗೂ ಪ್ರಯೋಜನವಿಲ್ಲ. ಜೊತೆಗೆ ಪಾದಚಾರಿಗಳು ಹಾಗೂ ವಾಹನ ಸಚಾರಕ್ಕೂ ಅಡ್ಡಿಯಾಗಿದೆ. ವಿಶ್ವಮಾನವ ಜೋಡಿರಸ್ತೆಯಿಂದ ಕುವೆಂಪುನಗರ ಪೊಲೀಸ್ ಠಾಣೆಗೆ ತಿರುಗುವ ಜಾಗದಲ್ಲಿ ಈ ಸೈಕಲ್ ಟ್ರ್ಯಾಕಿನ ಗೂಟಗಳು ಎಳನೀರು ಕೊಚ್ಚುವ ಕತ್ತಿಯ ಹೊಡೆತಕ್ಕೆ ಬಲಿಯಾಗಿವೆ.

ಅಶೋಕ ವೃತ್ತದ ಬಳಿ ಇರುವ ಮಹೇಶ್ ಪ್ರಸಾದ್ ಹೋಟೆಲ್ ಎದುರು ಇರುವ ಕಾರ್ ಶೋರೂಂ ಬಳಿ ಇರುವ ಸೈಕಲ್ ಟ್ರ್ಯಾಕ್ ಯಾವುದೋ ಸ್ಮಾರಕದಂತೆ ಅನಾಥವಾಗಿ ಶಿಕ್ಷೆ ಅನುಭವಿಸುತ್ತಿದೆ. ಈ ಸೈಕಲ್ ಟ್ರ್ಯಾಕಿನಿಂದ ಸೈಕಲ್ ಸವಾರರಿಗೂ ಉಪಯೋಗವಿಲ್ಲ. ಉಳಿದವರಿಗೆ ಉಪಯೋಗಕ್ಕಿಂತ ಉಪದ್ರವೇ ಹೆಚ್ಚಾಗಿದೆ.

ಈ ಕೂಡಲೇ ಜಿಲ್ಲಾಡಳಿತವು ಅವೈಜ್ಞಾನಿಕವಾಗಿ ನಿರ್ಮಾಣವಾದ ಹಾಗೂ ನಿರ್ನಾಮವಾದ ಈ ಸೈಕಲ್ ಟ್ರ್ಯಾಕ್ ನಿರ್ಮಾತೃಗಳ ವಿರುದ್ಧ ಕ್ರಮ ಕೈಗೊಂಡು, ಅದೇ ಮೊತ್ತದಲ್ಲಿ ಪಾದಚಾರಿ ಮಾರ್ಗಗಳನ್ನು ಪುನರುಜ್ಜೀವಗೊಳಿಸಲಿ.

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು