ಸಾರಾಂಶ
ಮನುಷ್ಯನ ಬದುಕಿನಲ್ಲಿ ಸಂತಸ, ಸತ್ಕೀರ್ತಿ, ನೆಮ್ಮದಿ ನಿರಂತರವಾಗಿ ನೆಲೆಸಬೇಕಾದರೆ ಅದಕ್ಕೆ ಭಗವಂತನ ಪ್ರಾರ್ಥನೆ ಅನಿವಾರ್ಯ ಹಾಗೂ ಅತ್ಯವಶ್ಯಕ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಪೀಠಾಧ್ಯಕ್ಷ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು.
ತುಮಕೂರು: ಮನುಷ್ಯನ ಬದುಕಿನಲ್ಲಿ ಸಂತಸ, ಸತ್ಕೀರ್ತಿ, ನೆಮ್ಮದಿ ನಿರಂತರವಾಗಿ ನೆಲೆಸಬೇಕಾದರೆ ಅದಕ್ಕೆ ಭಗವಂತನ ಪ್ರಾರ್ಥನೆ ಅನಿವಾರ್ಯ ಹಾಗೂ ಅತ್ಯವಶ್ಯಕ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಪೀಠಾಧ್ಯಕ್ಷ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶ್ರೀಕೃಷ್ಣಮಂದಿರದಲ್ಲಿ ಏರ್ಪಟ್ಟಿದ್ದ ಮಂದಿರದ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.ನಮ್ಮ ಮನೆಯಲ್ಲಿರುವ ದೇವರ ಕೋಣೆಯ ಜೊತೆಗೆ ನಮ್ಮ ಮನಸ್ಸಿನಲ್ಲೂ ದೇವರಿರಬೇಕು. ಸದಾ ದೇವರ ನಾಮಸ್ಮರಣೆ ಮಾಡುತ್ತಿರಬೇಕು. ಮಾಡುವ ಕೆಲಸ ನಿಸ್ವಾರ್ಥ ಮನೋಭಾವದಿಂದ ಕೂಡಿರಬೇಕು. ಆಗ ನಮ್ಮ ಜೀವನ ನಿತ್ಯೋತ್ಸವವಾಗುತ್ತದೆ ಎಂದು ಮಹಾಭಾರತದ ಹಲವು ಪ್ರಸಂಗಗಳನ್ನು ಉಲ್ಲೇಖಿಸಿದರು.
ತುಮಕೂರಿನಲ್ಲಿ ಪೇಜಾವರ ಹಿರಿಯ ಶ್ರೀಗಳಿಂದ ಸ್ಥಾಪಿತವಾದ ಶ್ರೀಕೃಷ್ಣ ಮಂದಿರವು ಕಳೆದ 15 ವರ್ಷಗಳಿಂದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದನ್ನು ಶ್ಲಾಘಿಸಿದರು.ಮಂದಿರದ ಕಾರ್ಯಚಟುವಟಿಕೆಗಳಿಗೆ ಸಹಕರಿಸಿದ ದಾನಿಗಳನ್ನು ಶ್ರೀಪಾದಂಗಳು ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಸಮಾರಂಭದಲ್ಲಿ ಕೃಷ್ಣ ಮಂದಿರದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಹತ್ವಾರ್, ಮಾಧ್ವ ಮಹಾಮಂಡಲದ ಜಿಲ್ಲಾ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್, ಕಾರ್ಯದರ್ಶಿ ಗುರುಪ್ರಸಾದ್, ನಾಗರಾಜಧನ್ಯ, ಸೂರ್ಯನಾರಾಯಣ್ ಸೇರಿದಂತೆ ನೂರಾರು ಸಾರ್ವಜನಿಕರು ಪಾಲೊಂಡಿದ್ದರು.