ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಿನಕ್ಕೊಂದು ಬಣ್ಣ!

| Published : Oct 22 2025, 01:03 AM IST

ಸಾರಾಂಶ

ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಿನಕ್ಕೊಂದು ಬಣ್ಣದ ಬೆಡ್‌ ಶೀಟ್‌ ಹಾಕುತ್ತಿರುವುದು ರೋಗಿಗಳಲ್ಲಿ ಆಸ್ಪತ್ರೆ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡುತ್ತಿದೆ ಜತೆಗೆ ಸಿಬ್ಬಂದಿಗಳು ಕರ್ತವ್ಯದಿಂದ ಜಾರಿಕೊಳ್ಳುವುದನ್ನು ತಪ್ಪಿಸಿದಂತಾಗಿದೆ ಅಲ್ಲದೇ, ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಶುಚಿತ್ವದ ವಿಷಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿ ಯಾವಾಗಲೂ ಅಸಮಾಧಾನ ಇದ್ದೇ ಇರುತ್ತದೆ. ಜತೆಗೆ ಅಲ್ಲಿನ ಸಿಬ್ಬಂದಿಯೂ ಅದೇ ರೀತಿ ಇರುತ್ತಾರೆ. ಇದನ್ನು ತಪ್ಪಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಪ್ರತಿದಿನ ಒಂದೊಂದು ಬಣ್ಣದ ಬೆಡ್‌ ಶೀಟ್‌ ಹಾಗೂ ತಲೆದಿಂಬಿನ ಕವರ್‌ ಹಾಕುವ ಯೋಜನೆಯನ್ನು ಜಾರಿಗೊಳಿಸಿದೆ. ಇದು ರಾಜ್ಯದಲ್ಲೇ ಪ್ರಥಮ ಪ್ರಯೋಗ.

ಸರ್ಕಾರಿ ಆಸ್ಪತ್ರೆಯೆಂದರೆ ಹಾಸಿಗೆಗಳ ಬೆಡ್‌ಶೀಟ್‌ ಬದಲಾಯಿಸುವುದಿಲ್ಲ. ಅದೇ ಬೆಡ್‌ ಶೀಟ್‌, ಶುಚಿತ್ವದ ಕೊರತೆ ಇರುತ್ತದೆ. ವೈದ್ಯಾಧಿಕಾರಿಗಳು ಬೆಡ್‌ ಶೀಟ್‌ ಬದಲಾಯಿಸಿ ಎಂದು ಹೇಳಿದರೂ ಸಿಬ್ಬಂದಿ ಬದಲಾಯಿಸಲಾಗಿದೆ ಸರ್‌ ಎಂದು ಜಾರಿಕೊಳ್ಳುವುದೇ ಜಾಸ್ತಿ. ಇದನ್ನು ತಪ್ಪಿಸಬೇಕೆಂದರೆ ದಿನಕ್ಕೊಂದು ಬಣ್ಣದ ಬೆಡ್‌ ಶೀಟ್‌ ಹಾಗೂ ತಲೆದಿಂಬಿನ ಕವರ್‌ ಹಾಕುವ ಪದ್ಧತಿ ಜಾರಿಗೊಂಡರೆ, ಒಳರೋಗಿಗಳಲ್ಲಿ ಆಸ್ಪತ್ರೆ ಬಗ್ಗೆ ವಿಶ್ವಾಸ ಮೂಡುತ್ತದೆ. ಜತೆಗೆ ಅಲ್ಲಿನ ಸಿಬ್ಬಂದಿಯೂ ಬದಲಾಯಿಸಲಾಗಿದೆ ಎಂದು ಸಬೂಬು ಹೇಳಲು ಅವಕಾಶವೇ ಇರಲ್ಲ. ಹೀಗಾಗಿ ವಾರದ ಏಳು ದಿನವೂ ಒಂದೊಂದು ಬಣ್ಣದ ಬೆಡ್‌ಶೀಟ್‌ ಹಾಕಲಾಗುತ್ತಿದೆ.

ಯಾವ್ಯಾವ ಬಣ್ಣ:

ಭಾನುವಾರ ತಿಳಿ ಹಸಿರು, ಸೋಮವಾರ ಕಂದು, ಮಂಗಳವಾರ ಕೆಂಪು, ಬುಧವಾರ ಹಚ್ಚ ಹಸಿರು, ಗುರುವಾರ ನೀಲಿ, ಶುಕ್ರವಾರ ಗುಲಾಬಿ ಹಾಗೂ ಶನಿವಾರ ನೇರಳೆ ಬಣ್ಣದ ಬೆಡ್‌ ಶೀಟ್‌ ಸಿದ್ಧಪಡಿಸಲಾಗಿದೆ. ಹಳೆಯ ಬೆಡ್‌ಶೀಟ್‌ಗಳನ್ನು ತೆಗೆದು, ಪಾಲಿಕೆ ಅಡಿಯಲ್ಲಿರುವ ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

ಬಟ್ಟೆಗಳನ್ನು ತೊಳೆಯಲೆಂದೇ 30 ಕೆಜಿಯ ವಾಷಿಂಗ್ ಮಷಿನ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಮ್ಮ ಅನುದಾನದಲ್ಲಿ ನೀಡಿದ್ದಾರೆ. ನೀರಲ್ಲಿ ಬಟ್ಟೆ ಶುಚಿ ಮಾಡಿದ್ದಾರೋ ಇಲ್ಲವೋ ಎಂದು ಗಮನ ಹರಿಸಲು, ವಿಶೇಷ ತಂಡವನ್ನು ಸಹ ರಚಿಸಲಾಗಿದೆ.

ದೇಣಿಗೆ:

ಕಿಡ್ನಿ, ಹೃದಯ ಹಾಗೂ ಕಾಲಿನ ಸಮಸ್ಯೆಯಿಂದ 75 ವರ್ಷದ ಫಾತೀಮಾ ದಾವೂದ್‌ ಎಂಬುವವರನ್ನು ಅವರ ಕುಟುಂಬ ಆಸ್ಪತ್ರೆಗೆ ದಾಖಲಿಸಿತ್ತು. ಅವರ ಶಸ್ತ್ರಚಿಕಿತ್ಸೆ ಅತ್ಯಂತ ಯಶಸ್ವಿಯಾಗಿ ಮನೆಗೆ ತೆರಳಿದರು. ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಆದರೆ ಚಿಟಗುಪ್ಪಿಯಲ್ಲಿನ ಚಿಕಿತ್ಸೆಯಿಂದಾಗಿ ಅವರ ಆರೋಗ್ಯ ಸುಧಾರಿಸಿತು. ಹೀಗಾಗಿ ಕುಟುಂಬದವರು ಆಸ್ಪತ್ರೆಗೆ ಏನಾದರೂ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ. ಅದಕ್ಕೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ಇಂತಿಷ್ಟು ಬಣ್ಣದ ಬೆಡ್‌ ಶೀಟ್‌ ಕೊಡಿಸಿದರೆ ಉತ್ತಮವಾಗುತ್ತದೆ ಎಂದು ತಿಳಿಸಿದ್ದಾರೆ. ಅದರಂತೆ ₹ 1.5ರಿಂದ ₹ 2 ಲಕ್ಷ ಖರ್ಚು ಮಾಡಿ 500 ಬೆಡ್‌ಶೀಟ್‌ ಹಾಗೂ ತಲೆದಿಂಬು ಕವರ್‌ಗಳನ್ನು ಈ ಕುಟುಂಬ ಕೊಡಿಸಿದೆ. ಆ ಬೆಡ್‌ಶೀಟ್‌ಗಳನ್ನು ಈ ರೀತಿ ಬಳಸಲಾಗುತ್ತಿದೆ.

ಈ ಪರಿಕಲ್ಪನೆ ಇಡೀ ರಾಜ್ಯದಲ್ಲೇ ಇದೇ ಮೊದಲು. ಕೇರಳದ ಆಸ್ಪತ್ರೆಯಲ್ಲಿ ಈ ರೀತಿಯಲ್ಲಿ ದಿನಕ್ಕೊಂದು ಬಣ್ಣದ ಬೆಡ್ ಶೀಟ್ ವ್ಯವಸ್ಥೆ ಇದೆ ಎಂದು ಹೇಳಲಾಗುತ್ತಿದೆ. ಯಾವ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಯಲ್ಲೂ ಈ ವ್ಯವಸ್ಥೆಯಿಲ್ಲ ಎಂಬುದು ಸ್ಪಷ್ಟ ಎಂದು ಚಿಟಗುಪ್ಪಿ ಆಸ್ಪತ್ರೆ ವೈದ್ಯರು ತಿಳಿಸುತ್ತಾರೆ.

ಒಟ್ಟಿನಲ್ಲಿ ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಿನಕ್ಕೊಂದು ಬಣ್ಣದ ಬೆಡ್‌ ಶೀಟ್‌ ಹಾಕುತ್ತಿರುವುದು ರೋಗಿಗಳಲ್ಲಿ ಆಸ್ಪತ್ರೆ ಬಗ್ಗೆ ಹೆಚ್ಚಿನ ವಿಶ್ವಾಸ ಮೂಡುತ್ತಿದೆ ಜತೆಗೆ ಸಿಬ್ಬಂದಿಗಳು ಕರ್ತವ್ಯದಿಂದ ಜಾರಿಕೊಳ್ಳುವುದನ್ನು ತಪ್ಪಿಸಿದಂತಾಗಿದೆ ಅಲ್ಲದೇ, ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವುದಂತೂ ಸತ್ಯ.ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಬಡ ರೋಗಿಗಳು ಉತ್ತಮ ಚಿಕಿತ್ಸೆ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಸರ್ಕಾರಿ ಆಸ್ಪತ್ರೆಯ ಬೆಡ್‌ಶೀಟ್ ಬದಲಾಯಿಸುವುದಿಲ್ಲ. ಸ್ವಚ್ಛತೆ ಇರುವುದಿಲ್ಲ ಎಂಬ ದೂರು ಸಾಮಾನ್ಯ. ಇದಕ್ಕೆ ಪರಿಹಾರವಾಗಿ ವಾರದಲ್ಲಿ ಏಳುದಿನವೂ ಬೆಡ್‌ಶೀಟ್‌ ಹಾಗೂ ದಿಂಬಿನ ಕವರ್ ಬದಲಿಸಿ, ಅವುಗಳ ಮೇಲೆ ವಾರ ಬರೆದು ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತದೆ.

ಡಾ. ಶ್ರೀಧರ ದಂಡೆಪ್ಪನವರ, ಮುಖ್ಯವೈದ್ಯಾಧಿಕಾರಿ, ಚಿಟಗುಪ್ಪಿ ಆಸ್ಪತ್ರೆ