ಪದವಿ ಎಂದರೆ ಪ್ರಬುದ್ಧತೆಯ ಸಂಕೇತ

| Published : Nov 23 2024, 12:34 AM IST

ಸಾರಾಂಶ

ಚಿತ್ರದುರ್ಗ: ಪದವಿ ಎಂದರೆ ಪ್ರಬುದ್ಧತೆಯ ಸಂಕೇತವಾಗಿದ್ದು, ಸಂವಾದ, ಚರ್ಚೆ ಮಾಡಿದಷ್ಟು ಜ್ಞಾನ ಬೆಳೆಯುತ್ತದೆ. ಪದವಿ ವಿದ್ಯಾರ್ಥಿಗಳಿಗೆ ವಿಮರ್ಶನಾಶಕ್ತಿ ಅಸಾಧಾರಣವಾಗಿದ್ದು, ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳು ತೀಕ್ಷ್ಣರಾಗಲು ಪಠ್ಯಗಳು ನೆರವಾಗುತ್ತವೆ ಎಂದು ಡಾ.ಬಸವಕುಮಾರ ಸ್ವಾಮಿಗಳು ತಿಳಿಸಿದರು.

ಚಿತ್ರದುರ್ಗ: ಪದವಿ ಎಂದರೆ ಪ್ರಬುದ್ಧತೆಯ ಸಂಕೇತವಾಗಿದ್ದು, ಸಂವಾದ, ಚರ್ಚೆ ಮಾಡಿದಷ್ಟು ಜ್ಞಾನ ಬೆಳೆಯುತ್ತದೆ. ಪದವಿ ವಿದ್ಯಾರ್ಥಿಗಳಿಗೆ ವಿಮರ್ಶನಾಶಕ್ತಿ ಅಸಾಧಾರಣವಾಗಿದ್ದು, ಎಲ್ಲಾ ರೀತಿಯಲ್ಲಿ ವಿದ್ಯಾರ್ಥಿಗಳು ತೀಕ್ಷ್ಣರಾಗಲು ಪಠ್ಯಗಳು ನೆರವಾಗುತ್ತವೆ ಎಂದು ಡಾ.ಬಸವಕುಮಾರ ಸ್ವಾಮಿಗಳು ತಿಳಿಸಿದರು.

ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ನಡೆದ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ, ಕನ್ನಡ ರಾಜ್ಯೋತ್ಸವ, ವಿಶೇಷ ವಾರ್ಷಿಕ ಸಂಚಿಕೆ ಬಿಡುಗಡೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ವ್ಯಕ್ತಿಯ ವ್ಯಕ್ತಿತ್ವ ನಿರ್ಧರಿಸುವುದು ಆತನ ಅಸ್ತಿತ್ವದಿಂದ. ಈ ಹಿಂದೆ ಜ್ಞಾನ ಸಂಪತ್ತಿಗೆ ಹೆಚ್ಚು ಮಹತ್ವ ಇತ್ತು. ಇಂದು ಅಸ್ತಿತ್ವದಿಂದ ವ್ಯಕ್ತಿಯನ್ನು ಗುರುತಿಸುವ ಕೆಲಸವಾಗುತ್ತಿದೆ ಎಂದ ಅವರು, ಪರಿಶ್ರಮ ಮತ್ತು ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಬಹುದು. ಇನ್ನೊಬ್ಬರ ಪ್ರಶಂಸೆಗಾಗಿ ನಾವು ಎಂದೂ ಬದುಕಬಾರದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಓದುವುದು ಯಾವುದು ಎನ್ನುವುದು ಮುಖ್ಯವಲ್ಲ. ಏನನ್ನು ಓದುತ್ತಿದ್ದೇವೆ ಎನ್ನುವುದು ಮುಖ್ಯ. ಪದವಿ ಎನ್ನುವುದು ಅರ್ಹತೆ. ಶಿಕ್ಷಣ ಇಂದು ವ್ಯಾಪಾರೀಕರಣವಾಗುತ್ತಿದೆ. ಸಂಸ್ಕಾರ ಮರೀಚಿಕೆಯಾಗಿದೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಸಹ ಪೋಷಕರನ್ನು ಮರೆಯಬಾರದು. ಇಂದು ಸಂಬಂಧಗಳು ಗಟ್ಟಿಯಾಗಿ ಉಳಿದಿಲ್ಲ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಎಸ್.ಎನ್.ಚಂದ್ರಶೇಖರ್ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ, ಮಾತನಾಡಿದರು.

ಇದೇ ವೇಳೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರುಚಿತ, ರಂಜಿತಾ ಹಾಗೂ ಜಿಲ್ಲಾ ಉತ್ತಮ ಸಮಾಜ ಸೇವಕ ಪ್ರಶಸ್ತಿಗೆ ಭಾಜನರಾದ ಟಿ.ಪರಶುರಾಮರವರನ್ನು ಸನ್ಮಾನಿಸಲಾಯಿತು.

ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಘುನಾಥರೆಡ್ಡಿ, ಪ್ರಾಚಾರ್ಯ ಡಾ.ಎಲ್.ಈಶ್ವರಪ್ಪ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಉಷಾ, ಕಾರ್ಯದರ್ಶಿ ರುಚಿತಾ.ಎಲ್, ಐಕ್ಯೂಎಸಿ ಸಂಚಾಲಕ ಪ್ರೊ.ಎಂ.ಎಸ್.ಪರಮೇಶ್, ಪ್ರೊ.ನಾಗರಾಜ್, ಪ್ರೊ.ಎಲ್.ರಾಜಾನಾಯ್ಕ್, ಡಾ.ಬಿ.ವೈ.ಶ್ವೇತ, ಮಿಸ್ಬಾಖಾನುಂ, ರಮ್ಯ, ಸುಜಾತ, ಟಿ.ಎಸ್.ಗಿರೀಶ್, ವಸಂತಕುಮಾರಿ, ಲೋಕೇಶ್, ರಾಘವೇಂದ್ರ ಮೊದಲಾದವರಿದ್ದರು. ವಾರ್ಷಿಕ ಸಂಚಿಕೆ ಸಂಪಾದಕರಾದ ಡಾ.ಸಿ.ಸುಧಾರಾಣಿ ಸಂಚಿಕೆ ಕುರಿತು ಮಾತನಾಡಿದರು. ಕು. ಚಿನ್ಮಯಿ ವೀಣಾವಾದನ ನಡೆಸಿಕೊಟ್ಟರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.