ಸಾರಾಂಶ
ಶಿರಸಿ: ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ ಹಾಗೂ ಉಡುಪಿ ಕ್ಷೇತ್ರದ ಸಂಸದರ ನೇತೃತ್ವದ ಪ್ರಾಂತ್ಯದ ರೈತ ಪ್ರತಿನಿಧಿಗಳ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿದರು.ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ್ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಶಿರಸಿ ಹಾಗೂ ಸಾಗರ ಪ್ರಾಂತ್ಯದ ರೈತ ಪ್ರತಿನಿಧಿಗಳಾದ ಎಚ್.ಎಸ್. ಮಂಜಪ್ಪ ಸೊರಬ ಹಾಗೂ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಅಡಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.ಅಕ್ರಮವಾಗಿ ಆಮದಾಗುತ್ತಿರುವ ಅಡಕೆಯನ್ನು ತಡೆಯಬೇಕು. ಎಫ್‌ಎಸ್‌ಎಸ್‌ಐ ಈಗ ನಿರ್ದಿಷ್ಟಪಡಿಸಿದ ಆರ್ದ್ರತೆ ಪ್ರಮಾಣ ಶೇ. ೦೭ರಿಂದ ಶೇ. ೧೧ಕ್ಕೆ ಏರಿಸುವಂತೆ, ಮೈಲುತುತ್ತದ ಮೇಲೆ ಈಗ ವಿಧಿಸುತ್ತಿರುವ ಜಿಎಸ್‌ಟಿಯನ್ನು ಶೇ. ೧೮ರಿಂದ ಶೇ. ೦೫ಕ್ಕೆ ಇಳಿಸಲು ಮನವಿ ಸಲ್ಲಿಸಲಾಯಿತು.
ಅಡಕೆ ಕೃಷಿಕರು ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳ ಕುರಿತು ಕೃಷಿ ಸಚಿವರ ಗಮನಕ್ಕೆ ತರಲಾಯಿತು. ಈ ವಿಷಯಗಳ ಬಗ್ಗೆ ಕೃಷಿ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಅಡಕೆ ಬೆಳೆಗಾರರು ಎದುರಿಸಿತ್ತಿರುವ ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು. ನಿಯೋಗದಲ್ಲಿ ಯು.ಟಿ. ರಾಮಪ್ಪ, ಅನಿಲ್ ಒಡೆಯರ್, ಮಲ್ಲಿಕಾರ್ಜುನ ಸಾಗರ, ನರಸಿಂಹ ಹೆಗಡೆ, ಪ್ರಕಾಶ ಹೆಗಡೆ ಹುಳುಗೋಳ, ಟಿಎಸ್‌ಎಸ್‌ನ ಪ್ರಧಾನ ವ್ಯವಸ್ಥಾಪಕ ಗಿರೀಶ್ ಹೆಗಡೆ ಇದ್ದರು.ಡಿ. 2ರಿಂದ ಫೆ. 25ರವರೆಗೆ ಶಿರಸಿ- ಕುಮಟಾ ಹೆದ್ದಾರಿ ಬಂದ್ಕಾರವಾರ: ರಾಷ್ಟ್ರೀಯ ಹೆದ್ದಾರಿ 766(ಇ) ಕುಮಟಾ- ಶಿರಸಿ ರಸ್ತೆ ಕಾಮಗಾರಿ ಆರಂಭವಾಗುವುದರಿಂದ ಡಿ. 2ರಿಂದ ಫೆ. 25ರ ತನಕ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.ಕೇವಲ ಲಘು ವಾಹನಗಳು ಮಾತ್ರ ಈ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಭಾರಿ ವಾಹನಗಳು ಬದಲೀ ಮಾರ್ಗವಾಗಿ ಅಂಕೋಲಾ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ 93ರಲ್ಲಿ ಹಾಗೂ ಸಿದ್ದಾಪುರ- ಮಾವಿನಗುಂಡಿ ಮಾರ್ಗವಾಗಿ ಎಲ್ಲ ವಿಧದ ವಾಹನಗಳು ಸಂಚರಿಸಬಹುದು. ಕುಮಟಾ ಶಿರಸಿ ರಸ್ತೆಯ ಕಾಮಗಾರಿ ಸಮಯದಲ್ಲಿ ಜಿಲ್ಲಾಧಿಕಾರಿ ಆದೇಶದಂತೆ ಮೇಲ್ಕಂಡಂತೆ ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಎಂ. ನಾರಾಯಣ ಕೋರಿದ್ದಾರೆ.ಪರ- ವಿರೋಧ ಅಭಿಪ್ರಾಯ
ಈ ರಸ್ತೆ ಬಂದ್ ಮಾಡುವ ಕುರಿತು ಪರ- ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೆದ್ದಾರಿ ಸಂಚಾರ ಬಂದ್ ಮಾಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರು. ಕಾಮಗಾರಿ ನಡೆಯುವಾಗ ಮಾತ್ರ ಬಂದ್ ಮಾಡಿ, ಉಳಿದ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಿಡುವಂತೆ ಸಂಸದ ಕಾಗೇರಿ ಸೂಚಿಸಿದ್ದರು. ಕೆಲ ಸೇತುವೆ ನಿರ್ಮಾಣ ಹಾಗೂ ದೇವಿಮನೆ ಘಟ್ಟ ಪ್ರದೇಶದಲ್ಲಿ ಕಾಮಗಾರಿ ನಡೆಸುವಾಗ ಸಮೀಪದಲ್ಲಿ ಪರ್ಯಾಯ ರಸ್ತೆ ಕಲ್ಪಿಸಲು ಅವಕಾಶವೇ ಇಲ್ಲದಿರುವುದರಿಂದ ಸಂಚಾರ ಸ್ಥಗಿತಗೊಳಿಸುವಂತೆ ರಸ್ತೆ ನಿರ್ಮಾಣ ಗುತ್ತಿಗೆ ಕಂಪನಿ ಮನವಿ ಮಾಡಿತ್ತು.