ಅವಳಿ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಹುಬ್ಬಳ್ಳಿ:

ಅವಳಿ ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಹದಗೆಟ್ಟ ರಸ್ತೆ ಸರಿಪಡಿಸುವುದು, ಚಿಟಗುಪ್ಪಿ ಆಸ್ಪತ್ರೆಯ ಲಿಫ್ಟ್ ದುರಸ್ತಿ, ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಅವಳಿ ನಗರದ ವಿವಿಧ ನಾಗರಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.

ಇಲ್ಲಿನ ಪಾಲಿಕೆ ಕಚೇರಿಯಲ್ಲಿ ಬುಧವಾರ ನಡೆದ "ಮೇಯರ್‌ ಜತೆ ಮಾತುಕತೆ " ಫೋನ್‌ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿಬಂದವು.

ಹಳೇ ಹುಬ್ಬಳ್ಳಿಯ ರಾಜಶೇಖರ ಟೊಂಗಳಿ ಮಾತನಾಡಿ, ಅವಳಿ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚನ್ನಪೇಟೆಯಲ್ಲಿ ಸಿ.ಸಿ. ರಸ್ತೆ ನಿರ್ಮಿಸಲಾಗಿದ್ದು, ಕೆಲವೆಡೆ ಮಾತ್ರ ಪಾದಚಾರಿ ಮಾರ್ಗವಿದೆ. ಇನ್ನುಳಿದ ಕಡೆ ಪೇವರ್ಸ್ ಅಳವಡಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ನಿವಾಸಿಯೊಬ್ಬರು ಮನವಿ ಮಾಡಿದರು.

ಮೊರಾರ್ಜಿ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಗಿಡ-ಗಂಟಿಗಳು ಬೆಳೆದಿದ್ದು, ಸ್ವಚ್ಛಗೊಳಿಸುವಂತೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ವಿಜಯಕುಮಾರ ಆಗ್ರಹಿಸಿದರು.

ಅಯೋಧ್ಯಾನಗರದ ಪ್ರೌಢಶಾಲೆ ಸಮೀಪ ಕಸ ಸುರಿಯಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಲ್ಲಿ ಕಸ ಸುರಿಯದಂತೆ ಕ್ರಮಕೈಗೊಂಡು ಸ್ವಚ್ಛತೆ ಕಾಪಾಡಬೇಕು ಎಂದು ನಿವಾಸಿಯೊಬ್ಬರು ಒತ್ತಾಯಿಸಿದರು.

ಹಳೇ ಹುಬ್ಬಳ್ಳಿ ಭಾಗದಲ್ಲಿ 24X7 ಕುಡಿಯುವ ನೀರು ಪೂರೈಕೆ ಯೋಜನೆಯಡಿ 4 ಇಂಚಿನ ಪೈಪ್ ಅಳವಡಿಸಿರುವುದರಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈ ಹಿಂದೆ 6 ಇಂಚಿನ ಪೈಪ್ ಇದ್ದು, ಅದನ್ನೇ ಅಳವಡಿಸಬೇಕು. ಈ ಕುರಿತು ಎಲ್‌ ಆ್ಯಂಡ್‌ ಟಿ ಕಂಪನಿ ಸಿಬ್ಬಂದಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ನಿವಾಸಿಯೊಬ್ಬರು ದೂರಿದರು.

ಹಳೇ ಹುಬ್ಬಳ್ಳಿಯ ಗ್ರಾಮ ದೇವತೆ ದೇವಸ್ಥಾನದ ಬಳಿ ಮೂರು ತಿಂಗಳಿಂದ ಒಳಚರಂಡಿ ಚೇಂಬರ್ ಕಟ್ಟಿಕೊಂಡಿದೆ. ಇದರಿಂದ ಮನೆಗಳ ಶೌಚಾಲಯದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಭವಾನಿಶಂಕರ ದೇವಸ್ಥಾನ ಸಮೀಪವಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎನ್ನುತ್ತಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಅಶೋಕ ಕುಂಜಗಿ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ದೇವಸ್ಥಾನದ ಸುತ್ತಲಿನ ಪ್ರದೇಶ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ನೆಲ ಅಗೆದು ಕಾಮಗಾರಿ ನಡೆಸಲು ಸಾಧ್ಯವಿಲ್ಲ. ತಾತ್ಕಾಲಿಕವಾಗಿ ಜೆಟ್ಟಿಂಗ್ ಯಂತ್ರದ ಮೂಲಕ ಒಳಚರಂಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಜತೆಗೆ ಅವಳಿ ನಗರದಲ್ಲಿನ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಎಲ್ಲ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ಈ ವೇಳೆ ಪಾಲಿಕೆ ಉಪಆಯುಕ್ತ ವಿಜಯಕುಮಾರ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಫೋನ್‌ಇನ್‌ನಲ್ಲಿ 42 ದೂರು

ಫೋನ್‌ಇನ್‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ದುರ್ಗಮ್ಮ ಬಿಜವಾಡ, ಫೋನ್‌ಇನ್‌ ಕಾರ್ಯಕ್ರಮದಲ್ಲಿ ಒಟ್ಟು 42 ದೂರುಗಳು ಬಂದಿದ್ದು, ಇದರಲ್ಲಿ ನೀರು, ಸ್ವಚ್ಛತೆ, ಚರಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ಕರೆಗಳಾಗಿದ್ದವು. ಪಾಲಿಕೆ ಅಧಿಕಾರಿಗಳು ಪ್ರತಿ ವಾರ್ಡ್‌ಗೆ ಕಡ್ಡಾಯವಾಗಿ ಭೇಟಿ ನೀಡಿ ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇ-ಸ್ವತ್ತು ಸಮಸ್ಯೆಗಳನ್ನೂ ಪರಿಹರಿಸಲು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದರು.