ಹತಾಶ ಮನೋಭಾವದ ಕಾಂಗ್ರೆಸ್ ಪಕ್ಷವು ಇಂದು ಸರಿಯಾದ ರಾಷ್ಟ್ರೀಯ ಪಕ್ಷವಾಗಿಯೂ ಉಳಿಯದೇ ದುಷ್ಟ ಕೂಟವಾಗಿ ಮಾರ್ಪಟ್ಟಿದೆ
ಹಾವೇರಿ: ಚುನಾವಣೆಗಳಲ್ಲಿ ಸತತ ಸೋಲಿನಿಂದ ಹತಾಶಗೊಂಡಿರುವ ಕಾಂಗ್ರೆಸ್ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಬಿಜೆಪಿ ಧಾರವಾಡ ವಿಭಾಗದ ವತಿಯಿಂದ ಬುಧವಾರ ನಗರದಲ್ಲಿ ಆಯೋಜಿಸಿದ್ದ ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಬೃಹತ್ ಪ್ರತಿಭಟನಾ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹತಾಶ ಮನೋಭಾವದ ಕಾಂಗ್ರೆಸ್ ಪಕ್ಷವು ಇಂದು ಸರಿಯಾದ ರಾಷ್ಟ್ರೀಯ ಪಕ್ಷವಾಗಿಯೂ ಉಳಿಯದೇ ದುಷ್ಟ ಕೂಟವಾಗಿ ಮಾರ್ಪಟ್ಟಿದೆ. ಬಾಂಗ್ಲಾ, ನೇಪಾಳದಲ್ಲಿ ದಂಗೆಯಾಯಿತು. ನಮ್ಮ ದೇಶದಲ್ಲಿ ಆಗುತ್ತಿಲ್ಲ ಎನ್ನುವ ಹತಾಶೆ ಅವರಿಗೆ. ಎಸ್ ಐಆರ್ ಪ್ರಕ್ರಿಯೆಯಲ್ಲಿ 13 ಕೋಟಿ ಜನರ ಹೆಸರು ಡಿಲೀಟ್ ಆಗಿದ್ದು, ಅದರಲ್ಲಿ ಮೂರು ಕೋಟಿ ಜನರು ನಿಧನ ಹೊಂದಿದ್ದಾರೆ. ಸುಮಾರು ಆರೂವರೆ ಕೋಟಿ ಜನರು ಡುಪ್ಲಿಕೇಟ್ ಆಗಿವೆ. ಇನ್ನುಳಿದವರು ಎಸ್ ಐಆರ್ ಸಂದರ್ಭದಲ್ಲಿ ವಿಳಾಸದಲ್ಲಿಲ್ಲ, ಅವರಿಗೆ ಈಗಲೂ ಅವಕಾಶ ಇದೆ. ಕಾಂಗ್ರೆಸ್ ನವರು ಓಟ್ ಚೋರಿ ಎಂದು ಹುಚ್ಚರ ಸಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿದಿನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದೇ ಅವರ ಕೆಲಸವಾಗಿದೆ. ಮೋದಿ ಅವರು ಹಲವು ಸವಾಲುಗಳನ್ನು ಎದುರಿಸಿ ಮೂರು ಬಾರಿ ಪ್ರಧಾನಿಯಾಗಿದ್ದಾರೆ. 2029ರಲ್ಲೂ ಅವರೇ ಪ್ರಧಾನಿಯಾಗಲಿದ್ದು, ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಮಾಜಿ ಸಚಿವ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನರ, ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೆಲಗಾರ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಭರತ್ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣವರ, ನಾಗರಾಜ ಛಬ್ಬಿ, ಶೋಭಾ ನಿಸ್ಸೀಮಗೌಡ್ರ, ಪರಮೇಶ್ವರಪ್ಪ ಮೇಗಳಮನಿ, ನಂಜುಂಡೇಶ ಕಳ್ಳೇರ, ನಿರಂಜನ ಹೇರೂರ, ಭೋಜರಾಜ ಕರೂದಿ, ಕಿರಣ ಕೊಳ್ಳಿ ಇತರರು ಇದ್ದರು.
ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿದೆ. ನಿಜವಾದ ಸಂವಿಧಾನ ರಕ್ಷಣೆ ಆಗುತ್ತಿರುವುದು ಬಿಜೆಪಿಯಿಂದ. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಜನರಲ್ಲಿ ಅನುಮಾನ ಮೂಡಿಸಿ, ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಈ ನಾಟಕ ಇನ್ನು ಮುಂದೆ ನಡೆಯುವುದಿಲ್ಲ ಎಂದು ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಲವು ಆರೋಪಗಳನ್ನು ಮಾಡುತ್ತಿದೆ. ಕೇಂದ್ರ ಸರ್ಕಾರ ಎಸ್ಐಆರ್ ನಡೆಸುತ್ತಿರುವುದು ನುಸುಳುಕೋರರು ಹಾಗೂ ಮೃತಪಟ್ಟವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು. ಅದನ್ನು ವಿರೋಸುವುದರಲ್ಲಿ ಅರ್ಥವಿಲ್ಲ. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ರಾಹುಲ್ ಗಾಂಧಿ ಪ್ರಬುದ್ಧತೆ ಇಲ್ಲದ ನಾಯಕ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗಿನಿಂದಲೂ ಒಂದಲ್ಲ ಒಂದು ನಾಟಕ ಮಾಡುತ್ತಿದೆ. ಚುನಾವಣೆ ಗೆದ್ದಾಗ ಇವಿಎಂ ಸರಿಯಾಗಿರುತ್ತದೆ. ಸೋತಾಗ ಮಾತ್ರ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ. ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಜನರು ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಿದ್ದಾರೆ. ಇಂದಿರಾ ಗಾಂಧಿ ಮತ್ತು ನೆಹರು ಕಾಲದಲ್ಲೂ ಎಸ್ಐಆರ್ ಪ್ರಕ್ರಿಯೆ ನಡೆದಿದೆ. ಈಗ ವಿರೋಸುತ್ತಿರುವುದೇಕೆ?. ಎಂದು ಶಾಸಕ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.ರಾಹುಲ್ ಗಾಂಧಿ ಸಂಸತ್ತಿನಲ್ಲಿ ವಿಷಯಾಧಾರಿತ ಚರ್ಚೆ ನಡೆಸುವ ಬದಲು ಹೊರಗಿನ ವಿಚಾರಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕವೇ ಕಾಂಗ್ರೆಸ್ಗೆ ಜನರು ಉತ್ತರ ನೀಡಿದ್ದಾರೆ. ಇವರು ಗೆದ್ದಾಗ ಇವಿಎಂ ಸರಿಯಿರುತ್ತದೆ, ಬಿಜೆಪಿ ಗೆದ್ದಾಗ ಇವಿಎಂ ದೂರುತ್ತಾರೆ. ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ. ಭ್ರಷ್ಟ ಸರ್ಕಾರ ಕಿತ್ತೊಗೆಯಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದ್ದಾರೆ.