ಹಿಂದಿನ ಯೋಜನೆಯ ರೂಪುರೇಷೆಗೂ ಈಗಿನ ಪ್ರಸ್ತಾವನೆಗೂ ಸಾಕಷ್ಟು ವ್ಯತ್ಯಾಸವಿದೆ. ಪ್ರಸ್ತುತ ಯೋಜನೆಯಿಂದ ದೊಡ್ಡ ಪ್ರಮಾಣದ ಮುಳುಗಡೆಯಾಗುವುದಿಲ್ಲ.

ಹಾವೇರಿ: ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಅನುಷ್ಠಾನಕ್ಕಾಗಿ ಉತ್ತರ ಕರ್ನಾಟಕದ ಜನರು ಒಗ್ಗಟ್ಟಿನ ಹೋರಾಟ ರೂಪಿಸಬೇಕು. ಸರ್ಕಾರಗಳು ಬದಲಾಗಬಹುದು. ಆದರೆ ನೀರಿಗಾಗಿ ನಡೆಯುವ ಹೋರಾಟದ ಸಂಕಲ್ಪ ಬದಲಾಗಬಾರದು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಬುಧವಾರ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

ಯೋಜನೆ ಸಾಕಾರಕ್ಕೆ ರೈತರು, ಮಠಾಧೀಶರು, ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಒಂದೇ ವೇದಿಕೆಯಲ್ಲಿ ಸಂಘಟಿತರಾಗುವ ಅಗತ್ಯವಿದೆ. ಹಾವೇರಿ ಜಿಲ್ಲೆಯ ಜನಶಕ್ತಿಯ ಪ್ರದರ್ಶನ ಇಡೀ ದೇಶದ ಗಮನ ಸೆಳೆಯುವಂತಿರಬೇಕು. ಯಾವುದೇ ಬೃಹತ್ ಯೋಜನೆ ಸುಲಭವಾಗಿ ಜಾರಿಯಾಗುವುದಿಲ್ಲ. ಹಲವು ಹಂತಗಳ ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿರಂತರ ಪ್ರಯತ್ನ ಮತ್ತು ಜನರ ಒತ್ತಡದಿಂದ ಅಸಾಧ್ಯವೆನಿಸಿದ್ದನ್ನೂ ಸಾಧ್ಯವಾಗಿಸಬಹುದು. ಹೀಗಾಗಿ ಈ ಯೋಜನೆಯ ವಿಚಾರದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ಹೋರಾಟ ಮುಂದುವರಿಸಬೇಕು ಎಂದರು.

ಡಿಪಿಆರ್‌ನಿಂದ ಆತಂಕಗಳಿಗೆ ಉತ್ತರ: ಹಿಂದಿನ ಯೋಜನೆಯ ರೂಪುರೇಷೆಗೂ ಈಗಿನ ಪ್ರಸ್ತಾವನೆಗೂ ಸಾಕಷ್ಟು ವ್ಯತ್ಯಾಸವಿದೆ. ಪ್ರಸ್ತುತ ಯೋಜನೆಯಿಂದ ದೊಡ್ಡ ಪ್ರಮಾಣದ ಮುಳುಗಡೆಯಾಗುವುದಿಲ್ಲ. 700 ಹೆಕ್ಟೇರ್ ನದಿ ಪಾತ್ರದ ಪ್ರದೇಶ ಮಾತ್ರ ಯೋಜನೆಗೆ ಒಳಪಡಲಿದೆ. ಇಡೀ ನದಿಯನ್ನೇ ಬೇರೆಡೆಗೆ ತಿರುಗಿಸಲಾಗುತ್ತದೆ ಎಂಬ ಆತಂಕ ಸರಿಯಲ್ಲ. ಡಿಪಿಆರ್ ಪೂರ್ಣಗೊಂಡ ಬಳಿಕವಷ್ಟೇ ಯೋಜನೆಯ ನೈಜ ಸ್ವರೂಪ ಮತ್ತು ಸಾಧಕ-ಬಾಧಕಗಳ ಸ್ಪಷ್ಟ ಚಿತ್ರಣ ಸಿಗಲಿದೆ. ಈ ವರದಿಯೇ ಮುಂದಿನ ಹೋರಾಟಕ್ಕೆ ಆಧಾರವಾಗಲಿದೆ ಎಂದರು.

ಸರ್ವೆ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಅಧಿಕಾರಿಗಳ ಅಳಲು. ಹೀಗಾಗಿ ಡ್ರೋನ್ ಮೂಲಕ ಸರ್ವೆ ನಡೆಸುವಂತೆ ಸೂಚಿಸಲಾಗಿದೆ. ಯೋಜನೆಗೆ ಎಂಒಯು ಸಹಿ ಹಾಕಲಾಗಿದ್ದು, ಅದಕ್ಕೆ ಬದ್ಧವಾಗಿರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಹಾವೇರಿ ಜಿಲ್ಲೆಗೆ ಪ್ರತ್ಯೇಕ ನೀರಿನ ಪಾಲು ದೊರೆಯುವಂತೆಯೂ ಪ್ರಯತ್ನಿಸಲಾಗುತ್ತಿದೆ ಎಂದರು.

ಕೇಂದ್ರ ಸಚಿವರ ಭೇಟಿ: ಗದಗ ಮತ್ತು ಹಾವೇರಿ ಜಿಲ್ಲೆಗಳ ರೈತರ ಬೃಹತ್ ಸಮಾವೇಶ ಆಯೋಜಿಸುವ ಅಗತ್ಯವಿದೆ. ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳು, ಮಠಾಧೀಶರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತ ಹೋರಾಟ ರೂಪಿಸಬೇಕು. ಎಲ್ಲರೂ ಒಗ್ಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಯೋಜನೆಯ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಬೇಕು. ಬಳಿಕ ಕೇಂದ್ರ ಸಚಿವರ ಮೇಲೂ ಒತ್ತಡ ತರಬೇಕು. ಉತ್ತರ ಕನ್ನಡ ಭಾಗದಲ್ಲಿ ಯೋಜನೆ ವಿರೋಧಿಸಿ ಹೋರಾಟ ನಡೆಯುತ್ತಿರುವಾಗ, ನೀರಿನ ಅಗತ್ಯವಿರುವ ನಮ್ಮ ಭಾಗದ ಜನರೂ ತಮ್ಮ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಹೇಳಿದರು.

ಜನಶಕ್ತಿ ಪ್ರದರ್ಶನವಾಗಲಿ: ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಯೋಜನೆಯಿಂದ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಯೋಜನೆ ವಿರೋಧಿಸುವವರು ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಬೇಡ್ತಿ-ವರದಾ ಯೋಜನೆಯಡಿ 128 ಹಳ್ಳಿಗಳು ಪ್ರಸ್ತಾಪದಲ್ಲಿವೆ. ಪಟ್ಟಣದ ಹೊಳೆ, ಶಾಲ್ಮಲಾ ಹಾಗೂ ಸೂರೆಮನೆ ಬಳಿಯಿಂದ ನೀರು ಪಂಪ್‌ ಮಾಡಿ ಹಿರೇವಡ್ಡಟ್ಟಿ ಬ್ಯಾರೇಜ್ ನಿರ್ಮಿಸುವ ಸಾಧ್ಯತೆಯಿದೆ. 18 ಟಿಎಂಸಿ ನೀರು ಪಡೆಯುವ ಅವಕಾಶವಿರುವಾಗ ಸುಮ್ಮನಿರಲು ಸಾಧ್ಯವೇ? ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿ ಹೋರಾಟಕ್ಕೆ ಮುಂದಾಗಬೇಕು ಎಂದರು.

ಸಭೆಯಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಅಡವಿಸ್ವಾಮಿ ಮಠದ ಕುಮಾರ ಮಹಾಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ವಕೀಲ ಸಂದೀಪ ಪಾಟೀಲ, ರೈತ ಸಂಘದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ರವಿಕಾಂತ ಅಗಡಿ, ಭುವನೇಶ್ವರ ಶಿಡ್ಲಾಪುರ ಸೇರಿದಂತೆ ರೈತ ಮುಖಂಡರು ಪಾಲ್ಗೊಂಡಿದ್ದರು.

ಶಿರಸಿಗೆ 100 ಮಠಾಧೀಶರ ನಿಯೋಗ..

ಬೇಡ್ತಿ-ವರದಾ ಯೋಜನೆ ಅನುಷ್ಠಾನಕ್ಕಾಗಿ ಹಾವೇರಿಯ 100 ಮಠಾಧೀಶರ ನಿಯೋಗವನ್ನು ಶಿರಸಿಗೆ ಕರೆದೊಯ್ದು ಮನವಿ ಮಾಡುತ್ತೇವೆ. ಮೊದಲು ಸಂಧಾನಕ್ಕೆ ಪ್ರಯತ್ನಿಸಿ, ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಹೋರಾಟ ಮಾಡಬೇಕು ಎಂದು ಶಿರಹಟ್ಟಿ ಫಕ್ಕಿರೇಶ್ವರ ಸಂಸ್ಥಾನ ಮಠ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ರೈತರು ಮಳೆ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಈ ಭಾಗಕ್ಕೆ ಬೇಡ್ತಿ-ವರದಾ ಯೋಜನೆ ಅವಶ್ಯಕ. ಜನಪ್ರತಿನಿಧಿಗಳು, ರೈತರು ಹಾಗೂ ಮಠಾಧೀಶರು ಪಕ್ಷಾತೀತವಾಗಿ ಒಗ್ಗೂಡಿ ಹೋರಾಟ ನಡೆಸಬೇಕು ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದ್ದಾರೆ.

ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ವರದಿ ಬಂದ ಬಳಿಕ ಮುಂದಿನ ಹಂತದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಲಿದೆ. ಯಾವುದೇ ಕಾರಣಕ್ಕೂ ಯೋಜನೆ ಸ್ಥಗಿತಗೊಳ್ಳಲು ಬಿಡುವುದಿಲ್ಲ. ಒತ್ತಡಗಳ ನಡುವೆಯೂ ಸರ್ಕಾರದ ಮಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಬದ್ಧವಾಗಿ ಶ್ರಮಿಸಲಾಗುವುದು ಎಂದು ಹಿರೇಕೆರೂರು ಶಾಸಕ

ಯು.ಬಿ. ಬಣಕಾರ ತಿಳಿಸಿದ್ದಾರೆ.

ಪೈಪ್‌ಲೈನ್ ಮೂಲಕ ನೀರು ಹರಿಸುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2027ರ ಮಾರ್ಚ್ ಒಳಗೆ ಡಿಪಿಆರ್ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ರಾಜ್ಯ ಸರ್ಕಾರ ₹1 ಸಾವಿರ ಕೋಟಿ ಹಾಗೂ ಕೇಂದ್ರ ಸರ್ಕಾರ ₹9 ಸಾವಿರ ಕೋಟಿ ಅನುದಾನದೊಂದಿಗೆ ಯೋಜನೆ ಅನುಷ್ಠಾನಕ್ಕೆ ಮುಂದಾಗಿವೆ ಎಂದು ಹಾನಗಲ್ ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.