ಆಧುನಿಕ ತಂತ್ರಜ್ಞಾನದಿಂದ ವಿಕಸಿತ ಭಾರತ ಕನಸು ನನಸು

| Published : Sep 21 2024, 01:48 AM IST

ಸಾರಾಂಶ

ರೈತರು ಕಾಲುವೆ ವ್ಯವಸ್ಥೆಯನ್ನು ಸ್ವಚ್ಛವಾಗಿಟ್ಟುಕೊಂಡು ಪ್ರತಿ ಹನಿ ನೀರಿನ ಪ್ರಯೋಜನ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರವು ಪ್ರತಿ ನೀರಾವರಿ ಅಣೆಕಟ್ಟುಗಳ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಟ್ಟು ನಿರ್ವಹಿಸಿದ್ದಲ್ಲಿ ಯೋಜನೆಗಳು ಸಫಲವಾಗುತ್ತವೆ.

ಧಾರವಾಡ:

ಆಧುನಿಕ ತಂತ್ರಜ್ಞಾನವು ಅಗತ್ಯವಾಗಿದ್ದು ಇದರಿಂದ ಹೊಸ ಬದಲಾವಣೆ ಕಾಣುತ್ತಿದ್ದೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ ಡಾ. ವಿದ್ಯಾಶಂಕರ ಎಸ್. ಹೇಳಿದರು.

ಇಲ್ಲಿಯ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯಲ್ಲಿ ಆಯೋಜಿಸಿದ್ದ ಅಭಿಯಂತರರ ದಿನಾಚರಣೆ ಉದ್ಘಾಟಿಸಿದ ಅವರು, ಅಭಿಯಂತರರು ಮರುಸೃಷ್ಟಿಕರ್ತರು ಮಾತ್ರವಲ್ಲ, ತಂತ್ರಜ್ಞಾನ ಜಗತ್ತಿನ ಸೃಷ್ಟಿಕರ್ತರಾಗಿದ್ದಾರೆ. ಸ್ವತಂತ್ರ್ಯ ಭಾರತದ ಶತಮಾನೋತ್ಸವದ ವೇಳೆಗೆ ವಿಕಸಿತ ಭಾರತ ಕನಸು ನನಸಾಗುವುದು ಆಧುನಿಕ ತಂತ್ರಜ್ಞಾನದ ಮೂಲಕ ಮಾತ್ರ ಸಾಧ್ಯ ಎಂದರು.

ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಹೊಸ ಆವಿಷ್ಕಾರ ಮತ್ತು ಸಂಶೋಧನೆಗಳ ಅವಶ್ಯಕತೆ ಇದೆ. ಇಂಥ ವಿನ್ಯಾಸಗಳು ಹವಾಮಾನ ಚಕ್ರ ಬದಲಾವಣೆಗೆ ಅನುಗುಣವಾದ ಸವಾಲು ಎದುರಿಸಲು ಸಹಕಾರಿಯಾಗುತ್ತವೆ. ಸುಸ್ಥಿರ ಬದುಕಿಗಾಗಿ ನೈಸರ್ಗಿಕ ಸಂಪನ್ಮೂಲಗಳಾದ ಕೃಷಿ ಭೂಮಿ, ಅರಣ್ಯ, ನೆಲ, ಜಲ, ಗಾಳಿ ಸಂರಕ್ಷಣೆ ಗಮನದಲ್ಲಿರಿಸಿ ಅಭಿವೃದ್ಧಿ ಯೋಜನೆ ರೂಪಿಸಿ ಜಾರಿಗೊಳಿಸುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.

ಇತ್ತೀಚೆಗೆ ತುಂಗಭದ್ರ ಜಲಾಶಯದ ಗೇಟ್‍ನ ದುರಸ್ತಿಯಲ್ಲಿ ಭಾಗವಹಿಸಿದ್ದ, ಹೈದರಾಬಾದ್‌ನ ರಾಷ್ಟ್ರಮಟ್ಟದ ಹೈಡ್ರಾಲಿಕ್ ಗೇಟ್ ಮತ್ತು ನಿರ್ವಹಣಾ ಉಪಕರಣಗಳ ತಜ್ಞ ಎಂಜಿನಿಯರ್‌ ಕನ್ನಯ್ಯ ನಾಯ್ಡು ಮಾತನಾಡಿ, ಕರ್ನಾಟಕದ ನೀರಾವರಿ ಹಾಗೂ ನನ್ನ ವೈಯಕ್ತಿಕ ವೃತ್ತಿ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ದಕ್ಷಿಣ ಭಾರತದ ರೈತಾಪಿ ನನ್ನ ಕುಟುಂಬವಿದ್ದಂತೆ. ರೈತರ ಅನುಕೂಲಕ್ಕಾಗಿ ರಾಜ್ಯದ ತುಂಗಭದ್ರಾ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು ನಿರ್ಮಾಣ, ನೀರಾವರಿ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆಗಳ ವಿನ್ಯಾಸ ರೂಪಿಸಲು ಕೈಜೋಡಿಸಿದ್ದೇವೆ ಎಂದರು.

ರೈತರು ಕಾಲುವೆ ವ್ಯವಸ್ಥೆಯನ್ನು ಸ್ವಚ್ಛವಾಗಿಟ್ಟುಕೊಂಡು ಪ್ರತಿ ಹನಿ ನೀರಿನ ಪ್ರಯೋಜನ ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರವು ಪ್ರತಿ ನೀರಾವರಿ ಅಣೆಕಟ್ಟುಗಳ ನಿರ್ವಹಣೆಗೆ ಹೆಚ್ಚಿನ ಒತ್ತು ಕೊಟ್ಟು ನಿರ್ವಹಿಸಿದ್ದಲ್ಲಿ ಯೋಜನೆಗಳು ಸಫಲವಾಗುತ್ತವೆ. ಅದೇ ರೀತಿ ಅರಣ್ಯ ಸಂರಕ್ಷಣೆಯಿಂದ ಉತ್ತಮ ಮಳೆ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬ ರೈತ ಪ್ರತಿ ವರ್ಷ ಒಂದಾದರೂ ಗಿಡ ನೆಡಬೇಕೆಂದರು.

ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಎನ್. ಪೋದ್ದಾರ ಮಾತನಾಡಿ, ಸರ್.ಎಂ. ವಿಶ್ವೇಶ್ವರಯ್ಯ, ಬಾಳೆಕುಂದ್ರಿ ಮತ್ತು ಇಂ. ಕನ್ನಯ್ಯ ನಾಯ್ಡು ಇವರಂಥಹ ಆದರ್ಶ ಅಭಿಯಂತರರ ಸಂದೇಶಗಳನ್ನು ಪಾಲಿಸುವ ಮೂಲಕ ಆಧುನಿಕ ಭಾರತದ ಸವಾಲು ಎದುರಿಸಲು ಅಭಿಯಂತರರು ಶಕ್ತಿಯಾಗಿ ಹೊರಹೊಮ್ಮಬೇಕು ಕರೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರರಾದ ವಿಮಲಾ ಕಾಳೆ, ಭಾರತೀಯ ಅಭಿಯಂತರ ವಿಜಯ ತೋಟಗೇರ, ಸಿವಿಲ್ ಅಭಿಯಂತರರ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ, ಸಂತೋಷ ಅಂಚಟಗೇರಿ, ಡಾ. ಶಿವರಾಜಕುಮಾರ ಗೌಡರ ಇದ್ದರು.