ಸಾರಾಂಶ
ಅಪಘಾತದಲ್ಲಿ ಕಾಲು ಮುರಿದುಕೊಂಡು ಬದುಕೇ ನಾಶವಾಯಿತು ಎನ್ನುವಾಗ ಇಲ್ಲಿನ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಮಾತಿನಿಂದ ಬದುಕು ಕಟ್ಟಿಕೊಂಡಿರುವ ಭಕ್ತನೋರ್ವ ಈಗ ತನ್ನ ಕೈ ಮೇಲೆ ಶ್ರೀಗಳ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡಿದ್ದಾನೆ.
ಸ್ವಾಮೀಜಿ ಭಾಷಣದಿಂದ ನಾನು ಬದಲಾಗಿದ್ದೇನೆ: ಬಾಳಪ್ಪ
ಕನ್ನಡಪ್ರಭ ವಾರ್ತೆ ಕೊಪ್ಪಳ
ಅಪಘಾತದಲ್ಲಿ ಕಾಲು ಮುರಿದುಕೊಂಡು ಬದುಕೇ ನಾಶವಾಯಿತು ಎನ್ನುವಾಗ ಇಲ್ಲಿನ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಮಾತಿನಿಂದ ಬದುಕು ಕಟ್ಟಿಕೊಂಡಿರುವ ಭಕ್ತನೋರ್ವ ಈಗ ತನ್ನ ಕೈ ಮೇಲೆ ಶ್ರೀಗಳ ಭಾವಚಿತ್ರದ ಹಚ್ಚೆ ಹಾಕಿಸಿಕೊಂಡಿದ್ದಾನೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ನಿವಾಸಿ ಬಾಳಪ್ಪ ಯಲ್ಲಪ್ಪ ಅಬ್ಬಾಯಿ ಈ ವಿಶಿಷ್ಟ ಭಕ್ತಿ ಮೆರೆದಿರುವವರು.
ಸಾಮಾನ್ಯವಾಗಿ ಸಿನೆಮಾ ನಟರು, ನಟಿಯರ ಹಚ್ಚೆಯನ್ನು ಮೈಮೇಲೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ, ಸ್ವಾಮೀಜಿಯ ಹಚ್ಚೆ ಹಾಕಿಸಿಕೊಂಡಿದ್ದು ವಿಶೇಷ.ದೊಡ್ಡ ಕತೆ ಇದೆ:
ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳ ಭಾಷಣ ಕೇಳುತ್ತಿದ್ದ ಬಾಳಪ್ಪ ವಿಆರ್‌ಎಲ್‌ನಲ್ಲಿ ಕೆಲಸ ಮಾಡುತ್ತಿದ್ದ. 2022ರಲ್ಲಿ ಏಕಾಏಕಿ ರಸ್ತೆ ಅಪಘಾತದಲ್ಲಿ ಅವರ ಕಾಲು ಮುರಿಯುತು. ಆಗ ಸಂಕಷ್ಟಕ್ಕೆ ಸಿಲುಕಿದ್ದ ಅವರು ಶ್ರೀಗಳ ಭೇಟಿಯಾಗಿ ಆಶೀರ್ವಾದ ಪಡೆದ್ದರು.ಆಗ ಸ್ವಾಮೀಜಿಗಳು ಭಯಪಡಬೇಡ, ಬರುವ ಕಷ್ಟಗಳನ್ನು ಎದುರಿಸುವುದನ್ನು ಕಲಿಯಬೇಕು ಮತ್ತು ಬಿದ್ದಾಗ ಎದ್ದು ನಿಲ್ಲಬೇಕು ಎಂದು ಹೇಳಿದ್ದು ಈತನ ಮನಸ್ಸಿನ ಮೇಲೆ ಪರಿಣಾಮ ಬೀರಿತು. ಮರಳಿ ಕೆಲಸಕ್ಕೆ ಹೋಗಲಾಗದೆ ಗ್ರಾಮದಲ್ಲಿಯೇ ಕಿರಾಣಿ ಅಂಗಡಿ ಪ್ರಾರಂಭಿಸಿದ. ಗವಿಶ್ರೀಗಳನ್ನು ಕರೆಯಿಸಿ, ಕಿರಾಣಿ ಅಂಗಡಿಯಲ್ಲಿ ಪೂಜೆಯನ್ನೂ ನೆರವೇರಿಸಿದ.
ಈಗ ತನ್ನ ಕೈಮೇಲೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಹಚ್ಚೆ ಹಾಕಿಸಿಕೊಂಡಿದ್ದಾನೆ.ನಿತ್ಯ ₹50 ಕಾಣಿಕೆಕಿರಾಣಿ ಅಂಗಡಿಯನ್ನು ಪ್ರಾರಂಭಿಸಿರುವ ಬಾಳಪ್ಪ ಯಲ್ಲಪ್ಪ ಅಬ್ಬಾಯಿ, ಪ್ರತಿ ನಿತ್ಯ ಗವಿಮಠಕ್ಕೆ ₹50 ತೆಗೆದಿರಿಸುತ್ತಾರೆ. ಶ್ರೀಗಳು ಹಾಸ್ಟೆಲ್ ಕಟ್ಟಲು ಕಣ್ಣೀರು ಹಾಕಿದ್ದರು. ಅದಕ್ಕಾಗಿ ತಮ್ಮದು ಕಾಣಿಕೆ ಇರಲಿ ಎಂದು ತಪ್ಪದೇ ನಿತ್ಯವೂ ₹50 ಕಾಣಿಕೆ ಹಾಕಿ ಇಡುತ್ತಾರೆ. ವರ್ಷಕ್ಕೊಮ್ಮೆ ಬಂದು ಶ್ರೀಮಠಕ್ಕೆ ಕಾಣಿಕೆ ಅರ್ಪಿಸಿ ಹೋಗುತ್ತಾರೆ.
ನಾನು ಕಳೆದ ಹತ್ತು ವರ್ಷಗಳಿಂದ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಭಾಷಣ ಕೇಳುತ್ತಿದ್ದೇನೆ. ನನ್ನ ಬದುಕಿನಲ್ಲಿ ಬಂದ ಕಷ್ಟದಿಂದ ಎದ್ದು ನಿಲ್ಲಲು ಅದರಿಂದ ಸಾಧ್ಯವಾಗಿದೆ. ಹೀಗಾಗಿ, ನಾನು ಅವರ ಚಿತ್ರ ಹಚ್ಚೆ ಹಾಕಿಸಿಕೊಂಡಿದ್ದೇನೆ ಎನ್ನುತ್ತಾರೆ ಬಾಳಪ್ಪ ಅಬ್ಬಾಯಿ.