ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ವಿವಿಧೆಡೆ ಭಾವೈಕ್ಯತೆ ಸಂಕೇತವಾದ ಮೊಹರಂ ಹಬ್ಬವನ್ನು ಬುಧವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಮೊಮ್ಮಕ್ಕಳಾದ ಹಜರತ್ ಹಸನ್, ಹುಸೇನ್ ಅವರ ತ್ಯಾಗ, ಬಲಿದಾನ ಸ್ಮರಿಸುವ ಮೂಲಕ ನಮನ ಸಲ್ಲಿಸಲಾಯಿತು. ಪಟ್ಟಣ ಕಾನಕೇರಿಯಲ್ಲಿ ರಾಹೆ ಅಬ್ದುಲ್ ಫತಾ ಟ್ರಸ್ಟ್ (ರಿ) ವತಿಯಿಂದ ಮೊಹರಂ ಹಬ್ಬವನ್ನು ಸಂಭ್ರಮದಿoದ ಆಚರಿಸಲಾಯಿತು.
ಪಂಜಾ ಕೂರಿಸಿ ಕವಡೆ-ಊದು ಹಾಕಿ, ಹೂವಿನಿಂದ ಅಲಂಕರಿಸಿ ಮಗ್ದುಮ್ ಸಕ್ಕರೆ ಫಾತೆಃ ಅರ್ಪಿಸಿದರು. ನಾಲ್ಕು ದಿನಗಳಿಂದ ದುವಾ ಸಲಾಂ ಜೊತೆಗೆ ಸಾರ್ವಜನಿಕ ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಫ್ತಿ ಸಮೀರ್ ರಝಾ ಪವಿತ್ರ ಮೊಹರಂ ಶ್ರೇಷ್ಠತೆ ಬಗ್ಗೆ ಮಾತನಾಡಿ, ಹಜರತ್ ಇಮಾಂ ಹುಸೇನ್ ಜೀವನ ಚರಿತ್ರೆಯಲ್ಲಿ ಬಹುದೊಡ್ಡ ಪಾಠವಿದೆ. ಮಕ್ಕಳಿಗೆ ಪ್ರೀತಿಯನ್ನು ತೋರಿಸುವುದು, ಹಿರಿಯರಿಗೆ ಗೌರವ ನೀಡುವುದು, ದೀನ ದಲಿತರಿಗೆ ದಾನಧರ್ಮ ನೀಡುವುದು, ಹಸಿದವರಿಗೆ ಊಟ ನೀಡುವುದು, ವಿದ್ಯೆ ಕಲಿಯುವುದು, ಕಲಿಸುವುದು ತಂದೆ-ತಾಯಿಯ ಆಶೀರ್ವಾದ, ದರ್ಗಾಗಳಿಗೆ ಹೋಗಿ ಬರವುದು, ಎಂತಾ ಸಮಯದಲ್ಲಾದರೂ ಸತ್ಯ ವನ್ನು ಕಾಪಾಡುವುದು, ದೇಶಾಭಿಮಾನ ಹೊಂದಿರುವುದನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಈ ಹಬ್ಬವು ಸ್ಥಳೀಯ ಸಂಸ್ಕೃತಿಗಳಿ೦ದ ಪ್ರಭಾವಿತವಾಗಿದೆ. ಅಲ್ಲಾಹನು ಮೊಹರಂ ತಿಂಗಳಿಗೆ ಪ್ರತ್ಯೇಕತೆ ಹಾಗೂ ಪಾವಿತ್ರತೆ ದಯ ಪಾಲಿಸಿದ್ದಾನೆ ಎಂದು ತಿಳಿಸಿದರು.