ಸಾರಾಂಶ
ಹೊರ ರಾಜ್ಯದ ಮಹಿಳಾ ಪ್ರಯಾಣಿಕರೊಬ್ಬರು ಬಿಳೇಕಳ್ಳಿಯಲ್ಲಿ ಬಸ್‌ನಲ್ಲಿ ಹತ್ತಿ, ಅದಾದ ನಂತರ ತಮಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡುವಂತೆ ಕೇಳಿದ ಮಹಿಳೆಯ ಮೇಲೆ ನಿರ್ವಾಹಕ ಹಲ್ಲೆ ನಡೆಸಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಸ್ ಪ್ರಯಾಣ ಟಿಕೆಟ್ ನೀಡುವ ವಿಚಾರವಾಗಿ ನಡೆದ ಕಿತ್ತಾಟದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿದ ಬಿಎಂಟಿಸಿ ನಿರ್ವಾಹಕನನ್ನು ಅಮಾನತು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ವಾಹಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಿಎಂಟಿಸಿ ಕೊತ್ತನೂರು ದಿಣ್ಣೆ ಘಟಕದ (ಡಿಪೋ 34) ಮಾರ್ಗ ಸಂಖ್ಯೆ 368/6 ಬಸ್ ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದಿಂದ ಶಿವಾಜಿನಗರಕ್ಕೆ ಕಾರ್ಯಾಚರಣೆ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ಹೊರ ರಾಜ್ಯದ ಮಹಿಳಾ ಪ್ರಯಾಣಿಕರೊಬ್ಬರು ಬಿಳೇಕಳ್ಳಿಯಲ್ಲಿ ಬಸ್‌ನಲ್ಲಿ ಹತ್ತಿದ್ದಾರೆ. ಅದಾದ ನಂತರ ತಮಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಟಿಕೆಟ್ ನೀಡುವಂತೆ ಮಹಿಳಾ ಪ್ರಯಾಣಕಿ ನಿರ್ವಾಹಕರನ್ನು ಕೋರಿದ್ದಾರೆ.
ಆದರೆ, ಉಚಿತ ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ನಿರ್ವಾಹಕರು ಕೇಳಿದ್ದಾರೆ. ಇದರಿಂದ ಇಬ್ಬರ ನಡುವೆಯೂ ಗದ್ದಲವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೂವಪ್ಪ ನಾಗಪ್ಪ ಅವರು ಮಹಿಳಾ ಪ್ರಯಾಣಕಿ ಮೇಲೆ ಹಲ್ಲೆ ಮಾಡಿದ್ದಾರೆ. ನಿರ್ವಾಹಕ ಹೊಡೆದಿದ್ದರಿಂದ ಮಹಿಳೆ ಬಸ್‌ನಲ್ಲಿಯೇ ಕೆಳಗೆ ಬಿದ್ದಿದ್ದು, ಆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಇಲಾಖಾ ತನಿಖೆಗೆ ಆದೇಶಿಸಿರುವ ಬಿಎಂಟಿಸಿ, ಪ್ರಯಾಣಕಿ ಮೇಲೆ ಹಲ್ಲೆ ನಡೆಸಿದ ಕಾರಣಕ್ಕಾಗಿ ನಿರ್ವಾಹಕ ಹೂವಪ್ಪ ನಾಗಪ್ಪ ಅವರನ್ನು ಅಮಾನತುಗೊಳಿಸಿದೆ.ನಿರ್ವಾಹಕನ ವಿರುದ್ಧ ಪ್ರಕರಣ ದಾಖಲುಹಲ್ಲೆಗೆ ಸಂಬಂಧಿಸಿದಂತೆ ಮಹಿಳಾ ಪ್ರಯಾಣಕಿ ಹೂವಪ್ಪ ನಾಗಪ್ಪ ಅವರ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರ ಆಧಾರದಲ್ಲಿ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ನಿರ್ವಾಹಕನನ್ನು ಕರ್ತವ್ಯದ ವೇಳೆಯಲ್ಲೇ ವಶಕ್ಕೆ ಪಡೆದಿದ್ದಾರೆ. ಆತನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.