ಮಹಿಳೆ ಹೊಟ್ಟೆಯಲ್ಲಿ 4 ಕೆಜಿ ಗೆಡ್ಡೆ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯರು

| Published : Jun 30 2024, 12:51 AM IST

ಸಾರಾಂಶ

ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಕುಮಾರ್, ಅರವಳಿಕೆ ತಜ್ಞ ಡಾ.ರಾಜು, ಸೇರಿ ಇತರ ವೈದ್ಯ ಸಿಬ್ಬಂದಿಯು ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಖಾಸಗಿ ಆಸ್ಪತ್ರೆಗಳ ಸರಿಸಮನಾಗಿ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರ ತಂಡ ಮಹಿಳೆ ಹೊಟ್ಟೆಯಲ್ಲಿ ಬೆಳೆದಿದ್ದ 4 ಕೆ.ಜಿ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ತಾಲೂಕಿನ ಅಲ್ಲಾಪಟ್ಟಣ ಗ್ರಾಮದ ಶ್ರೀನಿವಾಸ್ ಪತ್ನಿ ರಾಜೇಶ್ವರಿ (45) ಅವರ ಹೊಟ್ಟೆ ತುಂಬಾ ದಪ್ಪಗಿತ್ತು. ಈ ಬಗ್ಗೆ ವೈದ್ಯರಲ್ಲಿ ತೋರಿಸಿ ವೈದ್ಯರ ಸೂಚನೆ ಮೇರೆಗೆ ಹೊಟ್ಟೆ ಸ್ಕ್ಯಾನ್ ಮಾಡಿಸಿದಾಗ ರಾಜೇಶ್ವರಿ ಅವರ ಗರ್ಭ ಕೋಶದಲ್ಲಿ ಗೆಡ್ಡೆ ಬೆಳೆದಿರುವುದು ದೃಢಪಟ್ಟಿದೆ.

ನಂತರ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಗೆಡ್ಡೆ ಹೊರತೆಗೆಯಬೇಕು ಎಂದು ಮಹಿಳೆಯ ಪೋಷಕರಿಗೆ ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿಸುವಷ್ಟು ಶಕ್ತರಲ್ಲ. ಇಲ್ಲೇ ಚಿಕಿತ್ಸೆ ಮಾಡಿಸಿಕೊಡುವಂತೆ ಮಹಿಳೆಯ ಕುಟುಂಬಸ್ಥರು ವೈದ್ಯರಲ್ಲಿ ವಿನಂತಿಸಿದ್ದಾರೆ.

ನಂತರ ಶಸ್ತ್ರ ಚಿಕಿತ್ಸೆ ಮಾಡಿಕೊಡುವುದಾಗಿ ಭರವಸೆ ನೀಡಿದ ವೈದ್ಯರು, ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯ ಡಾ. ಮಹೇಶ್ ನೇತೃತ್ವದಲ್ಲಿ ವೈದ್ಯರ ತಂಡ ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ಮಾಡಿಕೊಂಡು ಶನಿವಾರ ಬೆಳಗ್ಗೆ 9 ಗಂಟೆಗೆ ಮಹಿಳೆ ರಾಜೇಶ್ವರಿಯವರಿಗೆ ಗರ್ಭ ಕೋಶದಲ್ಲಿದ್ದ 4ಕೆ.ಜಿ ಯಷ್ಟು ದಪ್ಪ ಗೆಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಯ ಸ್ತ್ರೀರೋಗ ತಜ್ಞ ಡಾ.ಕುಮಾರ್, ಅರವಳಿಕೆ ತಜ್ಞ ಡಾ.ರಾಜು, ಸೇರಿ ಇತರ ವೈದ್ಯ ಸಿಬ್ಬಂದಿಯು ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಖಾಸಗಿ ಆಸ್ಪತ್ರೆಗಳ ಸರಿಸಮನಾಗಿ ಕಾರ್ಯ ನಿರ್ವಹಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶೇಷ ವೈದ್ಯರ ತಂಡ ಇರುವುದರಿಂದ ಈಗಾಗಲೇ ಇಂತಹ ಗರ್ಭ ಕೋಶದಲ್ಲಿ ಗೆಡ್ಡೆ ಬೆಳೆದುಕೊಂಡಿದ್ದ ನಾಲ್ಕೈಂದು ಮಂದಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳಲ್ಲದೇ ಮೂಳೆ ಮುರಿತ ಸೇರಿ ಸಣ್ಣ-ಪುಟ್ಟ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದೆ.

ನುರಿತ ವೈದ್ಯ ಸಿಬ್ಬಂದಿ ಇರುವುದರಿಂದ ಇಂತಹ ಪ್ರಕರಣಗಳ ಕಡೆ ಗಮನ ನೀಡಲಾಗುತ್ತದೆ. ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ದುಪ್ಪಟ್ಟು ಹಣ ಕಳೆದುಕೊಳ್ಳುವ ಬದಲಾಗಿ ಸಾರ್ವಜನಿಕ ಆಸ್ಪತ್ರೆ ಸದುಪಯೋಗ ಪಡಿಸಿಕೊಳ್ಳಬಹುದು. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ. ಒಂದು ವೇಳೆ ಹೆಚ್ಚಿನ ಚಿಕಿತ್ಸೆಗಳಾದರೆ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗುತ್ತದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಾರುತಿ ತಿಳಿಸಿದ್ದಾರೆ.