ಸಾರಾಂಶ
ಇಂದು ಮಹಿಳೆ ಹಾಗೂ ಪುರುಷರಲ್ಲಿ ಬಂಜೆತನ ಹೆಚ್ಚಳವಾಗುತ್ತಿದ್ದು ಇದಕ್ಕೆ ಅಗತ್ಯ ಚಿಕಿತ್ಸೆ ಪಡೆಯಬೇಕಾಗಿದೆ. ಈ ಕುರಿತು ಒಬ್ಬರ ಮೇಲೊಬ್ಬರು ದೂರತ್ತಾ ಕೂಡಬಾರದು ಎಂದು ಡಾ. ಸೌಮ್ಯರಾಣಿ ಹೇಳಿದರು.
ಧಾರವಾಡ
ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹೆಚ್ಚು ಬಂಜೆತನ ಕಂಡುಬರುತ್ತಿದೆ. ಇದು ಬರೀ ಮಹಿಳೆಯರಲ್ಲಷ್ಟೇ ಅಲ್ಲ, ಪುರುಷರಿಗೂ ಅನ್ವಯವಾಗುತ್ತದೆ. ವೈದ್ಯರ ಸಲಹೆ ಮೇರೆಗೆ ಇಬ್ಬರನ್ನೂ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿದರೆ ಬಂಜೆತನ ನಿವಾರಣೆ ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ (ಐಎಂಎ) ರಾಜ್ಯ ಮಹಿಳಾ ಶಾಖೆ ಅಧ್ಯಕ್ಷೆ ಡಾ. ಸೌಮ್ಯರಾಣಿ ಬಿ.ಕೆ. ತಿಳಿಸಿದರು.ಇಲ್ಲಿಯ ಭಾರತೀಯ ವೈದ್ಯಕೀಯ ಸಂಸ್ಥೆಯ ಸಭಾಂಗಣದಲ್ಲಿ ಸಂಸ್ಥೆಯ ಮಹಿಳಾ ಘಟಕದಿಂದ ಏರ್ಪಡಿಸಿದ್ದ ಬಂಜೆತನ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪತಿ-ಪತ್ನಿ ಇಬ್ಬರನ್ನೂ ಪರೀಕ್ಷೆ ಮಾಡಿದಾಗ ಇರುವ ಸಮಸ್ಯೆ ಪತ್ತೆಗೆ ಅನುಕೂಲ. ಅಲ್ಲದೇ ಬಂಜೆತನ ನಿವಾರಣೆಯಾಗಿ ಸಂತಾನ ಫಲ ಪ್ರಾಪ್ತಿಯಾಗುತ್ತದೆ. ಒಬ್ಬರ ಮೇಲೊಬ್ಬರು ದೂರತ್ತ ಕೂಡುವುದು ಸರಿಯಲ್ಲ ಎಂದು ತಿಳಿವಳಿಕೆ ನೀಡಿದರು.
ಡಾ. ಗೀತಾ ಭರತ್ ಉತ್ತೂರ ಮಾತನಾಡಿ, ಒತ್ತಡ ರಹಿತ ಜೀವನ, ಒಳ್ಳೆಯ ದಿನಚರಿ ರೂಢಿಸಿಕೊಳ್ಳಬೇಕು. ಅಂದಾಗ ಸಂತಾನ ಫಲ ಶೀಘ್ರವಾಗಿ ಲಭಿಸುತ್ತದೆ ಎಂದರು. ಡಾ. ನಿಷ್ಠಾ ಮಹಾಬಲಶೆಟ್ಟಿ, ಡಾ. ಕೋಮಲ ರೇವಣಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ ಮಾತನಾಡಿ, ಪುರುಷ ಮತ್ತು ಮಹಿಳೆ ಬಂಜೆತನ ಹೆಚ್ಚಳವಾಗುತ್ತಿದೆ. ವೈದ್ಯಕೀಯ ತಪಾಸಣೆಯಿಂದ ಮಾತ್ರ ಬಂಜೆತನ ನಿರ್ಮೂಲನೆ ಸಾಧ್ಯ ಎಂದರು.ಐಎಂಎ ಮಹಿಳಾ ಶಾಖೆ ಅಧ್ಯಕ್ಷೆ ಡಾ. ಕವಿತಾ ಮಂಕಣಿ ಮಾತನಾಡಿದರು. ಡಾ. ಜ್ಯೋತಿ ಪ್ರಕಾಶ ಸುಲ್ತಾನಪುರಿ, ಡಾ. ಲೀನಾ ಕಾಮತ, ಡಾ. ಪ್ರಮೋದ ಛಬ್ಬಿ, ಡಾ. ರೇವಣಸಿದ್ದಪ್ಪ ಕಣಗಲಿ, ಡಾ. ಲೋಹಿತ ಕುಂಬಾರ, ಡಾ. ಸುನೀಲ ಕುಮಾರ ಸಂವಾದ ನಡೆಸಿಕೊಟ್ಟರು.
ಐಎಂಎ ಧಾರವಾಡ ಅಧ್ಯಕ್ಷ ಡಾ. ಸತೀಶ ಇರಕಲ್, ಕಾರ್ಯದರ್ಶಿ ಡಾ. ಕಿರಣಕುಮಾರ, ಮಹಿಳಾ ಶಾಖೆ ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ ಇದ್ದರು.