ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಸಾರ್ವಜನಿಕ ರಂಗದಲ್ಲಿ ದೇಶದ ಅತೀ ದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಯ ಸ್ಟೇಟ್ ಬ್ಯಾಂಕ್ ಇಂಡಿಯಾದ ಪ್ರೊಬೆಶನರಿ ಅಧಿಕಾರಿಯಾಗಿ 1988ರಲ್ಲಿ ಸೇವೆಗೆ ಸೇರಿದ್ದ ಕರಾವಳಿ ಮೂಲದ ಉಡುಪಿ ತೋನ್ಸೆಯ ವಿನಯ್ ಎಂ. ತೋನ್ಸೆ ಇದೀಗ ಬ್ಯಾಂಕಿನ ಉನ್ನತ ಹುದ್ದೆ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಎನ್ನುವುದು ಗಮನಾರ್ಹ! ಬ್ಯಾಂಕಿನಲ್ಲಿ ಇಂತಹ ಉನ್ನತ ಹುದ್ದೆ ಅಲಂಕರಿಸಿದವರಲ್ಲಿ ಬ್ಯಾಂಕಿಂಗ್‌ನಲ್ಲಿ ಕ್ರಾಂತಿಗೆ ಕಾರಣವಾದ ಕರಾವಳಿ ಕರ್ನಾಟಕದ ವಿನಯ್ ತೋನ್ಸೆ ಅಪರೂಪದ ಸಾಧಕ ಮಾತ್ರವಲ್ಲ ಉಡುಪಿ ಜಿಲ್ಲೆಯ ಮೊದಲಿಗರೂ ಹೌದು!.ಬ್ಯಾಂಕಿನ ಉದ್ಯೋಗಿಯಾಗಿ ಮೂರೂವರೆ ದಶಕಗಳ ಬಳಿಕ ಇಂತಹದ್ದೊಂದು ಉನ್ನತ ಹುದ್ದೆಗೇರುವ ಅಪರೂಪದ ಸಾಧನೆ ಮಾಡಿರುವ ವಿನಯ್ ತೋನ್ಸೆ ದೊರೆತ ಅವಕಾಶದಲ್ಲಿ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದಾರೆ. 2047ರ ಸಮೃದ್ಧ ಭಾರತಕ್ಕಾಗಿ ಅಮೃತಕಾಲವನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಛೆ ಹೊಂದಿದ್ದಾರೆ. ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಕನ್ನಡ ಪ್ರಭದೊಂದಿಗೆ ಸಂತಸದಿಂದ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ದೇಶಕ್ಕಾಗಿ ಸೇವೆ!ಭಾರತ ಸ್ವಾತಂತ್ರ್ಯದ ನೂರು ವರ್ಷ ಪೂರೈಸುವ ಹೊತ್ತಿಗೆ ಸದೃಢ ಆರ್ಥಿಕ ರಾಷ್ಟ್ರವಾಗುವ ಸಂಕಲ್ಪಕ್ಕೆ ಪೂರಕವಾಗಿ ನಾವೇನು ಮಾಡಿದರೂ ಅದು ದೇಶ ಸೇವೆಯೇ! ಈಗಿನ ಅಮೃತಕಾಲದಲ್ಲಿ ನಾವೇನು ಮಾಡಬಹದು ಎನ್ನುವುದೇ ನಮ್ಮ ಗುರಿಯಾಗಬೇಕು. ಶಿಕ್ಷಣ, ಯುವ ಸಬಲೀಕರಣ, ನಾಯಕತ್ವ ಈ ನಿಟ್ಟಿನಲ್ಲಿ ನಾವು ಬಹಳಷ್ಟು ಕೊಡುಗೆ ಸಲ್ಲಿಸಬಹುದು. ಬ್ಯಾಂಕಿನ ಎಂಡಿಯಾಗಿ 22 ಸಾವಿರ ಶಾಖೆಗಳು, 2.30 ಲಕ್ಷ ಉದ್ಯೋಗಿಗಳ ಉತ್ತರದಾಯಿತ್ವದಲ್ಲಿ ಮಾತ್ರವಲ್ಲ ವೈಯಕ್ತಿಕ ನೆಲೆಯಲ್ಲೂ ನಾನು ಈ ವಿಷಯಗಳಿಗೆ ಆದ್ಯತೆ ನೀಡಲು ಬಯಸಿದ್ದೇನೆ ಎಂದರು ವಿನಯ್.
ಐಎಎಸ್ ಅಧಿಕಾರಿಯಾಗಬೇಕೆಂದಿದ್ದ ವಿನಯ್ ಆಕಸ್ಮಿಕವಾಗಿ ಬ್ಯಾಂಕಿಂಗ್ ರಂಗಕ್ಕೆ ಬಂದವರು. ಪ್ರಾಕೃತಿಕ ಸೌಂದರ್ಯದ ನಮ್ಮ ಕರಾವಳಿಯ ನಮ್ಮ ಜನಕ್ಕೆ ಜಲಸಮೃದ್ಧಿಯ ಜತೆಗೆ ಉದ್ಯಮಶೀಲತೆ, ಬುದ್ಧಿವಂತಿಕೆ, ಸರಳತೆ ಸೌಜನ್ಯ ಸಹಜ ಗುಣವಾಗಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ರಾಷ್ಟ್ರದ ಅಭಿವೃದ್ಧಿಯಲ್ಲಿ ಕರಾವಳಿಯವರ ಕೊಡುಗೆ ಉನ್ನತ ಮಟ್ಟದಲ್ಲಿರುವುದು ನಮ್ಮವರ ಹಿರಿಮೆ ಎನ್ನುತ್ತಾರೆ.ಬ್ಯಾಂಕಿನ ಆಡಳಿತ ನಿರ್ದೇಶಕನಾಗಿ ದೇಶ, ಗ್ರಾಹಕರು, ಉದ್ಯೋಗಿಗಳ ಜತೆಗೆ ಸುತ್ತಲಿರುವ ಸಮಾಜದಲ್ಲೂ ನಾವು ಹೇಗೆ ಅಭಿವೃದ್ಧಿಯ ಬದಲಾವಣೆ ತರಬಹುದು ಎನ್ನುವುದೇ ನಮ್ಮ ಗುರಿಯಾಗಬೇಕು. ಪ್ರತಿಯೊಬ್ಬರಲ್ಲೂ ಇರುವ ಶಕ್ತಿ ಸಾಮರ್ಥ್ಯದ ಸದ್ಬಳಕೆಯಾಗಬೇಕು. ನಾಯಕತ್ವ, ಜವಾಬ್ದಾರಿ, ಪಾತ್ರ ನಿರ್ವಹಣೆಯ ಮೂಲಕ ಅತ್ಯುತ್ತಮ ಕೊಡುಗೆ ಸಲ್ಲಿಸುವ ಪರಿವರ್ತನೆಗೆ ನಾವು ಕಾರಣರಾಗಬೇಕಿದೆ ಎನ್ನುತ್ತಾರೆ ವಿನಯ್ ತೋನ್ಸೆ. ಮುಂದಿನ ಯುವಪೀಳಿಗೆಗೆ ಬರೇ ಶಿಕ್ಷಣ ಸಾಲದು. ನೈತಿಕತೆ, ಸದೃಢ ಮಾನಸಿಕತೆಯ ಅಗತ್ಯವಿದೆ. ಪಾಠದ ಜತೆಗೆ ಆಟಕ್ಕೆ ಮಹತ್ವ ಸಿಗಬೇಕು. ಕ್ರೀಡೆಯಿಂದ ಏಕತೆ, ಸ್ವಸ್ಥ ಸದೃಢತೆ ಪಡೆಯುವುದರ ಜತೆಗೆ ಕಳೆದು ಹೋಗುತ್ತಿರುವ ನೈತಿಕ ಮೌಲ್ಯಗಳಿಗೆ ಒತ್ತು ನೀಡಬೇಕು. ಮಾನಸಿಕ ಆರೋಗ್ಯವನ್ನು ಕಾಯ್ದುಕೊಂಡಾಗ ಉನ್ನತ ಸಾಧನೆ ಅರ್ಥಪೂರ್ಣವಾಗುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ನಾವಿದ್ದಲ್ಲೆಲ್ಲ ಪ್ರಗತಿಪರ ಬದಲಾವಣೆಗೆ ಶ್ರಮಿಸಬೇಕು. ವೃತ್ತಿ ಕ್ಷೇತ್ರ ಯಾವುದೇ ಇರಲಿ ಆತ್ಮವಿಶ್ವಾಸದಿಂದ ದೇಶಕ್ಕೆ ಕೊಡುಗೆ ಸಲ್ಲಿಸಬೇಕು. ಅಮೃತ ಕಾಲದಲ್ಲಿ ಭಾರತದ ಆರ್ಥಿತೆಗೆ ಉಜ್ವಲ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಬ್ಯಾಂಕುಗಳ ಜವಾಬ್ದಾರಿ ಹೆಚ್ಚಿದೆ ಎನ್ನುವ ವಿನಯ್ ತೋನ್ಸೆ ಗುಲ್ಬರ್ಗದ ಗ್ರಾಮೀಣ ಪರಿಸರ ಬಂಕೂರಿನಲ್ಲಿ ಬ್ಯಾಂಕ್ ಮೂಲಕ ಬದಲಾವಣೆಗೆ ಕಾರಣವಾದದ್ದು ವೃತ್ತಿ ಜೀವನದ ಅವಿಸ್ಮರಣೀಯ ನೆನಪಾಗಿ ಉಳಿದಿದೆ. ಎಂಭತ್ತರ ದಶಕದಲ್ಲಿ ಮೂಡುಬಿದಿರೆಗೆ ಸ್ಟೇಟ್ ಬ್ಯಾಂಕ್ ಶಾಖಾ ಪ್ರಬಂಧಕರಾಗಿ ಬಂದ ಆ ದಿನಗಳಲ್ಲಿ ಶಾಖೆಯನ್ನು ಸವಾಲುಗಳ ನಡುವೆಯೂ ಕಂಪ್ಯೂಟರೈಸ್ಡ್ ಮಾಡಿದ್ದನ್ನೂ ಮರೆಯಲಾಗದು ಎನ್ನುವ ವಿನಯ್ ಸ್ಟೇಟ್ ಬ್ಯಾಂಕ್ ಉನ್ನತ ಹುದ್ದೆಯಲ್ಲಿ ಕರಾವಳಿ ಕರ್ನಾಟಕದ ಹಿರಿಮೆಗೆ ಗರಿಯಾಗುವುದರ ಜತೆಗೆ ತಮ್ಮ ಈ ಭಾಗದ ತವರು ನೆಲದ ಅಭಿವೃದ್ಧಿಗೂ ಕಾರಣರಾಗಲಿ ಎನ್ನುವುದೇ ಜನತೆಯ ನಿರೀಕ್ಷೆ.ಸಾಧಕ... ವಿನಾಯಕ!!
ತನ್ನ ಮೂರೂವರೆ ದಶಕಗಳ ವೃತ್ತಿ ಜೀವನದಲ್ಲಿ ದೇಶ ಮತ್ತು ವಿದೇಶದಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಹಿರಿಮೆ ವಿನಯ್ ಅವರದ್ದು. ಈವರೆಗೆ ಉಪ ಆಡಳಿತ ನಿರ್ದೇಶಕರಾಗಿ ಕಾರ್ಪೋರೇಟ್ ಅಕೌಂಟ್ಸ್ ಗ್ರೂಪ್ ವ್ಯವಹಾರ ನೋಡಿಕೊಳ್ಳುತ್ತಿದ್ದ ಅವರು ಎಸ್ಬಿಐ ಫಂಡ್ಸ್ ಮ್ಯಾನೇಜ್ಮೆಂಟ್ ಲಿ. ಆಡಳಿತ ನಿರ್ದೇಶಕ, ಸಿಇಒ, ಚೆನ್ನೈ ವೃತ್ತ ಮುಖ್ಯ ಮಹಾಪ್ರಬಂಧಕ, ಹೀಗೆ ವಿವಿಧ ಜವಾಬ್ದಾರಿ ನಿರ್ವಹಿಸಿ ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಮಜಲುಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದವರು. ರಾಜ್ಯ ಮಿನಿ ಒಲಂಪಿಕ್‌ನಲ್ಲಿ ಚಿನ್ನ ಬೆಳ್ಳಿ ಪದಕ ಪಡೆದವರು. ಕ್ರಿಕೆಟ್, ಚೆಸ್, ಬ್ಯಾಡ್ಮಿಂಟನ್ನಲ್ಲಿ ಆಸಕ್ತಿ, ಸಿನಿಮಾ, ರಂಗಭೂಮಿಯ ಜತೆಗೆ ಕನ್ನಡ ಸಾಹಿತ್ಯದ ಅಪಾರ ಒಲವಿನ ಕನ್ನಡ ಮನಸ್ಸು ಹೊಂದಿದ್ದಾರೆ.ವಿನಯ್ ತಂದೆ ಕಿನ್ನಿಮೂಲ್ಕಿ ನಿವಾಸಿ ಮುರಳೀಧರ ರಾವ್ ರಾಜ್ಯ ಕಂದಾಯ ಇಲಾಖೆಯಲ್ಲಿದ್ದವರು. ತಾಯಿ ಕೃಷ್ಣಾ ಬಾಯಿ, ಉಡುಪಿ ಕಲ್ಯಾಣಪುರ ಸುಂಕದಕಟ್ಟೆಯ ಇಷ್ಟದೇವರು ವಿನಾಯಕನ ಹೆಸರಿಟ್ಟಿದ್ದರೂ ಅದು ಬಳಿಕ ವಿನಯ್ ಆಯಿತು.