ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಬೈಪಾಸ್ ರಸ್ತೆಯ ಬಳಿ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣವನ್ನು ಭೇದಿಸಿದ ದೊಡ್ಡಪೇಟೆ ಠಾಣೆಯ ಪೊಲೀಸರ ತಂಡ 20 ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದು, ಒಟ್ಟು 17 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಕಳೆದ ನ.18 ರಂದು ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿತ್ತು. ಇದರ ಪತ್ತೆಗೆ ಪೊಲೀಸ್ ಇನ್‌ಸ್ಪೆಕ್ಟರ್ ರವಿ ಪಾಟೀಲ್, ಅಪರಾಧ ದಳದ ಪಿಎಸ್‍ಐ ಶ್ರೀನಿವಾಸ್ ಅವರ ಮುಂದಾಳತ್ವದಲ್ಲಿ ತಂಡ ರಚಿಸಲಾಗಿತ್ತು ಎಂದರು.
ಈ 17 ಬೈಕ್ ಕಳವು ಪ್ರಕರಣದಲ್ಲಿ ಇಬ್ಬರು ಭಾಗಿಯಾಗಿದ್ದು, ಒಬ್ಬ ಅಪ್ರಾಪ್ತ ಇದ್ದಾನೆ. ಇತನನ್ನು ಬಂಧಿಸಲಾಗಿದ್ದು, ವಯಸ್ಕ ಜಬೀವುಲ್ಲಾ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ಆತನನ್ನೂ ಬಂಧಿಸಲಾಗುವುದು. ವಶಕ್ಕೆ ಪಡೆದ 17 ಬೈಕ್‌ಗಳ ಒಟ್ಟು ಮೌಲ್ಯ ₹10,55,000 ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು.ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನದಿಂದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 4 ಪ್ರಕರಣ, ಸಾಗರ, ಸಖರಾಯಪಟ್ಟಣ, ರಾಮನಗರ ಪಟ್ಟಣ, ದಾವಣಗೆರೆ, ಹೊನ್ನಾಳ್ಳಿ, ಭದ್ರಾವತಿ, ಮೈಸೂರು, ತಿಪಟೂರು, ಹಾಸನ, ಹರಪನಹಳ್ಳಿಯಲ್ಲಿ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗದಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಿಸಲು ಪೊಲೀಸ್ ಇಲಾಖೆ ಸದಾ ಶ್ರಮಿಸುತ್ತಿದೆ. ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆ ಕಳ್ಳತನ ಪ್ರಕರಣ ವರದಿಯಾಗಿವೆ. ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದೆ. ರಾತ್ರಿವೇಳೆ ಅನುಮಾನಾಸ್ಪದವಾಗಿ ಓಡಾಡುವವರನ್ನು ವಿಚಾರಿಸಲಾಗುತ್ತಿದೆ. ಸಿಸಿ ಕ್ಯಾಮೆರಾ ಹಾಕಲಾಗಿದೆ. ಡಿವೈಎಸ್‌ಪಿ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾ ಅಳವಡಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಂಪರ್ಕಿಸಲಾಗಿದೆ ಎಂದು ಹೇಳಿದರು.ಪ್ರಕರಣ ಭೇದಿಸುವ ಕಾರ್ಯಚರಣೆಯಲ್ಲಿ ಭಾಗಿಯಾದ ಪಿಎಸ್‍ಐ ಅಪರಾಧ ವಿಭಾಗದ ಆರ್. ಶ್ರೀನಿವಾಸನ್, ಪಿಎಸ್‍ಐ ತಿಮ್ಮಪ್ಪ, ಸಿಬ್ಬಂದಿಗಳಾದ ಪಾಲಾಕ್ಷ ನಾಯ್ಕ್, ಚಂದ್ರಾ ನಾಯ್ಕ, ಹೇಮಂತ್ ಕುಮಾರ್, ಪುನೀತ್, ಎಂ. ಚಂದ್ರಾನಾಯಕ್, ಮನೋಹರ್, ನಿತಿನ್, ಸುಮಿತ್ರಾಬಾಯಿ ಅವರನ್ನು ಅಭಿನಂದಿಸಲಾಯಿತು.
ಹೆಚ್ಚುವರಿ ಎಸ್‌ಪಿ ಅನಿಲಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ಬಾಲರಾಜ್, ಇನ್‌ಸ್ಪೆಕ್ಟರ್ ರವಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್, ತಿಮ್ಮಪ್ಪ ಮತ್ತಿತರಿದ್ದರು.- - - ಟಾಪ್ ಕೋಟ್ ಭದ್ರಾವತಿ ಘಟನೆಗೆ ಸಂಬಂಧಿಸಿದಂತೆ ಎರಡು ಎಫ್‍ಐಆರ್ ದಾಖಲಾಗಿದ್ದು, ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಗಾಯಾಳು ಗೋಕುಲ್ ಕೃಷ್ಣ ವಿರುದ್ಧವೂ ಒಂದು ಕೇಸ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ
- ಜಿ.ಕೆ.ಮಿಥುನ್‌ಕುಮಾರ್, ಎಸ್‌ಪಿ- - -
-12ಎಸ್‌ಎಂಜಿಕೆಪಿ06:ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ ಬೈಕ್ ಕಳವು ಆರೋಪಿಯಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು. ಎಸ್‌ಪಿ ಮಿಥುನ್‌ಕುಮಾರ್ ಇನ್ನಿತರ ಅಧಿಕಾರಿಗಳು-ಸಿಬ್ಬಂದಿ ಇದ್ದಾರೆ.