ನೀರಿಲ್ಲದ ಒಣಗುತ್ತಿರುವ ಬತ್ತ: ಆತಂಕ

| Published : Sep 19 2024, 01:54 AM IST

ಸಾರಾಂಶ

ಉಪಕಾಲುವೆಗಳಿಗೆ ನಿಗದಿಪಡಿಸಿದಂತೆ ನಿಯಮಾನುಸಾರ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತರು ಎಡದಂಡೆ ನಾಲೆಯ ೩೧ನೇ ವಿತರಣಾ ಕಾಲುವೆ ಉಪವಿಭಾಗ ಕಚೇರಿಗೆ ಬುಧವಾರ ತೆರಳಿ ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆ ತೆಗೆದುಕೊಂಡರು.

ಸಮರ್ಪಕ ನೀರು ಪೂರೈಕೆಗೆ ಒತ್ತಾಯ । 31ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೆಳಭಾಗದಲ್ಲಿ ನೀರಿನ ಕೊರತೆ

ಕನ್ನಡಪ್ರಭ ವಾರ್ತೆ ಕಾರಟಗಿ

ಉಪಕಾಲುವೆಗಳಿಗೆ ನಿಗದಿಪಡಿಸಿದಂತೆ ನಿಯಮಾನುಸಾರ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ರೈತರು ಎಡದಂಡೆ ನಾಲೆಯ ೩೧ನೇ ವಿತರಣಾ ಕಾಲುವೆ ಉಪವಿಭಾಗ ಕಚೇರಿಗೆ ಬುಧವಾರ ತೆರಳಿ ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನು ತರಾಟೆ ತೆಗೆದುಕೊಂಡರು.

ಸಮೃದ್ಧಿ ಮಳೆಯಿಂದ ತುಂಗಾಭದ್ರಾ ಜಲಾಶಯ ಭರ್ತಿಯಾಗಿದ್ದು, ಈ ನಡುವೆ ತುಂಗಭದ್ರಾ ಎಡದಂಡೆ ನಾಲೆಯ ೩೧ನೇ ವಿತರಣಾ ಕಾಲುವೆ ವ್ಯಾಪ್ತಿಯ ಉಪಕಾಲುವೆಗಳಿಗೆ ನೀರಿನ ಕೊರತೆ ಉಂಟಾಗಿದೆ. ಇದರಿಂದ ರೈತ ಸಮೂಹ ಆತಂಕಕ್ಕೊಳಗಾಗಿದೆ.

ಧರಣಿ ಎಚ್ಚರಿಕೆ:

ನಮ್ಮ ಪಾಲಿನ ನೀರು ಪೂರೈಕೆ ಮಾಡಿ ಸಾವಿರಾರು ಎಕರೆ ಪ್ರದೇಶದಲ್ಲಿನ ಬತ್ತದ ಬೆಳೆ ಒಣಗುತ್ತಿವೆ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ಮತ್ತು ನೀರುಗಳ್ಳತನವನ್ನು ತಡೆಹಿಡಿಯಬೇಕು. ಎರಡು ದಿನಗಳಲ್ಲಿ ೩೧/೩ರ ೨ನೇ ಉಪಕಾಲುವೆಗೆ ಸಮರ್ಪಕ ನೀರು ಬಿಡುಗಡೆ ಮಾಡದಿದ್ದರೆ, ಸೆ. ೨೦ರಂದು ಉಪವಿಭಾಗ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಧರಣಿ ನಡೆಸುವುದಾಗಿ ಉಪಕಾಲುವೆ ವ್ಯಾಪ್ತಿಯ ಕಿಂದಿಕ್ಯಾಂಪ್, ಯರಡೋಣಾ, ಈಳಿಗನೂರು, ಉಳೇನೂರು ಗ್ರಾಮಗಳ ನೂರಾರು ರೈತರು ಎಚ್ಚರಿಕೆ ನೀಡಿದ್ದಾರೆ.

ಕಳೆದ ೧೫ ದಿನಗಳಿಂದ ನೀರಿಲ್ಲದೆ ಕಾಲುವೆ ಸಂಪೂರ್ಣ ಒಣಗಿ ಹೋಗಿದೆ. ಪರಿಸ್ಥಿತಿ ಹೀಗಿದ್ದರೆ ನಮ್ಮ ಬೆಳೆಗಳ ಗತಿ ಏನಾಗಬೇಕು?, ಗದ್ದೆಗಳಿಗೆ ನೀರಿಲ್ಲ, ಹಾಕಿದ ಗೊಬ್ಬರ ನೀರಿನಲ್ಲಿ ಕರಗಿ ಬೆಳೆಗಳಿಗೆ ಅನುಕೂಲವಾಗುತ್ತದೆ. ಆದರೆ, ಹಾಕಿದ ಗೊಬ್ಬರ ನೆಲದಲ್ಲಿ ಕಾಳು ಕಾಳಾಗಿ ಉಳಿದಿದೆ. ಬೆಳೆ ನಷ್ಟವಾದರೆ ಇದಕ್ಕೆ ಹೊಣೆಯಾರೆಂದು ರೈತರು ಪ್ರಶ್ನಿಸಿದರು.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ. ಸತ್ಯನಾರಾಯಣ ಮಾತನಾಡಿ, ೩೧/೩ರ ೨ನೇ ಉಪಕಾಲುವೆಯಲಿ ಒಟ್ಟು ೯೨೦ ಅಧಿಕೃತ ನೀರಾವರಿ ಪ್ರದೇಶವಿದೆ. ಅಕ್ರಮ ಪೈಪ್‌ಲೈನ್‌ಗಳು ಜಾಸ್ತಿಯಾಗಿವೆ. ಅಧಿಕೃತ ನೀರಾವರಿಯಲ್ಲಿ ಬೆಳೆಗಳಿಗೆ ನೀರಿಲ್ಲದೆ ಒಣಗಿದರೆ ಅನಧಿಕೃತ ಹೊಲಗಳಿಗೆ ಸಮೃದ್ಧಿ ನೀರು ತಲುಪುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಅಸಲಿಗೆ ಏನೂ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಹಕ್ಕು ಹೋರಾಟಗಾರ ಶಿವನಾರಾಯಣ ಮಾತನಾಡಿದರು.

ಈ ವೇಳೆ ಫಸಲು ಗಣಪತಿ, ಶರಣಯ್ಯಸ್ವಾಮಿ ಯರಡೋಣಾ, ಸೋಮಪ್ಪ, ಪಿ. ಶರಣಪ್ಪ, ಬಾಲಪ್ಪ, ವಿ. ರವಿ, ಎಸ್. ಸ್ಯಾಮವೇಲು, ದೊಡ್ಡನಗೌಡ, ವೆಂಕ ವೀರರಾಜು, ರುದ್ರಮೂರ್ತಿ ಸೇರಿದಂತೆ ಇತರ ಗ್ರಾಮಗಳ ರೈತರಿದ್ದರು.ಪಿಐ ಭರವಸೆ:

ಬಳಿಕ ಪೊಲೀಸ್ ಠಾಣೆಗೆ ತೆರಳಿದ ರೈತರು ಪಿಐ ಸುಧೀರ್ ಬೆಂಕಿಗೆ ಮನವಿ ಸಲ್ಲಿಸಿದರು. ನಂತರ ಠಾಣೆಗೆ ನೀರಾವರಿ ಎಂಜಿನಿಯರ್ ಅವರನ್ನು ಕರೆಯಿಸಿ ಚರ್ಚಿಸಿದರು. ರೈತರಿಗೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ಪೊಲೀಸರನ್ನು ರಕ್ಷಣೆಗೆ ಕಳುಹಿಸುವ ಮೂಲಕ ಅಕ್ರಮ ಪೈಪ್‌ಗಳನ್ನು ಕಿತ್ತು ಹಾಕುವುದಾಗಿ ಪಿಐ ಭರವಸೆ ನೀಡಿದರು.

ಈ ವೇಳೆ ರೈತರಿಗೆ ಸಮಜಾಯಿಸಿ ನೀಡಿದ ಎಂಜಿನಿಯರ್ ನಾಗಪ್ಪ, ಅಕ್ರಮ ಪೈಪ್‌ಲೈನ್‌ ತೆಗೆದು ಹಾಕಿದರೆ ಮತ್ತೇ ಮತ್ತೇ ಹಾಕುತ್ತಾರೆ, ಕಳೆದ ವರ್ಷ ಒಟ್ಟು ೧೨ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇನ್ನು ಎರಡು ದಿನಗಳಲ್ಲಿ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದರು.